ತಂಬಾಕು ಮುಕ್ತ ಯುವ 2.0 ಅಭಿಯಾನಕ್ಕೆ ಡೀಸಿ ಡಾ.ಕುಮಾರ ಚಾಲನೆ

| Published : Sep 28 2024, 01:17 AM IST

ಸಾರಾಂಶ

ಶ್ರೀರಂಗಪಟ್ಟಣ ದಸರಾ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ತಂಬಾಕು ಮುಕ್ತ ಕಾರ್ಯಕ್ರಮವನ್ನಾಗಿಸಲು ಆ ಮೂಲಕ ಮಂಡ್ಯ ಜಿಲ್ಲೆಯನ್ನು ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ದೇಶಕ್ಕೆ ಮಾದರಿಯನ್ನಾಗಿಸಲು ನಾಗರಿಕರು ಕೈಜೋಡಿಸಬೇಕು.

ಮಂಡ್ಯ: ಯುವ ಜನರನ್ನು ತಂಬಾಕು ಮುಕ್ತರನ್ನಾಗಿಸಲು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ದೇಶಾದ್ಯಂತ ನ.23 ವರೆಗೆ 60 ದಿನಗಳ ಕಾಲ ಹಮ್ಮಿಕೊಂಡಿರುವ ತಂಬಾಕು ಮುಕ್ತ ಯುವ 2.0 ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ ಚಾಲನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಇಲಾಖೆಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ ಆ ಮೂಲಕ ಉತ್ತಮ ಯುವಜನರನ್ನು ಕಾಣುವ ಉದ್ದೇಶದಿಂದ ದೇಶಾದ್ಯಂತ ಆಯೋಜಿಸಲಾಗಿದೆ ಎಂದರು.

ತಂಬಾಕು ಮುಕ್ತ ಯುವ 2.0 ಅಭಿಯಾನದ ಅವಧಿಯಲ್ಲಿ ರಾಜ್ಯದ ಮಾರ್ಗಸೂಚಿಯಂತೆ ಜಿಲ್ಲಾದ್ಯಂತ ಪಂಚಾಯತ್ ರಾಜ್ ಇಲಾಖೆಯಿಂದ ಕನಿಷ್ಠ 20 ಗ್ರಾಮಗಳನ್ನು ಸಂಬಂಧಪಟ್ಟ ಗ್ರಾಪಂ ಮೂಲಕ ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಆರಕ್ಷಕ ಇಲಾಖೆಯಿಂದ ಪ್ರತಿ ಠಾಣೆಯಿಂದ ಪ್ರತಿವಾರ ಕನಿಷ್ಠ ಎರಡು ಬಾರಿ ಕೋಟ್ಪಾ ಕಾರ್ಯಚರಣೆ ನಡೆಸಿ ಸೆಕ್ಷನ್ 4, 5, 6ಎ, 6ಬಿ, 7, 8, 9 ಅಡಿಯಲ್ಲಿ ಪ್ರಕರಣ ದಾಖಲಿಸಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ತಾಕೀತು ಮಾಡಿದರು.

ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಶೇಕಡ ನೂರರಷ್ಟು ತಂಬಾಕು ಮುಕ್ತಗೊಳಿಸಲು ಆ ಮೂಲಕ ತಂಬಾಕು ಮುಕ್ತ ಯುವಜನರನ್ನು ನಾಡಿಗೆ ನೀಡಲು ಸೂಚಿಸುತ್ತಾ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಮಕ್ಕಳಿಗೆ ತಂಬಾಕು ಉತ್ಪನ್ನಗಳಿಂದ ಉಂಟಾಗುವ ಅನಾರೋಗ್ಯಗಳ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ನಗರಾಭಿವೃದ್ಧಿ ಇಲಾಖೆ ವತಿಯಿಂದ ತಂಬಾಕು ಮಾರಾಟ ಪರವಾನಗಿ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿ ಆದಷ್ಟು ಬೇಗ ನೂತನ ನಿಯಮಾವಳಿಗಳನ್ನು ಜಾರಿಗೊಳಿಸಿ ತಂಬಾಕು ಮಾರಾಟ ಪರವಾನಗಿಯನ್ನು ಆರಂಭಿಸುವಂತೆ ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕಸ ವಿಲೇವಾರಿ ವಾಹನಗಳ ಮೂಲಕ ಪ್ರತಿನಿತ್ಯ ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಅನಾರೋಗ್ಯಗಳ ಬಗ್ಗೆಯೂ ಕೂಡ ಜಿಂಗಲ್ಸ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಶ್ರೀರಂಗಪಟ್ಟಣ ದಸರಾ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ತಂಬಾಕು ಮುಕ್ತ ಕಾರ್ಯಕ್ರಮವನ್ನಾಗಿಸಲು ಆ ಮೂಲಕ ಮಂಡ್ಯ ಜಿಲ್ಲೆಯನ್ನು ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ದೇಶಕ್ಕೆ ಮಾದರಿಯನ್ನಾಗಿಸಲು ನಾಗರಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜು, ಡಿಎಚ್ ಒ ಡಾ.ಮೋಹನ್, ಜಿಲ್ಲಾ ಅಬಕಾರಿ ಉಪಯುಕ್ತರು, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಕುಮಾರ್, ಮಾನಸಿಕ ಕಾರ್ಯಕ್ರಮ ಅಧಿಕಾರಿ ಡಾ.ಸೋಮಶೇಖರ್, ಡಿಡಿಪಿಐ ಎಚ್. ಶಿವರಾಮೇಗೌಡ, ಜಿಲ್ಲಾ ವೈದ್ಯರ ಸಂಘದ ಅಧ್ಯಕ್ಷ ಡಾ. ಮರಿಗೌಡ, ಸಲಹೆಗಾರ ತಿಮ್ಮರಾಜು ಸೇರಿ ಅಧಿಕಾರಿಗಳು ಇದ್ದರು.