ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಜನ್ಮದಿನ

| Published : Feb 06 2025, 12:15 AM IST

ಸಾರಾಂಶ

ಶುನಾಳ ಶರೀಫರ ನಂತರ ತಮ್ಮ ಕಾವ್ಯಗಳ ಮೂಲಕ ನಾಡು, ನುಡಿ, ಭಾವೈಕ್ಯತೆಯನ್ನು ಬಿತ್ತಿದವರು ನಿಸಾರರು

ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಸುಗಮ ಸಂಗೀತ ಪರಿಷತ್ ವತಿಯಿಂದ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಜನ್ಮ ದಿನವನ್ನು ಶಿವರಾಮಪೇಟೆಯ ಸಂಘದ ಕಚೇರಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಜನೆ ಮಾಡಿ ಸಾರ್ವಜನಿಕರುಗಳಿಗೆ ಸಿಹಿ ವಿತರಿಸುವುದರ ಮೂಲಕ ಸರಳವಾಗಿ ಆಚರಿಸಲಾಯಿತು.ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ ಮಾತನಾಡಿ, ನಿಸಾರರ ಅನೇಕ ಕವಿತೆಗಳು ಸುಗಮ ಸಂಗೀತದ ಧ್ವನಿ ಸುರುಳಿಗಳ ಮೂಲಕ ಕನ್ನಡಿಗರನ್ನು ತಲುಪಿವೆ. ಜನಪ್ರಿಯತೆ ಗಳಿಸಿರುವ ಸುಮಧುರ ಮತ್ತು ನವೋಲ್ಲಾಸ ಕನ್ನಡದ ಮೊದಲ ಜೋಡಿ ಧ್ವನಿ ಸುರುಳಿಗಳು. ಈವರೆಗೆ ಅವರ ಕವನಗಳ ಏಳು ಧ್ವನಿ ಸುರುಳಿಗಳು ಬಿಡುಗಡೆಗೊಂಡಿವೆ ಎಂದರು.ಶಿಶುನಾಳ ಶರೀಫರ ನಂತರ ತಮ್ಮ ಕಾವ್ಯಗಳ ಮೂಲಕ ನಾಡು, ನುಡಿ, ಭಾವೈಕ್ಯತೆಯನ್ನು ಬಿತ್ತಿದವರು ನಿಸಾರರು, ಯಾವುದೇ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನಿಸಾರರ ಕವಿತೆಗಳನ್ನು ಹಾಡದೆ ಪರಿಪೂರ್ಣವಾಗುವುದಿಲ್ಲ. ಇವರ ನಿತ್ಯೋತ್ಸವದಲ್ಲಿನ''''''''''''''''ಜೋಗದ ಸಿರಿ ಬೆಳಕಿನಲ್ಲಿ ಹಾಡು ತುಂಬಾ ಪ್ರಸಿದ್ಧವಾಗಿದೆ ಎಂದು ಅವರು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೊಟ್ಟ ಮೊದಲ ಭಾವಗೀತೆಗಳ ಧ್ವನಿಸುರುಳಿ ನಿತ್ಯೋತ್ಸವವನ್ನು ಹೊರತಂದು ಜನಮಾನಸದಲ್ಲಿ ನೆಲೆಯಾಗಿ ನಿಂತವರು ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡ ಮಾಡಿದವರು ನಿಸಾರರು ಎಂದರು.ಇವರ ಗೀತೆಗಳು ಕನ್ನಡದ ನಿತ್ಯೋತ್ಸವವಾಗಿದೆ. ಇವರ ಜೋಗದ ಸಿರಿ ಬೆಳಕಿನಲ್ಲಿ ಗೀತೆ ಅನಧಿಕೃತ ನಾಡಗೀತೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ತಿಳಿಸಿದರು.ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಪಿ.ಆರ್.ಒ. ಎನ್. ಬೆಟ್ಟೆಗೌಡ ಮಾತನಾಡಿ, 1974ರಲ್ಲಿ ಪ್ರಕಟವಾದ ನಿತ್ಯೋತ್ಸವ ಕವನ ಸಂಕಲನ, ನಿಸಾರ್ ರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟಿದೆ. ಇಂದು ಕೂಡ ಕನ್ನಡದ ಹಬ್ಬ ಎಲ್ಲೇ ನಡೆದರು ನಿತ್ಯೋತ್ಸವ ಕವಿತೆಯ ಗಾಯನವಿಲ್ಲದೆ ಅದು ಅಪೂರ್ಣ ಎಂದು ಹೇಳಿದರು.ನಿಸ್ಸಾರ್ ಅಹ್ಮದ್ ಅವರಿಗೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಹಾಗೂ ಇನ್ನಿತರ ಹಲವು ವಾರು ಪ್ರಶಸ್ತಿಗಳು ಸಂದಿವೆ ಎಂದರು.ಇವರ ನಿತ್ಯೋತ್ಸವ ಕವನ ಸಂಕಲದಿಂದ ನಿತ್ಯೋತ್ಸವ ಕವಿಗಳಾದರು. 2007ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಹಾಗೂ 2017 ರಲ್ಲಿ ನಡೆದ ಮೈಸೂರು ದಸರಾವನ್ನು ಚಾಮುಂಡಿ ಬೆಟ್ಟದ ಮೇಲೆ ಉದ್ಘಾಟಿಸಿದರು.ಅವರ ಕಾರ್ಯವನ್ನು ಗುರುತಿಸಿ ಕುವೆಂಪು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಮೈಸೂರು ಕೈಗಾರಿಕ ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಬಿ. ಲಿಂಗರಾಜು, ಮೈಸೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್‌. ನರಸಿಂಹಸ್ವಾಮಿ, ಅಗಸ್ತ್ಯ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿಕ್ರಂ ಅಯ್ಯಂಗಾರ್, ಪಡುವಾರಳ್ಳಿ ರಾಮಕೃಷ್ಣ, ಪದ್ಮ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ರಾಜೇಂದ್ರ, ಸಮಾಜ ಸೇವಕಿ ವಿದ್ಯಾ, ಮಹಾನ್ ಶ್ರೇಯಸ್, ಗುರು, ರಾಕೇಶ್ ಮೊದಲಾದವರು ಇದ್ದರು.