ಸೈಬರ್‌ ಅಪರಾಧ ಕೃತ್ಯಗಳ ಸಂತ್ರಸ್ತರಿಗೂ ವಯಸ್ಸಿಗೂ ಸಂಬಂಧವಿದೆಯೇ ?

| N/A | Published : Apr 11 2025, 12:38 AM IST / Updated: Apr 11 2025, 10:06 AM IST

ಸಾರಾಂಶ

ಸೈಬರ್‌ ಅಪರಾಧ ಕೃತ್ಯಗಳ ಸಂತ್ರಸ್ತರಿಗೂ ವಯಸ್ಸಿಗೂ ಸಂಬಂಧವಿದೆಯೇ? ಅಚ್ಚರಿ ಎನಿಸಿದರೂ ಸೈಬರ್‌ ಅಪರಾಧಗಳ ಕುರಿತು ರಾಜ್ಯ ಅಪರಾಧ ತನಿಖಾ ಇಲಾಖೆ(ಸಿಐಡಿ)ಯ ವಿಶ್ಲೇಷಣಾ ವರದಿಯಲ್ಲಿ ಇಂಥ ಕುತೂಹಲಕಾರಿ ಸಂಬಂಧ ಪತ್ತೆಯಾಗಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಸೈಬರ್‌ ಅಪರಾಧ ಕೃತ್ಯಗಳ ಸಂತ್ರಸ್ತರಿಗೂ ವಯಸ್ಸಿಗೂ ಸಂಬಂಧವಿದೆಯೇ? ಅಚ್ಚರಿ ಎನಿಸಿದರೂ ಸೈಬರ್‌ ಅಪರಾಧಗಳ ಕುರಿತು ರಾಜ್ಯ ಅಪರಾಧ ತನಿಖಾ ಇಲಾಖೆ(ಸಿಐಡಿ)ಯ ವಿಶ್ಲೇಷಣಾ ವರದಿಯಲ್ಲಿ ಇಂಥ ಕುತೂಹಲಕಾರಿ ಸಂಬಂಧ ಪತ್ತೆಯಾಗಿದೆ.

ಮೋಸದ ಜಾಲಕ್ಕೆ ವಯಸ್ಸಿನ ಆಧಾರದ ಮೇರೆಗೆ ಜನರನ್ನು ಬೀಳಿಸಿಕೊಂಡು ಸೈಬರ್ ಪಾತಕಿಗಳು ಲಕ್ಷ ಲಕ್ಷ ರುಪಾಯಿ ದೋಚುತ್ತಿದ್ದಾರೆ. ಒಂದೊಂದು ವಯೋಮಾನದವರು ಭಿನ್ನ ಅಪರಾಧ ಕೃತ್ಯಗಳಲ್ಲಿ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಯಾ ವಯಸ್ಸಿನವರಿಗೆ ತಕ್ಕಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿಐಡಿ ಜಾಗೃತಿ ಅಭಿಯಾನ ನಡೆಸುತ್ತಿದೆ.

ಹದಿಹರೆಯದವರಿಗೆ ಸುಲಭವಾಗಿ ಹಣ ಸಂಪಾದಿಸುವ ಆಮಿಷವೊಡ್ಡಿ, ಮಧ್ಯ ವಯಸ್ಕರಿಗೆ ಹೂಡಿಕೆ ನೆಪದಲ್ಲಿ ವಂಚಿಸಿದರೆ ಹಾಗೂ ವೃದ್ಧರಿಗೆ ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ ಸೈಬರ್ ಕ್ರಿಮಿನಲ್‌ಗಳು ಹಣ ಸುಲಿಗೆ ಮಾಡುತ್ತಿದ್ದಾರೆ.

ಪ್ರಸುತ್ತ ದರೋಡೆ, ಕೊಲೆ, ಸುಲಿಗೆ ಭೌತಿಕ ಅಪರಾಧ ಕೃತ್ಯಗಳಿಗಿಂತ ಹೆಚ್ಚು ವೈಟ್ ಕಾಲರ್‌ ಸೈಬರ್‌ ಅಪರಾಧಿಗಳ ಅಬ್ಬರ ಹೆಚ್ಚಾಗಿದೆ. ಪ್ರತಿ ದಿನ ಕನಿಷ್ಠವೆಂದರೂ ರಾಜ್ಯದಲ್ಲಿ ಸೈಬರ್‌ ಅಪರಾಧದ 100 ರಿಂದ 200 ಎಫ್‌ಐಆರ್‌ಗಳು ದಾಖಲಾಗುತ್ತಿವೆ. ದೇಶದಲ್ಲಿ ಬೆಂಗಳೂರು, ದೆಹಲಿ, ಕೋಲ್ಕತಾ, ಮುಂಬೈ ಹಾಗೂ ಕೊಚ್ಚಿ ಸೇರಿ ಮಹಾನಗರಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳಲ್ಲಿ ಶೇ.20ರಷ್ಟು ಸೈಬರ್ ಪ್ರಕರಣಗಳಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 52 ಸಾವಿರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಆರೋಪಿಗಳು ಪತ್ತೆಯಾದ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ ಎನ್ನಲಾಗಿದೆ.

ಸೈಬರ್‌ ಅಪರಾಧ ಕೃತ್ಯಗಳಲ್ಲಿ ಹೂಡಿಕೆ, ಷೇರು ಮಾರುಕಟ್ಟೆ ಮಾಹಿತಿ, ಉಡುಗೊರೆ ಹಾಗೂ ಡಿಜಿಟಲ್ ಅರೆಸ್ಟ್ ಮಾದರಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ವರದಿಯಾದ ಸೈಬರ್ ಅಪರಾಧ ಪ್ರಕರಣಗಳನ್ನು ವಿಶ್ಲೇಷಿಸಿದಾಗ ವಯಸ್ಸಿನ ಆಧಾರದ ಮೇರೆಗೆ ಸೈಬರ್ ಕೃತ್ಯಗಳು ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಆಯಾ ಪ್ರಕರಣಗಳಿಗೆ ಅನುಸಾರವಾಗಿ ವಯಸ್ಕರು, ಮಧ್ಯವಯಸ್ಕರು ಹಾಗೂ ಹಿರಿಯ ನಾಗರಿಕರು ಹೆಚ್ಚು ಬಾಧಿತರಾಗುತ್ತಿದ್ದಾರೆ ಎಂದು ಸಿಐಡಿ ಡಿಜಿಪಿ ಡಾ। ಎಂ.ಎ.ಸಲೀಂ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತೆ (ಎಐ) ಸೇರಿ ತಾಂತ್ರಿಕತೆ ಬಳಸಿಕೊಂಡು ಸೈಬರ್ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ. ಇದಕ್ಕಾಗಿ ಹೊಸ ಆ್ಯಪ್‌ಗಳನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ ಸೈಬರ್ ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಡಿಜಿಪಿ ಹೇಳಿದರು.

ಸಂತ್ರಸ್ತರ ಕುರಿತು ಸಿಐಡಿ ವಿಶ್ಲೇಷಣೆ ಹೀಗಿದೆ:

18-20 ವರ್ಷ ವಯಸ್ಸು- ಈ ವಯಸ್ಸಿನ ಸಂತ್ರಸ್ತರು ಬಹುತೇಕ ವಿದ್ಯಾರ್ಥಿಗಳು. ಸಾಮಾಜಿಕ ಜಾಲತಾಣಗಳಲ್ಲಿ ಶ್ರಮಿವಿಲ್ಲದೆ ಹಣ ಸಂಪಾದಿಸಬಹುದು ಎಂದು ನಂಬಿಸಿ ವಂಚನೆ. ಇದಕ್ಕಾಗಿ ವೆಬ್‌ಸೈಟ್‌ಗಳ ಲಿಂಕ್ ಕಳುಹಿಸಿ ಟೋಪಿ ಹಾಕುತ್ತಿದ್ದಾರೆ.

30-45 ವರ್ಷ ವಯಸ್ಸು- ಈ ವಯೋಮಾನದವರಿಗೆ ದುಡಿಯುವ ತುಡಿತ ಹೆಚ್ಚಿರುತ್ತದೆ. ಇದಕ್ಕಾಗಿ ಹಣ ಹೂಡಿಕೆ ಮಾಡಿ ಅಧಿಕ ಆದಾಯ ಗಳಿಸುವ ಕಡೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಈ ಆಸಕ್ತಿ ಬಳಸಿಕೊಳ್ಳುವ ಸೈಬರ್ ದುರುಳರು, ಷೇರು ಮಾರುಕಟ್ಟೆ, ಅಧಿಕ ಬಡ್ಡಿ ನೀಡುವ ಕಂಪನಿಗಳು ಹಾಗೂ ಕ್ರಿಪ್ಟೋ ಕರೆನ್ಸಿ ಸೇರಿ ಹೂಡಿಕೆ ಮಾಹಿತಿ ನೆಪದಲ್ಲಿ ವಂಚಿಸುತ್ತಿದ್ದಾರೆ.

50-70 ವರ್ಷ ವಯಸ್ಸು- ಈ ವಯಸ್ಸಿನವರು ದುಡಿದು ಸಂಪಾದಿಸಿದ ಹಣ ಬ್ಯಾಂಕ್‌ನಲ್ಲಿಟ್ಟಿರುತ್ತಾರೆ. ಡಿಜಿಟಲ್‌ ಅರೆಸ್ಟ್‌ನಲ್ಲಿ ಹಣ ಕಳೆದುಕೊಂಡವರ ಪೈಕಿ ಹಿರಿಯ ನಾಗರಿಕರೇ ಹೆಚ್ಚಿನವರು. ಡ್ರಗ್ಸ್ ಕೇಸ್ ಹಾಕುವುದಾಗಿ ಅಥವಾ ಅಶ್ಲೀಲ ವಿಡಿಯೋ ಮತ್ತು ಫೋಟೋಗಳಿವೆ ಎಂದು ಈ ವಯಸ್ಸಿನವರಿಗೆ ಬೆದರಿಸಿ ಸೈಬರ್ ಪಾತಕಿಗಳು ಹಣ ಸುಲಿಗೆ ಮಾಡುತ್ತಾರೆ.

ಸೈಬರ್ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅನಾಮಿಕರು ಬೆದರಿಸಿದಾಗ ತಕ್ಷಣವೇ ಪೊಲೀಸರಿಗೆ ಜನ ಮಾಹಿತಿ ಕೊಡಬೇಕು. ದಿನ ದಿನೇ ಸೈಬರ್ ವಂಚನೆ ಕೃತ್ಯಗಳು ಇಳಿಕೆ ಕಾಣುತ್ತಿವೆ ಎಂಬುದು ಗಮನಾರ್ಹ ಸಂಗತಿ.

-ಡಾ। ಎಂ.ಎ.ಸಲೀಂ, ಡಿಜಿಪಿ, ಸಿಐಡಿ.