ಮಾರಿಕಾಂಬಾ ಜಾತ್ರೆ ರಥ ನಿರ್ಮಾಣಕ್ಕೆ ತಾರೆ ಜಾತಿ ಮರ ಕಡಿತ

| Published : Mar 10 2024, 01:46 AM IST

ಮಾರಿಕಾಂಬಾ ಜಾತ್ರೆ ರಥ ನಿರ್ಮಾಣಕ್ಕೆ ತಾರೆ ಜಾತಿ ಮರ ಕಡಿತ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿ ಮಾರಿಕಾಂಬಾ ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ರಥೋತ್ಸವದ ರಥ ನಿರ್ಮಾಣಕ್ಕಾಗಿ ಅಗತ್ಯ ತಾರೆ ಜಾತಿಯ ಮರ ಪೂಜಿಸಿ, ಕಡಿಯುವ ಪರಂಪರಾಗತ ಆಚರಣೆ ನಾಲ್ಕನೇ ಹೊರಬೀಡಿನ ದಿನವಾದ ಶುಕ್ರವಾರ ಬೆಳಗ್ಗೆ ನಡೆಯಿತು.

ಶಿರಸಿ:

ನಗರದ ಮಾರಿಕಾಂಬಾ ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ರಥೋತ್ಸವದ ರಥ ನಿರ್ಮಾಣಕ್ಕಾಗಿ ಅಗತ್ಯ ತಾರೆ ಜಾತಿಯ ಮರ ಪೂಜಿಸಿ, ಕಡಿಯುವ ಪರಂಪರಾಗತ ಆಚರಣೆ ನಾಲ್ಕನೇ ಹೊರಬೀಡಿನ ದಿನವಾದ ಶುಕ್ರವಾರ ಬೆಳಗ್ಗೆ ನಡೆಯಿತು.

ದೇವಸ್ಥಾನದಿಂದ ಸಾಂಪ್ರದಾಯಿಕ ವಿಧಾನದಂತೆ ಬಾಬದಾರ ಕುಟುಂಬದವರು, ಧರ್ಮದರ್ಶಿ ಮಂಡಳಿಯ ಸದಸ್ಯರು, ಪಾರುಪತ್ಯಗಾರರು, ನೌಕರರು ಶ್ರೀದೇವಿಯ ರಥದ ನಿರ್ಮಾಣಕ್ಕಾಗಿ ಮರ ಕಡಿಯಲು ಈ ಮೊದಲೇ ನಿಗದಿಪಡಿಸಿದ ನಾಲ್ಕನೇ ಹೊರಬೀಡಿನ ಶುಕ್ರವಾರದ ಮಧ್ಯಾಹ್ನ ೧೨.೨೩ರಿಂದ ೧೨.೨೭ ಗಂಟೆಯ ಮುಹೂರ್ತದ ಸಮಯದಲ್ಲಿ ಬಿಕ್ನಳ್ಳಿಯಲ್ಲಿ ಪ್ರದೀಪ ಬಂಗಾರೇಶ್ವರ ಗೌಡ ಅವರಿಗೆ ಸೇರಿದ ಮಾಲ್ಕಿ ಜಮೀನಿನಲ್ಲಿನ ಶ್ರೀದೇವಿಯ ರಥ ನಿರ್ಮಾಣಕ್ಕಾಗಿ ನಿಗದಿಪಡಿಸಿದ ತಾರೆ ಮರ, ಕಡಿಯಲು ಬಳಸುವ ಉಪಕರಣಗಳೊಡನೆ ವಿಧ್ಯುಕ್ತವಾಗಿ ಪೂಜಾರಿ ಬಾಬದಾರ ಕುಟುಂಬದ ನೇತೃತ್ವದಲ್ಲಿ ಪೂಜಿಸಿ, ಪ್ರಾರ್ಥಿಸಿದರು.ಪೂಜೆಯ ನಂತರ ಬಡಗಿ ಬಾಬದಾರ ಕುಟುಂಬದವರು ತಾರೆ ಮರಕ್ಕೆ ಪ್ರಥಮ ಕಚ್ಚು ಹಾಕಿ ಕಡಿಯುವ ಸಾಂಪ್ರದಾಯಿಕ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಆಚಾರಿ ಬಾಬದಾರರು, ರೈತ ಬಾಬದಾರರು ಮರ ಕಡಿಯುವ ಸಂಪ್ರದಾಯಿಕ ವಿಧಿ ನೆರವೇರಿಸಿದರು. ಅವರು ನಂತರ ಇತರ ಬಾಬದಾರರ ಕುಟುಂಬದ ಸದಸ್ಯರು ಮರಕ್ಕೆ ಕಚ್ಚು ಹಾಕುವ ಸಂಪ್ರದಾಯ ನೆರವೇರಿಸಿದರು. ತದನಂತರ ಬಡಗಿ ಮತ್ತು ರೈತ ಬಾಬದಾರ ಕುಟುಂಬದವರು ಮರ ಕಡಿಯುವ ಕಾರ್ಯ ಕೈಗೊಂಡರು.ಶ್ರೀದೇವಿಯ ಮೂರ್ತಿ ನಿರ್ಮಾಣ ಮತ್ತು ರಥ ನಿರ್ಮಿಸಲು ತಾರೆ ಮರ ಬಳಸಲಾಗುತ್ತಿದ್ದು, ಬಾಬದಾರ ಕುಟುಂಬದವರು ಈ ಮರಕ್ಕೆ ಕಚ್ಚು ಹಾಕಿ, ಕಡಿದ ನಂತರ ಸಂಪ್ರದಾಯದಂತೆ ಪೂರ್ವ ದಿಕ್ಕಿಗೇ ಮರವು ನೆಲಕ್ಕೆ ಬೀಳುವಂತೆ ಮರ ಕಡಿಯುವ ಕಾರ್ಯ ನೆರವೇರಿಸಿದರು. ರಥದ ಹಲಗೆಗಳ ನಿರ್ಮಾಣಕ್ಕಾಗಿ ತಾರೆ ಮರ ಬಳಸುತ್ತಾರೆ. ಈ ವೇಳೆ ಶ್ರೀದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಬಾಬದಾರ ಪ್ರಮುಖರು, ಬಾಬದಾರರು, ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.