ಸಾರಾಂಶ
ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗಿದ್ದ ಕಾಲ್ತುಳಿತದ ಸಾವು ಪ್ರಕರಣಗಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿರುವ ವರದಿ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಬೆಂಗಳೂರು : ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗಿದ್ದ ಕಾಲ್ತುಳಿತದ ಸಾವು ಪ್ರಕರಣಗಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿರುವ ವರದಿ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಏಕ ಸದಸ್ಯ ವಿಚಾರಣಾ ಆಯೋಗವು ಸಲ್ಲಿಸಿರುವ ವರದಿಯನ್ನು ಕಳೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿತ್ತು. ವರದಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ, ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಗಳ ಬೇಜವಾಬ್ದಾರಿತನದಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಹಾಗೂ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಈ ಸಂಬಂಧ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾ.ಕುನ್ಹಾ ವರದಿಯಲ್ಲಿ ಏನಿದೆ?:
ವಿಚಾರಣಾ ಆಯೋಗದ ವರದಿಯಲ್ಲಿ ಕಾಲ್ತುಳಿತಕ್ಕೆ ಕಾರಣ, ಅದಕ್ಕೆ ಕಾರಣಕರ್ತರಾದವರ ಕುರಿತಂತೆ ವಿವರಗಳನ್ನು ನೀಡಲಾಗಿದೆ. ಒಟ್ಟು ಏಳು ಅಂಶಗಳ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ, ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಬೇಜವಾಬ್ದಾರಿತನದಿಂದಲೇ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಲಾಗಿದೆ.
ಯಾವುದೇ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆಗೂ ಏಳು ದಿನಗಳ ಮುಂಚಿತವಾಗಿ ಸ್ಥಳೀಯ ಪೊಲೀಸರು ಸೇರಿದಂತೆ ಇನ್ನಿತರ ಪ್ರಾಧಿಕಾರದೊಂದಿಗೆ ಅನುಮತಿ ಪಡೆಯಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣ, ಅತ್ಯಧಿಕ ಸಂಖ್ಯೆಯ ಜನರು ಸೇರಿದಾಗ ನಿರ್ವಹಿಸುವಂತಹ ಪರಿಸ್ಥಿತಿಯಲ್ಲಿಲ್ಲ. ಆಯೋಜಕರು ಸರಿಯಾದ ಸಮಯದಲ್ಲಿ ಕ್ರೀಡಾಂಗಣದೊಳಗೆ ಜನರ ಪ್ರವೇಶಕ್ಕೆ ಅನುಮತಿಸದೆ, ಕ್ರೀಡಾಂಗಣದ ಹೊರಭಾಗದಲ್ಲಿಯೇ ನಿಲ್ಲುವಂತೆ ಮಾಡಿದ್ದಾರೆ. ಇದು ಕೂಡ ಕಾಲ್ತುಳಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದೇ ವೇಳೆ ವರದಿಯಲ್ಲಿ ಪೊಲೀಸರ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭದ್ರತೆ ನೀಡುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಪೊಲೀಸರು ಭದ್ರತೆ ಒದಗಿಸುವುದಕ್ಕಿಂತ ಆಯೋಜಕರಂತೆ ವರ್ತಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಲ್ಲದೆ, ದುರ್ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಶಂಕರ್, ಮಾಜಿ ಖಜಾಂಚಿ ಜೈರಾಮ್, ಆರ್‌ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ವೆಂಕಟರ್ ವರ್ಧನ್, ಉಪಾಧ್ಯಕ್ಷ ಸುನೀಲ್ ಮಾಥುರ್, ಎಡಿಜಿಪಿ ಬಿ. ದಯಾನಂದ್, ಐಜಿ ವಿಕಾಸ್ ಕುಮಾರ್ ವಿಕಾಸ್, ಡಿಸಿಪಿ ಶೇಖರ್ ಎಚ್.ತೆಕ್ಕಣ್ಣನವರ್, ಎಸಿಪಿ ಸಿ.ಬಾಲಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಬಗ್ಗೆ ಸಂಪುಟದಲ್ಲಿ ಯಾವ ತೀರ್ಮಾನ ಆಗಲಿದೆ ಎಂಬುದು ಕುತೂಹಲ ಮೂಡಿಸಿದೆ.