ಸಾರಾಂಶ
ತರಕಾರಿ ವ್ಯಾಪಾರಸ್ಥರನ್ನು ದರ ಏರಿಕೆಯ ಕುರಿತು ಮಾತಾಡಿಸಿದರೆ, ಮಳೆ ಬಂದು ಬೆಳೆ ಹಾಳಾಗಿದೆಯಂತೆ ಸರ್
ಸಂಡೂರು: ತರಕಾರಿ ಹಾಗೂ ಸೊಪ್ಪಿನ ಬೆಲೆಗಳು ಗಗನಮುಖಿಯಾಗಿವೆ. ಇದರಿಂದಾಗಿ ಪಟ್ಟಣದ ವಾರದ ಸಂತೆ ಮಾರುಕಟ್ಟೆಯಲ್ಲಿ ಖರೀದಿಗೆಂದು ಆಗಮಿಸಿದ್ದ ಗ್ರಾಹಕರು ತರಕಾರಿ, ತೊಪ್ಪಿನ ಬೆಲೆ ಕೇಳಿ ಹೌಹಾರಿದ್ದು ಕಂಡು ಬಂದಿತು.
ಕೆಜಿ ಹಸಿ ಮೆಣಸಿನಕಾಯಿ ₹೧೦೦-೧೨೦, ಟೊಮೇಟೊ ₹೮೦, ಆಲೂಗಡ್ಡೆ ₹೬೦, ಹೀರೆಕಾಯಿ ₹೧೨೦, ಹಾಗಲಕಾಯಿ ₹೧೨೦, ಚೌಳೇಕಾಯಿ ₹೧೦೦-೧೨೦, ಕ್ಯಾರೆಟ್ ₹೮೦, ಕೊತ್ತಂಬರಿ ಸೊಪ್ಪು ಒಂದು ಸಿವುಡಿಗೆ ₹೧೫, ಮೂರಕ್ಕೆ ₹೫೦, ಪುದಿನ ₹೧೫, ಮೆಂತೆ, ಪಾಲಕ್ ಮುಂತಾದವು ಒಂದು ಸಿವುಡಿಗೆ ₹೧೦, ಈರುಳ್ಳಿ ಮಾತ್ರ ಕೆಜಿಗೆ ₹೨೦ರ ಆಸುಪಾಸಿನಲ್ಲಿತ್ತು.ಮಳೆ ಕಾರಣ: ತರಕಾರಿ ವ್ಯಾಪಾರಸ್ಥರನ್ನು ದರ ಏರಿಕೆಯ ಕುರಿತು ಮಾತಾಡಿಸಿದರೆ, ಮಳೆ ಬಂದು ಬೆಳೆ ಹಾಳಾಗಿದೆಯಂತೆ ಸರ್. ನಾವೇ ಹೆಚ್ಚಿನ ರೇಟಿಗೆ ಖರೀದಿಸಿದ್ದೇವೆ. ಹಾಗಾಗಿ ದರ ಹೆಚ್ಚಿದೆ. ಹೇಗೆ ಮಾರಾಟ ಮಾಡಬೇಕು? ಹಾಕಿದ ಬಂಡವಾಳ ತೆಗೆಯಬೇಕಲ್ವೇ? ನೀವೇ ಹೇಳಿ. ನಮಗೆ ಬೇರೆ ಆಯ್ಕೆಯೇ ಇಲ್ಲ. ಗಿಟ್ಟಿದ ದರಕ್ಕೆ ಮಾರಾಟ ಮಾಡುತ್ತಿದ್ದೇವೆ. ಕೆಜಿಗಟ್ಟಲೇ ತರಕಾರಿ ಖರೀದಿಸುತ್ತಿದ್ದವರು ಈಗ ದರ ಕೇಳಿ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ ಎನ್ನುತ್ತಾರೆ ತರಕಾರಿ ಮಾರಾಟಗಾರರು.
ಬೇಸಿಗೆಯಲ್ಲಿಯೇ ತರಕಾರಿ ದರ ಕಡಿಮೆ ಇತ್ತು. ಮಳೆ ಬಂದ ಮೇಲೆ ತರಕಾರಿ ಮತ್ತು ಸೊಪ್ಪಿನ ದರಗಳು ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿವೆ. ಮುಂದಿನ ದಿನಗಳಲ್ಲಿ ತರಕಾರಿ ಹಾಗೂ ಸೊಪ್ಪಿನ ಬೆಲೆಗಳು ಮತ್ತಷ್ಟು ಏರಿಕೆ ಸಾಧ್ಯತೆ ಇದೆ.