27 ರಿಂದ 29 ರವರೆಗೆ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆ
KannadaprabhaNewsNetwork | Published : Oct 26 2023, 01:00 AM IST
27 ರಿಂದ 29 ರವರೆಗೆ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆ
ಸಾರಾಂಶ
ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 2022-23ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡೆ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳನ್ನು 27 ರಿಂದ 29 ರವರೆಗೆ ಆಯೋಜಿಸಲಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಜಯರಾಮಯ್ಯ ತಿಳಿಸಿದರು
ಕನ್ನಡಪ್ರಭ ವಾರ್ತೆ ಮಧುಗಿರಿ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 2022-23ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡೆ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳನ್ನು 27 ರಿಂದ 29 ರವರೆಗೆ ಆಯೋಜಿಸಲಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಜಯರಾಮಯ್ಯ ತಿಳಿಸಿದರು. 27ರಂದು ಮಧ್ಯಾಹ್ನ 4-30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ , ಸಹಕಾರ ಸಚಿವ ಕೆ.ಎನ್.ರಾಜಣ್ಣ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಷಡಕ್ಷರಿ, ಜಿಲ್ಲಾಧ್ಯಕ್ಷ ನರಸಿಂಹರಾಜು ಹಾಗೂ ಸಚಿವರು, ಶಾಸಕರು ಮತ್ತು ರಾಜ್ಯದ ಎಲ್ಲ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಆನ್‌ಲೈನ್‌ಲ್ಲಿ ನೊಂದಾಯಿಸಿಕೊಂಡಿರುವ ಎಲ್ಲ ಕ್ರೀಡಾಪಟುಗಳಿಗೆ ಟ್ರ್ಯಾಕ್ ಪ್ಯಾಂಟ್, ಟೀಶರ್ಟ್ ಮತ್ತು ಕ್ಯಾಪ್ ನೀಡಲಾಗುವುದು. ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಟ್ರೋಫಿ ವಿತರಿಸಲಾಗುವುದು ಎಂದರು. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವವರು. 27ರ ಬೆಳಿಗ್ಗೆಯಿಂದ ಸಂಜೆ 4 ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕೇಂದ್ರ ಸಂಘದ ಆನ್‌ಲೈನ್ ನೋಂದಣಿ ಮಾಡಿಕೊಂಡಿರುವ ಎಲ್ಲ ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮಧುಗಿರಿ ತಾಲೂಕು ಘಟಕದ ಅಧ್ಯಕ್ಷ ಜಿ.ಜಯರಾಮಯ್ಯ ಮನವಿ ಮಾಡಿದ್ದಾರೆ.