ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತ ತಡೆ ಯೋಜನೆ ಕಾಮಗಾರಿಗೆ ಸರ್ಕಾರ 100 ಕೋಟಿ ರು. ಮಂಜೂರು ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದರು.

ಅವರು ಮಂಗಳೂರಿನ ಜಿ.ಪಂ.ಸಭಾಂಗಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಕಡಲ್ಕೊರೆತ ತಡೆಗೆ ಕರಾವಳಿಯ ದ.ಕ., ಉಡುಪಿ, ಉ.ಕ. ಜಿಲ್ಲೆಗಳಿಗೆ ತಲಾ 100 ಕೋಟಿ ರು.ಯಂತೆ ಒಟ್ಟು 300 ಕೋಟಿ ಮಂಜೂರಾಗಿದೆ. ಸಮುದ್ರ ತೀರದ ನಿರ್ವಹಣಾ ಯೋಜನೆ ಬಗ್ಗೆ ಸುರತ್ಕಲ್‌ ಎನ್‌ಐಟಿಕೆ ತಂಡ ವರದಿ ಸಲ್ಲಿಸಿದ್ದು, ವರದಿಯಂತೆ ಕಡಲ್ಕೊರೆತ ಉಂಟಾಗುವ ಪ್ರದೇಶಗಳಲ್ಲಿ ಎಲ್ಲೆಲ್ಲಿ, ಯಾವ ರೀತಿಯಲ್ಲಿ ಕಡಲ್ಕೊರೆತ ತಡೆಗೆ ಕಾಮಗಾರಿ ನಿರ್ವಹಿಸಬಹುದು ಎಂದು ವರದಿ ನೀಡಿದ್ದಾರೆ ಅದರಂತೆ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಸಚಿವರ ಜೊತೆ ಸಭೆ ನಡೆಸಿ ಸರ್ಕಾರದಿಂದ ಈ ಬಗ್ಗೆ ಅನುಮೋದನೆ ಪಡೆದು ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದರು.

ಗನ್‌ ಲೈಸನ್ಸ್‌ ಪಡೆಯುವ, ರಿನೀವಲ್‌ ಅರ್ಜಿ ವ್ಯವಸ್ಥೆಗಳನ್ನು ಆನ್‌ಲೈನ್ ಮೂಲಕ ಟ್ರ್ಯಾಕಿಂಗ್‌ ಮಾಡಿ 60 ದಿನಗಳೊಳಗೆ ವಿಲೇವಾರಿ ಮಾಡಲು ಪ್ರಾಯೋಗಿಕ ಹಂತ ನಡೆಸಲಾಗಿದ್ದು, ಮುಂದೆ ಅದರಂತೆ ಪ್ರಕ್ರಿಯೆ ನಡೆಸಲಾಗುವುದು. ಇದರಲ್ಲಿ ಎಸ್‌ಪಿ, ಡಿಎಫ್‌ಒ, ನಾನು (ಜಿಲ್ಲಾಧಿಕಾರಿ) ಲಾಗಿನ್‌ ಇರಲಿದೆ. ಎಷ್ಟು ಅರ್ಜಿಗಳು ಬಂದಿದೆ, ಅರ್ಜಿಗಳು ಯಾರಲ್ಲಿ ಪೆಂಡಿಂಗ್‌ ಇದೆ ಎಂಬ ಬಗ್ಗೆ ನಮಗೆ ಮಾಹಿತಿ ಸಿಗಲಿದೆ. ಅದರಂತೆ ಅರ್ಜಿಗಳನ್ನು 60 ದಿನಗಳೊಳಗೆ ಸಂಬಂಧಿಸಿದಲ್ಲಿಗೆ ವಿಲೇವಾರಿ ಮಾಡಲು ಸೂಚಿಸುತ್ತೇವೆ. ಈ ಮೂಲಕ ಗನ್‌ ಲೈಸನ್ಸ್‌ ಸಮರ್ಪಕವಾಗಿ, ಸಮಯದೊಳಗೆ ಪಡೆಯಬಹುದು. ಇಲ್ಲಿ ಸಾರ್ವಜನಿಕರು ಈ ಹಿಂದಿನಂತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಧಿಕಾರಿಗಳ ಹಂತದಲ್ಲಿ ಆನ್‌ಲೈನ್‌ ವ್ಯವಸ್ಥೆ ಇರಲಿದೆ. ಆನ್‌ಲೈನ್‌ ಟ್ರ್ಯಾಕಿಂಗ್‌ ಮಾಡುವುದು ಅಪ್ರೂವಲ್‌ ಅಲ್ಲ, ಅಪ್ರೂವಲ್‌ ಮಾಡುವುದು ಲೈಸನ್ಸ್ ಸಮಿತಿ ಎಂದು ಡಿಸಿ ತಿಳಿಸಿದರು.10 ದಿನಗಳೊಳಗೆ ಅತಿಕ್ರಮಣ ತೆರವು ಸುಲ್ತಾನ್‌ ಬತ್ತೇರಿಯ ಬೋಳೂರು ಪಾರ್ಕ್ ಬಳಿ ಫಲ್ಗುಣಿ ನದಿಗೆ ಹಾಕಿದ ಕಟ್ಟಡ ತ್ಯಾಜ್ಯ ಸೇರಿದಂತೆ ಮಣ್ಣು ಸುರಿದು ಅತಿಕ್ರಮಣ ಮಾಡಿರುವುದನ್ನು10 ದಿನಗಳಲ್ಲಿ ತೆರವುಗೊಳಿಸುವ ಕಾರ್ಯ ನಡೆಯಲಿದೆ. ಅತಿಕ್ರಮಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಅತಿಕ್ರಮಣ ತೆರವುಗೊಳಿಸುವಂತೆ ಸೂಚಿಸಲಾಗಿದ್ದರೂ, ಅವರು ನಿರ್ಲಕ್ಷ್ಯ ಮಾಡಿದ್ದರು. ಪಾಲಿಕೆಯ ಮೂಲಕ ಜೆಸಿಬಿ, ಲಾರಿ ಬಳಸಿ ಅತಿಕ್ರಮಣ ತೆರವು ಕಾರ್ಯ ನಡೆಸಲಾಗುತ್ತಿದೆ. ತೆರವಿನ ಸಂಪೂರ್ಣ ಖರ್ಚು ವೆಚ್ಚವನ್ನು ಅತಿಕ್ರಮಣ ಮಾಡಿದವರಿಂದಲೇ ಭರಿಸಲಾಗುವುದು ಎಂದರು. ಸುಲ್ತಾನ್‌ ಬತ್ತೇರಿ ಹಾಗೂ ತಣ್ಣೀರುಬಾವಿ ನಡುವೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೇತುವೆಯ ಕೆಳಗಡೆ ಹಾಕಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಶೀಘ್ರವೇ ನಡೆಯಲಿದ್ದು,. ಮಳೆಗಾಲದಲ್ಲಿ ನದಿ ನೀರಿನ ಹರಿವಿಗೆ ತೊಂದರೆ ಆಗದಂತೆ ಯೋಜನೆ ರೂಪಿಸಲಾಗುವುದು ಎಂದರು.

ನಗರದ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ. ರಾಜಕಾಲುವೆಗಳು ಸೇರಿದಂತೆ ಮಳೆ ನೀರು ಹರಿಯುವ ಚರಂಡಿಗಳ ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತಿದ್ದು, ಈ ಕಾರ್ಯ ಮೇ 26ರೊಳಗೆ ಪೂರ್ಣಗೊಳ್ಳಲಿದೆ. ಈ ಬಾರಿ ಸ್ಥಳೀಯ ಆಸಕ್ತ ಜನರ ಮೇಲ್ವಿಚಾರಣೆಯೊಂದಿಗೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ಹೆದ್ದಾರಿ ಅತಿಕ್ರಮಣ ತೆರವು ಕಾರ್ಯ ಆರಂಭ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಎನ್‌ಎಚ್‌ಎಐಯಿಂದ ಮಾಹಿತಿ ಪಡೆಯಲಾಗಿದೆ. ಸ್ಥಳೀಯಾಡಳಿತ, ಪೊಲೀಸರ ನೆರವಿನೊಂದಿಗೆ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ತೆರವು ಬಳಿಕವೂ ಅತಿಕ್ರಮಣ ಮಾಡಿದಲ್ಲಿ ಕೇಸ್‌ ಮಾಡಲಾಗುವುದು ಎಂದು ಡಿಸಿ ಎಚ್ಚರಿಸಿದರು.ನೇತ್ರಾವತಿ ಸೇತುವೆ ಸಮೀಪ ನಿರ್ಮಾಣವಾಗುತ್ತಿರುವ ಜಲಾಭಿಮುಖ ಅಭಿವೃದ್ಧಿ ಯೋಜನೆ (ವಾಟರ್‌ ಫ್ರಂಟ್‌) ಕಾಮಗಾರಿ ಜೂನ್‌ 2ನೆ ವಾರದೊಳಗೆ ಪೂರ್ಣಗೊಳ್ಳಲಿದೆ. ಈ ವಾಯು ವಿಹಾರ ಪಥಕ್ಕೆ ಪ್ರವೇಶ ಹಾದಿ ಕಿರಿದಾಗಿದ್ದು, ಮಂಗಳೂರು ಕ್ಲಬ್‌ ಮೂಲಕ ಪಾರ್ಕಿಂಗ್‌ ವ್ಯವಸ್ಥೆಯೊಂದಿಗೆ ಪ್ರವೇಶ ದಾರಿಗೆ ಮಾತುಕತೆ ನಡೆಸಿ ಕ್ರಮ ವಹಿಸಲಾಗುವುದು. ಸದ್ಯ ಕಾಮಗಾರಿ ನಡೆಯುತ್ತಿರುವ ಕಾರಣ ಉದ್ಯಾನವದೊಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.


ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಭಾರಿ, ಎಸಿ ಮೀನಾಕ್ಷಿ ಆರ್ಯ ಇದ್ದರು.