ಸಾರಾಂಶ
ಹೊಸಪೇಟೆ : ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಶನಿವಾರ ಸೈಕಲ್ ಏರಿ ಹೊರಟ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರಿಗೆ ಹತ್ತಾರು ಸಮಸ್ಯೆಗಳ ದರ್ಶನವಾಯಿತು.
ಕುಡಿಯುವ ನೀರು, ರಸ್ತೆ ಸೇರಿ ಮೂಲಭೂತ ಸೌಕರ್ಯಗಳ ಬಗ್ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ ಅವರಿಗೆ ಸಾರ್ವಜನಿಕರು ವಾಸ್ತವ ಸ್ಥಿತಿಯ ಚಿತ್ರಣ ಬಿಚ್ಚಿಟ್ಟರು.
ಸೈಕಲ್ ಏರಿ ಪಟ್ಟಣದಲ್ಲಿ ಪ್ರದಕ್ಷಿಣೆ ಹಾಕಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಆಟೊ ನಿಲ್ದಾಣ ಮತ್ತು ಇತರೆ ಸಾರ್ವಜನಿಕ ಪ್ರದೇಶದಲ್ಲಿ ಸಾರ್ವಜನಿಕರೊಂದಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.
ಪಟ್ಟಣದಲ್ಲಿ ಮದ್ಯದ ಬಾಟಲಿ ಮತ್ತು ಪ್ಲಾಸ್ಟಿಕ್‌ಗಳನ್ನು ರಸ್ತೆ ಸೇರಿ ಎಲ್ಲೆಂದರಲ್ಲಿ ಚೆಲ್ಲಾಡಿದ್ದ ಮದ್ಯದ ಅಂಗಡಿಗಳ ಲೈಸೆನ್ಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಸ್ತೆಯಲ್ಲಿ ಪಾವಗಡ ಕುಡಿಯುವ ನೀರಿನ ಕಾಮಗಾರಿ ವೇಳೆ ಅಗೆದಿದ್ದ ಗುಂಡಿಗಳನ್ನು ಅವಧಿ ಮುಗಿದರೂ ಮುಚ್ಚಿ ರಸ್ತೆ ಸರಿಪಡಿಸದಿರುವುದಕ್ಕೆ ಗರಂ ಆದ ಡಿಸಿ, ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗಾದರನ ವಿರುದ್ಧ ಪ್ರಕರಣ ದಾಖಲಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದರು.
ಇದೇ ವೇಳೆ ಮರಿಯಮ್ಮನಹಳ್ಳಿ ಪಟ್ಟಣ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ, ಮಕ್ಕಳಿಗೆ ಕೊಡುವ ಬಿಸಿಯೂಟ ತಯಾರಿ ಬಗ್ಗೆ ಹಾಗೂ ಆಹಾರದ ಗುಣಮಟ್ಟವನ್ನು ಪರಿಶೀಲನೆ ಮಾಡಿದರು. ನಂತರ ಶಿಕ್ಷಕರೊಂದಿಗೆ ಮತ್ತು ಮಕ್ಕಳೊಂದಿಗೆ ಶೈಕ್ಷಣಿಕ ಪ್ರಗತಿ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿದರು.
ಪಟ್ಟಣದ ರೌಂಡ್ಸ್ ಮುಗಿದ ಬಳಿಕ ಅಲ್ಲಿನ ಪರಿಸ್ಥಿತಿ ಕಂಡ ಡಿಸಿ, ಪಟ್ಟಣ ಪಂಚಾಯಿತಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಪಟ್ಟಣದ 9 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸುವಂತೆ ವಾಟರ್ ಮ್ಯಾನ್‌ಗಳಿಗೆ ಕ್ಲಾಸ್ ತೆಗೆದುಕೊಂಡರು.
ಸಾರ್ವಜನಿಕರು ಫಾರಂ-3 ಸಮಸ್ಯೆ ಬಗ್ಗೆ ಗಮನಕ್ಕೆ ತಂದಾಗ ಲಭ್ಯವಿದ್ದ ದಾಖಲೆ ಪರಿಶೀಲಿಸಿ ತಕ್ಷಣವೇ ನಿಯಮಾನುಸಾರ ನಾಗರಿಕರಿಗೆ ಫಾರಂ- 3 ವಿತರಿಸಲು ಸೂಚನೆ ನೀಡಿದರು. ಸರ್ಕಾರ ನಿಮಾನುಸಾರ ಅನುಮೋದಿತವಲ್ಲದ ಲೇ-ಔಟ್‌ಗಳಿಗೆ ಬಿ-ಖಾತಾವನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹತ್ತು ದಿನದಲ್ಲಿ ಸಿಹಿ ನೀರು ಪೂರೈಕೆ:
ಮರಿಯಮ್ಮನಹಳ್ಳಿ ಪಟ್ಟಣದ ಜನತೆಗೆ ಹತ್ತು ದಿನದಲ್ಲಿ ಸಿಹಿ ನೀರು ಪೂರೈಸಲಾಗುತ್ತದೆ. ಅಮೃತ್ 2.0 ಯೋಜನೆಯಡಿ ಪಟ್ಟಣಕ್ಕೆ ನದಿ ನೀರು ಸರಬರಾಜಾಗುವ ಕಾಮಗಾರಿ ಪ್ರೆಜರ್ ಫಿಲ್ಟರ್ ಮತ್ತು ಜಾಕ್ ವಾಲ್ ಪ್ರದೇಶಕ್ಕೆ ಶಾಸಕ ನೇಮರಾಜ ನಾಯ್ಕ ಮತ್ತು ಡಿಸಿ ಭೇಟಿ ನೀಡಿ ಪರಿಶೀಲಿಸಿ, ರಥೋತ್ಸವ ಪ್ರಾರಂಭಕ್ಕೂ ಮುನ್ನವೇ ಪಟ್ಟಣದ ಎಲ್ಲಾ ಮನೆಗಳಿಗೂ ನದಿ ನೀರು ಸರಬರಾಜು ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಭಕ್ತಾಧಿಗಳ ದೇಣಿಗೆಯಿಂದ ಹೊಸದಾಗಿ ನಿರ್ಮಾಣವಾಗುತ್ತಿರುವ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ಹಾಗೂ ಶ್ರೀಆಂಜನೇಯ ಸ್ವಾಮಿ ಜೋಡಿ ರಥಗಳ ಕಾಮಗಾರಿಗಳನ್ನು ಪರಿಶೀಲಿಸಿದರು. ಮುಂಬರುವ ರಥೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಥೋತ್ಸವಕ್ಕೆ ದೀಪಾಲಂಕಾರ:
ಈ ವೇಳೆ ಶಾಸಕ ನೇಮಿರಾಜ ನಾಯ್ಕ ಮಾತನಾಡಿ, ರಥೋತ್ಸವಕ್ಕೆ ಪಟ್ಟಣಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುವುದು. ರಥೋತ್ಸವದ ನೆಪದಲ್ಲಿ ಅನಾವಶ್ಯಕ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಪಪಂ ಅವಕಾಶ ಕಲ್ಪಿಸಬಾರದು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.
ಪಪಂ ಅಧ್ಯಕ್ಷ ಹುಸೇನ್ ಬಾಷಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಮುಖ್ಯಾಧಿಕಾರಿ ಎಂ.ಖಾಜಾ, ಎಂಜಿಜನಿಯರ್ ಹನುಮಂತ, ಸದಸ್ಯರು, ಸಿಬ್ಬಂದಿ ಇದ್ದರು.