ಸಾರಾಂಶ
ಹಾವೇರಿ: ಪ್ರಸ್ತುತ ದಿನಗಳಲ್ಲಿ ನಿತ್ಯದ ವ್ಯಾಪಾರ ವಹಿವಾಟಿನಲ್ಲಿ ಮೋಸ, ವಂಚನೆ ಹೆಚ್ಚಾಗಿ ಕಂಡುಬರುತ್ತಿದ್ದು, ಗ್ರಾಹಕರು ಜಾಗರೂಕತೆಯಿಂದ ವ್ಯವಹಾರ ಮಾಡಬೇಕು ಹಾಗೂ ಯಾರೂ ಮೋಸಹೋಗಬಾರದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಲ್.ನಾಗರಾಜ ಹೇಳಿದರು.ನಗರದ ಜಿ.ಎಚ್.ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಆಹಾರ ಮತ್ತು ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಚೈತನ್ಯ ಸಂಸ್ಥೆ ಜಿಲ್ಲಾ ಮಾಹಿತಿ ಕೇಂದ್ರ ಹಾಗೂ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ಗ್ರಾಹಕರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಾರ್ವಜನಿಕರು ವಸ್ತುಗಳ ಗುಣಮಟ್ಟ, ವಾರಂಟಿ, ಗ್ಯಾರಂಟಿ ಕುರಿತು ಪರಿಶೀಲಿಸಿ ಖರೀದಿಸಬೇಕು. ಖರೀದಿ ವಸ್ತುವಿಗೆ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು. ಒಂದು ವೇಳೆ ವಸ್ತುಗಳಲ್ಲಿ ಲೋಪದೋಷ ಕಂಡುಬಂದಲ್ಲಿ ವಸ್ತುಗಳ ಬದಲಾವಣೆ ಹಾಗೂ ಪರಿಹಾರ ಪಡೆಯಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್.ಮುತಾಲಿಕದೇಸಾಯಿ ಅವರು ಮಾತನಾಡಿ, ವಸ್ತುಗಳ ಖರೀದಿ ಹಾಗೂ ವ್ಯವಹಾರದಲ್ಲಿ ಮೋಸ ಅಥವಾ ವಂಚನೆಗೆ ಒಳಗಾಗದಲ್ಲಿ ತಕ್ಷಣವೇ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರು ನೀಡಬೇಕು. ಕಾನೂನಿನ ನೆರವಿಗಾಗಿ ಟೋಲ್ ಫ್ರೀ ಸಂಖ್ಯೆ ೧೫೧೦೦ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸಬಹುದೆಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಈಶ್ವರಪ್ಪ ಬಿ.ಎಸ್. ಮಾತನಾಡಿ, ಒಂದು ವಸ್ತು ಅಥವಾ ಸೇವೆಯನ್ನು ಹಣ ಕೊಟ್ಟು ಪಡೆಯುವ ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ವಸ್ತುಗಳನ್ನು ಖರೀದಿಸುವಾಗ ಆತುರಮಾಡದೇ ಯೋಚನೆಮಾಡಿ ಖರೀದಿಸಬೇಕು. ದೈನಂದಿನ ವ್ಯವಹಾರದಲ್ಲಿ ಖರೀದಿಸಿದ ವಸ್ತುಗಳಲ್ಲಿ ನ್ಯೂನ್ಯತೆ ಅಥವಾ ದೋಷಗಳು ಕಂಡುಬಂದಲ್ಲಿ ಖರೀದಿಸಿದ ರಸೀದಿಯೊಂದಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ ಪರಿಹಾರವನ್ನು ಪಡೆಯಬಹುದು ಎಂದು ಹೇಳಿದರು.ಆನ್‌ಲೈನ್ ಸೇವೆಯಲ್ಲಿ ಲೋಪಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಖರೀದಿಸಿದ ವಸ್ತುಗಳ ರಸೀದಿ, ವಾರಂಟಿ ಹಾಗೂ ಗ್ಯಾರಂಟಿ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಅಂದಾಗ ಮಾತ್ರ ಮಾರಾಟಗಾರರ ವಿರುದ್ಧ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.ಸಹಾಯಕ ಕಾನೂನು ನೆರವು ಅಭಿರಕ್ಷಣಾ ವಕೀಲ ಎನ್.ಎನ್. ಡಿಳ್ಳೆಪ್ಪನವರ ಅವರು ಗ್ರಾಹಕರ ಹಕ್ಕು ಕಾಯ್ದೆ ೨೦೧೯ರ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಉಮಾದೇವಿ ಎಸ್. ಹಿರೇಮಠ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಸಿದ್ದಪ್ಪ ಪೂಜಾರಿ ಹಾಗೂ ಎಸ್.ಎಚ್. ಮಜೀದ್ ಇತರರು ಉಪಸ್ಥಿತರಿದ್ದರು.