ಬೆಳೆಗಾರರಿಗೆ ದಕ್ಕದ ಕಾಫಿ ದಾಖಲೆ ಬೆಲೆ: ಕರ್ನಾಟಕ ಬೆಳೆಗಾರರ ಒಕ್ಕೂಟದ ಟಿ.ಪಿ.ಸುರೇಂದ್ರ

| Published : May 02 2024, 12:19 AM IST

ಬೆಳೆಗಾರರಿಗೆ ದಕ್ಕದ ಕಾಫಿ ದಾಖಲೆ ಬೆಲೆ: ಕರ್ನಾಟಕ ಬೆಳೆಗಾರರ ಒಕ್ಕೂಟದ ಟಿ.ಪಿ.ಸುರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

೨೦೨೩-೨೪ ರ ಕಾಫಿ ಹಂಗಾಮಿನಲ್ಲಿ ದರ ಏರಿಕೆಯಾದರೂ ಬೆಳೆಗಾರರಿಗೆ ಕಾಫಿ ಬೆಲೆ ದಕ್ಕದೆ ಮರೀಚಿಕೆಯಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಟಿ.ಪಿ. ಸುರೇಂದ್ರ ಬೇಸರ ವ್ಯಕ್ತಪಡಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಮಾರುಕಟ್ಟೆ ಮೌಲ್ಯ, ಬೆಳೆಗಾರನಿಗೆ ಸಿಗುವ ಮೌಲ್ಯದಲ್ಲಿ ಶೇ.90 ಅಂತರ

ಕನ್ನಡಪ್ರಭ ವಾರ್ತೆ ಹಾಸನ

೨೦೨೩-೨೪ ರ ಕಾಫಿ ಹಂಗಾಮಿನಲ್ಲಿ ದರ ಏರಿಕೆಯಾದರೂ ಬೆಳೆಗಾರರಿಗೆ ಕಾಫಿ ಬೆಲೆ ದಕ್ಕದೆ ಮರೀಚಿಕೆಯಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಟಿ.ಪಿ. ಸುರೇಂದ್ರ ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ ‘ಗಗನಕ್ಕೇರಿದ ಕಾಫಿ ಬೆಲೆ’, ಮೊದಲಾದ ಶೀರ್ಷಿಕೆಗಳಡಿ ಬಹುತೇಕ ವರ್ಣರಂಜಿತ ವರದಿಗಳೇ ಬರುತ್ತಿರುವುದು ದುರಾದೃಷ್ಟಕರ. ಕಾಫಿ ಬೆಲೆ ಕಳೆದ ೩೦ ವರ್ಷಗಳ ಅತ್ಯಧಿಕ ಮಟ್ಟ ತಲುಪಿದ್ದು ದಾಖಲೆಗಳಲ್ಲಿ ನಮೂದು ಮಾಡಲು ಮಾತ್ರ ಸೂಕ್ತವೇ ಹೊರತು ವಾಸ್ತವ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ತೀವ್ರವಾದ ಹವಾಮಾನ ವೈಪರೀತ್ಯದ ಪರಿಣಾಮ ಕಾಫಿ ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಉತ್ಪಾದನೆ ಕುಂಠಿತವಾದ ಪ್ರಯುಕ್ತ ಕಾಫಿ ಬೆಲೆ ಏರಿಕೆ ಕಂಡಿದ್ದು ವಾಸ್ತವ’ ಎಂದು ಹೇಳಿದರು.

‘ಕಾಫಿಯ ಅಲಭ್ಯತೆ ಹಾಗೂ ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದ ಬೇಡಿಕೆ ಹಿನ್ನೆಲೆ ೨೦೨೩-೨೪ ರ ಬೆಲೆ ಏರಿಕೆ ಮಾರ್ಚ್ ತಿಂಗಳು ಹಾಗೂ ನಂತರದಲ್ಲಿ ಸರ್ವಕಾಲಿಕ ದಾಖಲೆ ಬೆಲೆಯ ಮಾರಾಟವಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಇದು ದಾಖಲೆ ಬೆಲೆ ಹೌದಾದರೂ ಇದರ ನೇರ ಫಲಾನುಭವಿ ಬೆಳೆಗಾರ ಅಲ್ಲ. ಜಾಗತಿಕ ಮಟ್ಟದಲ್ಲಿ ಭಾರತದ ಕಾಫಿಯ ಗುಣಮಟ್ಟ ಉತ್ತಮವಾಗಿದ್ದರೂ ನಮ್ಮ ಉತ್ಪಾದನೆ ಪ್ರಮಾಣ ಶೇ. ೫ ಮಾತ್ರ, ವಿಶ್ವದ ಮಾರುಕಟ್ಟೆಯ ದಿಗ್ಗಜರ ಐಸಿಯ ಗುಣಮಟ್ಟ ಉತ್ತಮವಾಗಿದ್ದರೂ ಅವರಿಂದಲೇ ನಿಯಂತ್ರಿಸಲ್ಪಡುತ್ತಿದೆ. ಜಗತ್ತಿನಾದ್ಯಂತ ಕಾಫಿ ಸೇವಿಸುವ ಗ್ರಾಹಕರು ನೀಡುವ ಮೌಲ್ಯಕ್ಕೂ ಹಾಗೂ ಶ್ರಮವಹಿಸಿ ಉತ್ತಮ ಗುಣಮಟ್ಟ ಉತ್ಪಾದಿಸುವ ಬೆಳೆಗಾರನಿಗೆ ಸಿಗುವ ದರಕ್ಕೂ ಶೇ.೯೦ ರಷ್ಟು ಅಂತರವಿದೆ. ಅಂದರೆ ಜಾಗತಿಕವಾಗಿ ಒಟ್ಟಾರೆ ಕಾಫಿ ವಹಿವಾಟಿನ ಪ್ರಮಾಣದ ಶೇ.೧೦ ಕ್ಕಿಂತಲೂ ಕಡಿಮೆ ಮೌಲ್ಯ ಬೆಳೆಗಾರನ ಕೈ ಸೇರುತ್ತಿದೆ’ ಎಂದು ವಿಷಾದಿಸಿದರು.

‘೨೦೨೪ ರಲ್ಲಿ ಲಭಿಸಿರುವ ಈ ದರ ಏರಿಕೆ ಎಂಬುದು ಬೆಳೆಗಾರರಿಗೆ ಕೇವಲ ಆಮ್ಲಜನಕದ ರೀತಿ ಸಹಾಯವಾಗಬಹುದಷ್ಟೆ. ಕಳೆದ ೩ ದಶಕದಿಂದ ಸತತವಾಗಿ ಹಲವಾರು ಸವಾಲುಗಳನ್ನು ಎದುರಿಸಿ ತೋಟಗಳನ್ನು ನಿರ್ವಹಿಸಿಕೊಂಡು ಬಂದಿದ್ದ ಬೆಳೆಗಾರರು ಕಳೆದ ಕೆಲವು ವರ್ಷಗಳಿಂದ ಬಹುತೇಕ ಭರವಸೆಯನ್ನೇ ಕಳೆದುಕೊಂಡಿದ್ದರು. ೨೦೨೩-೨೪ ರಲ್ಲಿಯೂ ಕೂಡ ನಿರೀಕ್ಷಿತ ಪ್ರಮಾಣದ ಫಸಲು ಇರಲಿಲ್ಲ. ಈ ಸಂದರ್ಭದಲ್ಲಿ ಈ ಬೆಲೆ ಏರಿಕೆ ಎಂಬುದು ಬೆಳೆಗಾರರಲ್ಲಿ ಒಂದು ಭರವಸೆ ಮೂಡಿಸುವಲ್ಲಿ ಸಹಕಾರಿಯಾಗಿದೆ ಅಷ್ಟೆ. ಈ ಬೆಲೆ ಏರಿಕೆಯಿಂದಾಗಿ ಬೆಳೆಗಾರರಿಗೆ ವೈಯಕ್ತಿಕವಾಗಿ ಹಾಗೂ ಕಾಫಿ ಉದ್ಯಮಕ್ಕೆ ಸಮಗ್ರವಾಗಿ ಯಾವುದೇ ಗಮನಾರ್ಹವಾದಂತಹ ಬದಲಾವಣೆಯಾಗಲಿ, ಪ್ರಗತಿಯಾಗಲಿ ಈವರೆವಿಗೂ ಕಂಡು ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಷ್ಟೆಲ್ಲಾ ಸಮಸ್ಯೆಗಳ ಸುಳಿಯಲ್ಲಿ ಮಲೆನಾಡಿನ ಕಾಫಿ ಬೆಳೆಗಾರರು ನಲುಗಿಹೋಗಿದ್ದರೂ ಕೂಡ ಬಹಳ ಹಿಂದಿನಿಂದಲೂ ಸರ್ಕಾರದ ನೆರವು ಅಥವಾ ಅನುದಾನಕ್ಕೆ ಕಾಯದೆ ಬಹುತೇಕ ಊರುಗಳಲ್ಲಿ ಶಾಲೆ, ಆಸ್ಪತ್ರೆ, ಸಮುದಾಯ ಭವನ ಇತ್ಯಾದಿ ಸಾರ್ವಜನಿಕರ ಉಪಯೋಗಕ್ಕೆ ಬೇಕಾಗುವ ಸವಲತ್ತುಗಳನ್ನು ಉದಾರವಾದ ಕೊಡುಗೆಗಳ ಮೂಲಕ ಸಹಕಾರಗೊಳಿಸಿದ್ದಾರೆ. ಹೀಗಿರುವಾಗ ಸಮಾಜ ಹಾಗೂ ಸರ್ಕಾರದಿಂದ ಅಥವಾ ಸರ್ಕಾರದಿಂದ ನಿರ್ದೇಶಿತವಾದ ಸಂಸ್ಥೆಗಳಿಂದ ಇನ್ನೂ ಹೆಚ್ಚಿನ ಸಹಕಾರ, ಬೆಂಬಲ, ಮಾರ್ಗದರ್ಶನ ದೊರೆತಲ್ಲಿ ಕಾಫಿ ನಾಡಿನ ಸಮಗ್ರ ಬೆಳೆಗಾರರ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್, ಗೌರವ ಕಾರ್ಯದರ್ಶಿ ಕೆ.ಬಿ.ಲೋಹಿತ್, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಖಜಾಂಚಿ ಎಂ.ಜೆ. ಸಚಿನ್ ಇದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಟಿ.ಪಿ.ಸುರೇಂದ್ರ.