ಸಾರಾಂಶ
ಭಟ್ಕಳ:ಇಲ್ಲಿನ ಮಾವಿನಕುರ್ವೆ ಬಂದರಿನ ಯುವಕ ಡೇಂಘಿ ಜ್ವರದಿಂದ ಸಾವನ್ನಪ್ಪಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿತ ಬುಧವಾರ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಿದೆ. ಜತೆಗೆ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿರುವ ಪ್ರದೇಶ ವೀಕ್ಷಿಸಿದೆ.ಮಾವಿನಕುರ್ವೆಯ ಬಂದರಿನ ಸೊಸೈಟಿ ಬಳಿ ಮತ್ತು ಬೀಚಿಗೆ ಹೋಗುವ ರಸ್ತೆಯ ಸನಿಹದಲ್ಲಿರುವ ಬಾವಿ ಬಳಿ ಶೇಖರಣೆಯಾದ ಸ್ನಾನದ ನೀರಿನಲ್ಲಿ ಸೊಳ್ಳೆಗಳು ಇರುವುದು ಮತ್ತು ಚರಂಡಿ ಅಸ್ವಚ್ಛತೆ, ಕುಡಿದ ಸಿಂಹಾಳದ ಬೊಂಡ ರಾಶಿ, ಗಟಾರದಲ್ಲಿ ಕೊಳಕು ನೀರು ಹರಿಯುತ್ತಿರುವುದನ್ನು ಕಂಡು ಗರಂ ಆದ ಸಹಾಯಕ ಆಯುಕ್ತೆ ಡಾ. ನಯನಾ, ಇಂತಹ ದುರವಸ್ಥೆಯಿಂದ ಸೊಳ್ಳೆ ಉತ್ಪತ್ತಿಯಾಗದೇ ಇರಲು ಸಾಧ್ಯವೇ ಎಂದು ಉಪಸ್ಥಿತರಿದ್ದ ಬಂದರು, ಮೀನುಗಾರಿಕೆ ಮತ್ತು ಗ್ರಾಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಒಂದು ವಾರದೊಳಗೆ ಬಂದರು ಪ್ರದೇಶ ಸ್ವಚ್ಛವಾಗಬೇಕು. ಬಾವಿ ಬಳಿ ಸ್ನಾನದ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಗೆ ಕಸ, ತ್ಯಾಜ್ಯ, ಗಿಡಕಂಟಿ ಸ್ವಚ್ಛಗೊಳಿಸಬೇಕು. ಒಂದು ವಾರದ ನಂತರ ತಾನು ಮತ್ತೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.ಬಂದರಿನ ಅವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಹಾಯಕ ಆಯುಕ್ತೆ, ಡೇಂಘಿ ಬರದಂತೆ ಮುಂಜಾಗ್ರತೆ ವಹಿಸಬೇಕಿದೆ. ಜ್ವರ ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕೇ ಹೊರತು, ಈ ಬಗ್ಗೆ ನಿರ್ಲಕ್ಷ್ಯ ಮಾಡಿ ಮಾತ್ರೆ, ಮನೆ ಔಷಧಿ ತೆಗೆದುಕೊಳ್ಳುವುದು ಅಲ್ಲ ಎಂದು ಜನರಿಗೆ ತಿಳಿಸಿದರು.ಪ್ರಜ್ವಲ್ ಖಾರ್ವಿ ಮೃತಪಟ್ಟಿರುವುದು ನಮಗೆಲ್ಲರಿಗೂ ನೋವು ತಂದಿದೆ. ಮನೆ-ಮನೆ ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ಗ್ರಾಮದ ಸ್ವಚ್ಛತೆಗೂ ಜನರ ಸಹಕಾರ ಅಗತ್ಯವಿದೆ. ಡೇಂಘಿ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯವೆಂದರು.ಬಂದರಿನಲ್ಲಿ ಫಾಗಿಂಗ್ ನಡೆಸುವುದಲ್ಲದೇ ಮನೆ-ಮನೆ ಸವೇ ಮಾಡಬೇಕು. ಜ್ವರ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಜನರಿಗೆ ಡೇಂಘಿ ಮತ್ತಿತರ ಜ್ವರದ ಬಗ್ಗೆ ಸಮರ್ಪಕ ಮಾಹಿತಿ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಹಾಯಕ ಆಯುಕ್ತರು ಸೂಚಿಸಿದರು.ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ರಮೇಶ ರಾವ್ ಮಾತನಾಡಿ, ಈಡೀಸ್ ಸೊಳ್ಳೆಯಿಂದ ಡೇಂಘಿ ಜ್ವರ ಬರುತ್ತಿದ್ದು, ನಿರ್ಲಕ್ಷ್ಯ ಮಾಡಬೇಡಿ. ಜ್ವರ, ವಿಪರೀತ ತಲೆ ನೋವು ಬಂದವರು ತಕ್ಷಣ ಆಸ್ಪತ್ರೆಗೆ ಬಂದು ರಕ್ತ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.ಈಗಾಗಲೇ ಭಟ್ಕಳ ಮತ್ತು ಮಾವಿನಕುರ್ವೆ ಬಂದರಿನಲ್ಲಿ 35 ತಂಡ ರಚಿಸಿ ಮನೆ-ಮನೆ ಸವೇ, ಜ್ವರದ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ರಕ್ತಸ್ರಾವ ಜ್ವರ ಗಂಭೀರದ್ದಾಗಿದ್ದು, ಹೀಗಾಗಿ ಯಾರೂ ಇದಕ್ಕೆ ಸ್ವಯಂ ಔಷಧಿ ತೆಗೆದುಕೊಳ್ಳಬಾರದು ಎಂದು ತಿಳಿ ಹೇಳಲಾಯಿತು.ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಮತ್ತು ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಾಲಚಂದ್ರ ಮೇಸ್ತ , ಕೆಲವೆಡೆ ನೈರ್ಮಲ್ಯದ ಸಮಸ್ಯೆಯಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದೆ ಎಂದರು.ಆರೋಗ್ಯ ಅಧಿಕಾರಿಗಳ ವಿರುದ್ಧ ದೂರು:ಉಪಸ್ಥಿತರಿದ್ದ ಮಾವಿನಕುರ್ವೆ ಗ್ರಾಪಂ ಅಧ್ಯಕ್ಷ ಸಹಾಯಕ ಆಯುಕ್ತರ ಬಳಿ, ಆರೋಗ್ಯ ಇಲಾಖೆ ಅಧಿಕಾರಿಗಳು ಪಂಚಾಯಿತಿಯೊಂದಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಮೀನುಗಾರರ ಮುಖಂಡರಾದ ರಮೇಶ ಖಾರ್ವಿ, ಪುರಂದರ ಖಾರ್ವಿ, ರಾಮಾ ಖಾರ್ವಿ ಮುಂತಾದವರು, ಬಂದರಿನಲ್ಲಿ ಸ್ವಚ್ಛತೆಯ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಕಳೆದ ಮೂರು ತಿಂಗಳಿನಿಂದ ಬಂದರಿನಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆಯಿಂದ ಸ್ವಚ್ಛತೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಸ್ನಾನಗೃಹಕ್ಕೆ ಕರಾವಳಿ ಪ್ರಾಧಿಕಾರದಿಂದ ₹ 10 ಲಕ್ಷ ಮಂಜೂರಿಯಾಗಿದ್ದರೂ ಸಹ ಇದಕ್ಕೆ ಜಾಗದ ಎನ್ ಒಸಿಯನ್ನು ಬಂದರು, ಮೀನುಗಾರಿಕೆ ಇಲಾಖೆ ಇನ್ನೂ ಕೊಟ್ಟಿಲ್ಲ ಎಂದು ದೂರಿದರು.ಬಂದರಿನಲ್ಲಿ ರಸ್ತೆ ಮೇಲೆ ಅನಧಿಕೃತ ಗೂಡಂಗಡಿ ನಿರ್ಮಿಸಿಕೊಳ್ಳಲಾಗಿದೆ. ಇದಕ್ಕೆ ಯಾರಿಂದಲೂ ಪರವಾನಗಿ ಇಲ್ಲ ಎಂದು ದೂರು ಕೇಳಿ ಬಂದಾಗ, ಸಹಾಯಕ ಆಯುಕ್ತರು ಗ್ರಾಪಂ ಪಿಡಿಒಗೆ ಒಂದು ವಾರದಲ್ಲಿ ಎಷ್ಟು ಗೂಡಂಗಡಿಗಳಿವೆ. ಇದರಲ್ಲಿ ಯಾವುದಕ್ಕೆ ಪರವಾನಗಿ ಇಲ್ಲ, ಯಾರು ತೆರಿಗೆ ಪಾವತಿಸಿಲ್ಲ ಎಂಬ ಸ್ಪಷ್ಟ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮತ್ತು ಮದ್ಯದ ಬಾಟಲಿ ಚರಂಡಿಯಲ್ಲಿ ಎಸೆಯುತ್ತಿರುವ ಬಗ್ಗೆಯೂ ಸಹಾಯಕ ಆಯುಕ್ತರ ಗಮನಕ್ಕೆ ತರಲಾಯಿತು. ತಹಸೀಲ್ದಾರ್ ತಿಪ್ಪೇಸ್ವಾಮಿ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರವಿ, ಪಿಡಿಒ ಮಂಜುನಾಥ ಗೊಂಡ, ಬಂದರು ಇಲಾಖೆಯ ಅಧಿಕಾರಿ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಸಾರ್ವಜನಿಕರಿದ್ದರು.