ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಹಿಂದುಳಿದ ಆಯೋಗ ಸ್ಥಾಪನೆ, ಭೂ ಸುಧಾರಣೆ ಕಾಯ್ದೆ, ಜನತಾ ನ್ಯಾಯಾಲಯ, ಜೀತ ವಿಮುಕ್ತಿ ಸೇರಿದಂತೆ ಹಲವು ಸಾಮಾಜಿಕ ಕಳಕಳಿಯ ಜನಪರ ಕಾರ್ಯಕ್ರಮಗಳನ್ನು ಜಾರಿ ತಂದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಜನಮಾನಸದಲ್ಲಿ ಸದಾ ನೆಲೆಸಿರುತ್ತಾರೆ ಎಂದು ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಶ್ಲಾಘಿಸಿದ್ದಾರೆ.ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಜಂಟಿ ಆಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಹರಿಕಾರ ದಿ.ಡಿ.ದೇವರಾಜು ಅರಸು 109ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅರಸು ಅಧಿಕಾರಾವಧಿಯಲ್ಲಿ ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಬಡತನ ನಿರ್ಮೂಲನೆ ಅವರ ಮೊದಲ ಆದ್ಯತೆ ಆಗಿತ್ತು. ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಆರ್ಥಿಕವಾಗಿ ಸಬಲರಲ್ಲದವರನ್ನು ಶೈಕ್ಷಣಿಕವಾಗಿ ಮುಂದೆ ತರಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅವಕಾಶ ವಂಚಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪ್ರೋತ್ಸಾಹಧನ, ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕ ಮಾತನಾಡಿದ ಅಹಿಂದ ಒಕ್ಕೂಟದ ಸ್ಥಾಪಕ ಹಾಗೂ ಸಹಮತ ವೇದಿಕೆ ಅಧ್ಯಕ್ಷ ಟಿ.ಪಿ.ರಮೇಶ್, ಹಿಂದುಳಿದ ವರ್ಗ, ದುರ್ಬಲ ವರ್ಗ, ಅಲ್ಪಸಂಖ್ಯಾತರ ಏಳಿಗೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ ಎಂದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಎಚ್.ಮುಸ್ತಫ ಮಾತನಾಡಿ, ರಾಜ್ಯದಲ್ಲಿ ಭೂ ಒಡೆತನ, ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆ ತಂದುಕೊಟ್ಟ ಅರಸು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದರು.
ತಮ್ಮ ರಾಜಕೀಯ ಭವಿಷ್ಯದಲ್ಲಿ ಹಲವು ಏಳುಬೀಳುಗಳನ್ನು ಕಂಡ ಅರಸು ಅವರು ತಮ್ಮ ಆಸ್ತಿಯನ್ನೆ ಮನೆಯ ಕೆಲಸದಾತನಿಗೆ ನೀಡುವ ಮೂಲಕ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ನೆನಪಿಸಿದರು.ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಸುಭಾಷ್ ನಾಣಯ್ಯ, ವಕೀಲ ಕುಂಞಬ್ದುಲ್ಲಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎಚ್.ಎಲ್.ದಿವಾಕರ್, ಅಹಿಂದ ಒಕ್ಕೂಟ ಅಧ್ಯಕ್ಷ ಟಿ.ಎಂ.ಮುದ್ದಯ್ಯ, ಸರ್ಕಾರಿ ನೋಟರಿ ಹಾಗೂ ವಕೀಲ ಬಿ.ಇ.ಜಯೇಂದ್ರ, ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಕೆ.ಎ.ಯಾಕೂಬ್ ಮತ್ತಿತರರು ಪಾಲ್ಗೊಂಡರು.
ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಎಂ.ಎಚ್.ಅಬ್ದುಲ್ ರೆಹಮನ್ ಹಾಗೂ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.ಸಹಮತ ವೇದಿಕೆಯ ರೇವತಿ ರಮೇಶ್ ಸ್ವಾಗತಿಸಿ, ಎಸ್.ಐ.ಮುನೀರ್ ಅಹಮ್ಮದ್ ನಿರೂಪಿಸಿದರು. ಪ್ರೇಮ, ವೀಣಾಕ್ಷಿ, ಪ್ರೇಮ ಕೃಷ್ಣಪ್ಪ, ಮುಬಿನಾ, ವಾಸುದೇವ್, ಶಬರೀಶ್ ಸನ್ಮಾನಿತರ ಪರಿಚಯ ಮಾಡಿದರು.
ಸನ್ಮಾನಿತರು:ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಹಾಗೂ ನಿವೃತ್ತ ಶಿಕ್ಷಕ ಎನ್.ವೀರಭದ್ರಯ್ಯ, ಸಮಾಜ ಸೇವಕ, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ರಕ್ತದಾನಿ ಹಾಗೂ ಭಾಗಮಂಡಲ ಪೊಲೀಸ್ ಇಲಾಖೆಯ ಹೆಡ್‌ಕಾನ್‌ಸ್ಟೇಬಲ್ ಬಿ.ಎಂ.ರಾಮಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ನಗರಯೋಜನಾ ಪ್ರಧಿಕಾರದ ಅಧ್ಯಕ್ಷ ಕೆ.ಎ.ಆದಂ, ಸಮಾಜ ಸೇವಕ ಹಾಗೂ ವಕೀಲ ಕೆ.ವಿ.ಸುನಿಲ್, ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷೆ ಚಳಿಯಂಡ ಕಮಲ ಉತ್ತಯ್ಯ ಮತ್ತು ಎಸ್.ಎಸ್.ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಾದ ಐಗೂರು ಸರ್ಕಾರಿ ಪ್ರೌಢಶಾಲೆಯ ಸಿ.ಬಿ.ಬೆಸಿಲ್ (ಪರವಾಗಿ ಸಹೋದರಿ), ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆ.ಆರ್.ಬಬಿತ ಅವರನ್ನು ಗೌರವಿಸಲಾಯಿತು.