ಸಾರಾಂಶ
- ಕಾವೇರಿ ಸಮಿತಿ ಆದೇಶ ಎತ್ತಿಹಿಡಿದ ಪ್ರಾಧಿಕಾರ
- ರಾಜ್ಯದ ವಾದಕ್ಕೆ ಸಿಗದ ಮನ್ನಣೆ: ಮತ್ತೆ ಹಿನ್ನಡೆ----ಕಾವೇರಿದ ವಾಗ್ವಾದ- ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳ ನಡುವೆ ಕಾವೇರಿದ ವಾಗ್ವಾದ- ನಮಗೆ 12 ಟಿಎಂಸಿ ನೀರು ಬರೋದು ಬಾಕಿಯಿದೆ, ನಿತ್ಯ 12500 ಕ್ಯುಸೆಕ್ ನೀರು ಬಿಡಿ: ತಮಿಳ್ನಾಡು- ಈಗ ನಮ್ಮಲ್ಲೇ ನೀರಿಲ್ಲ, ಈ ಜಲ ವರ್ಷ ಮುಗಿದ ಮೇಲೆ 12 ಟಿಎಂಸಿ ಬಾಕಿ ನೋಡೋಣ: ಕರ್ನಾಟಕ----ಕನ್ನಡಪ್ರಭ ವಾರ್ತೆ ನವದೆಹಲಿತಮಿಳುನಾಡಿಗೆ ನಿತ್ಯ ಮೂರು ಸಾವಿರ ಕ್ಯುಸೆಕ್ ನೀರು ಹರಿಸಬೇಕೆನ್ನುವ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್‌ಸಿ) ಆದೇಶವನ್ನು ಶುಕ್ರವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಕೂಡ ಎತ್ತಿ ಹಿಡಿದಿದೆ. ಈ ಮೂಲಕ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾದಂತಾಗಿದೆ.ಸೆ.28ರಿಂದ ಅ.15ರ ವರೆಗೆ ತಮಿಳುನಾಡಿಗೆ ನಿತ್ಯ ಮೂರು ಸಾವಿರ ಕ್ಯುಸೆಕ್ ನೀರು ಹರಿಸಿ ಎಂದು ಸಿಡಬ್ಲ್ಯುಆರ್‌ಸಿ ಮೂರು ದಿನಗಳ ಹಿಂದೆ ನಡೆದಿದ್ದ ಸಭೆಯಲ್ಲಿ ಕರ್ನಾಟಕಕ್ಕೆ ಸೂಚಿಸಿತ್ತು. ಸಿಡಬ್ಲ್ಯುಆರ್‌ಸಿಯ ಈ ಆದೇಶವನ್ನು ಕರ್ನಾಟಕವು ದೆಹಲಿಯಲ್ಲಿ ಶುಕ್ರವಾರ ನಡೆದ ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆಯಲ್ಲಿ ಪ್ರಶ್ನಿಸಿತು. ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದೆ, ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ ಎಂದು ರಾಜ್ಯ ವಾದಿಸಿತು.ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ನೇತೃತ್ವದಲ್ಲಿ ಸುಮಾರು ಒಂದೂ ಮುಕ್ಕಾಲು ಗಂಟೆ ನಡೆದ ಸಭೆಯಲ್ಲಿ ಅಂತಿಮವಾಗಿ 3 ಸಾವಿರ ಕ್ಯುಸೆಕ್ ನೀರು ಬಿಡಬೇಕೆಂಬ ಸಿಡಬ್ಲ್ಯುಆರ್‌ಸಿ ಆದೇಶಕ್ಕೆ ಹಸಿರು ನಿಶಾನೆ ತೋರಿಸಲಾಯಿತು.ಇದೇ ವೇಳೆ ತಮಿಳುನಾಡು ತನಗೆ ಬಾಕಿ ಇರುವ 12 ಟಿಎಂಸಿ ನೀರು ಬಿಡಬೇಕು. ಅಲ್ಲದೆ, ಕರ್ನಾಟಕವು ಅ.15ರ ತನಕ ನಿತ್ಯ 12,500 ಸಾವಿರ ಕ್ಯುಸೆಕ್ ನೀರು ಬಿಡಬೇಕು ಎಂದು ಪಟ್ಟು ಹಿಡಿದು ವಾದ ಮಂಡಿಸಿತು. ಆದರೆ ಕರ್ನಾಟಕ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಉಳಿಕೆ ಬಾಕಿ 12 ಟಿಎಂಸಿ ನೀರು ವಿಚಾರವಾಗಿ ಈ ಜಲ ವರ್ಷ ಮುಗಿದ ಬಳಿಕ ನೋಡೋಣ. ನಮ್ಮ ಬಳಿ ಸದ್ಯ ನೀರೇ ಇಲ್ಲ. ಹಾಗಾಗಿ ಈಗ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕವು ಗಟ್ಟಿಧ್ವನಿಯಲ್ಲಿ ವಾದ ಮಂಡಿಸಿತು.ಸಭೆ ಕುರಿತು ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಕರ್ನಾಟಕದ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಸಂಕಷ್ಟ ಸೂತ್ರ ಸಿದ್ಧಗೊಳಿಸುವ ಸಂಬಂಧ ತಮಿಳುನಾಡಿನವರು ಆರು ತಿಂಗಳಿಂದ ಒತ್ತಡ ಹಾಕುತ್ತಿದ್ದಾರೆ. ನಾವೂ ಸಂಕಷ್ಟ ಸೂತ್ರ ಸಿದ್ಧಪಡಿಸಿದ್ದೇವೆ. ಸರ್ಕಾರದ ಜೊತೆ ಚರ್ಚೆ ಮಾಡಿ ಈ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮೇಕೆದಾಟಿಗೆ ಮತ್ತೆ ಜೀವ: ಮೊನ್ನೆ ಸುಪ್ರೀಂಕೋಟ್೯ನಲ್ಲಿ ವಾದ ಮಂಡಿಸುವ ವೇಳೆ ನ್ಯಾಯಾಧೀಶರ ಕಡೆಯಿಂದ ವ್ಯಕ್ತವಾಗಿದ್ದ ಅಭಿಪ್ರಾಯದಂತೆ ಮೇಕೆದಾಟು ಯೋಜನೆಗೆ ಶುಕ್ರವಾರದ ಸಭೆಯಲ್ಲಿ ಮತ್ತೆ ಜೀವ ಕೊಡಲಾಗಿದೆ.ಈತನಕ 12 ಬಾರಿ ಮೇಕೆದಾಟು ಯೋಜನೆ ವಿಚಾರ ಚರ್ಚೆ ಮಾಡದೆ ಮುಂದೂಡಲಾಗಿದೆ. ಸುಪ್ರೀಂಕೋರ್ಟ್ ಕೂಡ ಚರ್ಚೆ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗಾಗಿ ಶುಕ್ರವಾರದ ಸಭೆಯಲ್ಲಿ ಕರ್ನಾಟಕ ಈ ಕುರಿತು ಪ್ರಸ್ತಾಪ ಮಾಡಿದೆ. ಮುಂದಿನ ಸೋಮವಾರದ ಹೊತ್ತಿಗೆ ಈ ವಿಚಾರವಾಗಿ ಸಿಡಬ್ಲ್ಯುಎಂಎ ಮುಂದೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ರಾಕೇಶ್ ಸಿಂಗ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ತಮಿಳುನಾಡು ರಾಜ್ಯ ಹೆಚ್ಚುವರಿ ಪ್ರದೇಶದಲ್ಲಿ ಕುರುವೈ ಬೆಳೆಯನ್ನು ಸುಪ್ರೀಂಕೋಟ್೯ ಆದೇಶ ಉಲ್ಲಂಘಿಸಿ ಬೆಳೆಯುತ್ತಿರುವ ವಿಚಾರ ಕೂಡ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಕುರುವೈ ಬೆಳೆಗೆ 1.85 ಲಕ್ಷ ಎಕರೆಗೆ 32 ಟಿಎಂಸಿ ನೀರು ಬಳಸಬೇಕಿತ್ತು. ಆದರೆ ತಮಿಳುನಾಡು 65 ಟಿಎಂಸಿ ನೀರು ಬಳಸಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.ಏರುಧ್ವನಿಯಲ್ಲಿ ಮಾತು: ಸಿಡಬ್ಲ್ಯುಎಂಎ ಸಭೆಯಲ್ಲಿ ಕರ್ನಾಟಕದ ಎಸಿಎಸ್ ರಾಕೇಶ್ ಸಿಂಗ್ ಮತ್ತು ತಮಿಳುನಾಡು ಅಧಿಕಾರಿಗಳ ನಡುವೆ ಏರು ಧ್ವನಿಯಲ್ಲಿ ಮಾತುಕತೆಯೂ ನಡೆಯಿತು. ವಾಯವ್ಯ ಮಳೆ ಮಾರುತಗಳಿಂದ ನಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ತಮಿಳುನಾಡು ಅಧಿಕಾರಿಗಳು ವಾದ ಮಂದಿಟ್ಟರು. ಈ ಮಾತು ಕೇಳಿ ಕೆರಳಿದ ರಾಕೇಶ್ ಸಿಂಗ್, ವಾಯುವ್ಯ ಮಾರುತಗಳಿಂದ ಹೆಚ್ಚು ಕಡಿಮೆ 75 ಟಿಎಂಸಿ ನೀರು ಮೆಟ್ಟೂರಿಗೆ ಹರಿಯುವ ಸಾಧ್ಯತೆ ಇದೆ ಎಂದು ಅಂಕಿ-ಅಂಶಗಳ ಸಮೇತ ವಾದ ಮುಂದಿಟ್ಟರು.
ಅಲ್ಲದೆ, ಕುರುವೈ ಬೆಳೆಗೆ ಹೆಚ್ಚುವರಿ ನೀರು ಬಳಕೆ ಮಾಡಿದ್ದಕ್ಕೆ ಆಕ್ಷೇಪಿಸಿದ ಸಿಂಗ್, ಈ ಸಂಬಂಧ ಲೆಕ್ಕ ಕೊಡುವಂತೆ ಆಗ್ರಹಿಸಿದರು. ಈ ವಿಚಾರವಾಗಿ ಎರಡೂ ರಾಜ್ಯಗಳ ಅಧಿಕಾರಿಗಳ ನಡುವೆ ಕೆಲಕಾಲ ಏರುಧ್ವನಿಯಲ್ಲಿ ಮಾತುಕತೆ ನಡೆಯಿತು. ಅಂತಿಮವಾಗಿ ತಮಿಳುನಾಡು ಅಧಿಕಾರಿಗಳು ಲೆಕ್ಕ ಕೊಡುವುದಾಗಿ ಹೇಳಿದರು.