ಸಾರಾಂಶ
ಕೆಎಸ್ಆರ್ಟಿಸಿ ಬಸ್‌ವೊಂದರ ಬ್ರೇಕ್ ಫೇಲಾದ ಕಾರಣ ವೇಗವಾಗಿ ಹಿಮ್ಮುಖ ಚಲಿಸಿ ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಹರಿದು, ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೇರಳ-ಕರ್ನಾಟಕ ಗಡಿಯಲ್ಲಿರುವ ಕಾಸರಗೋಡಿನ ತಲಪ್ಪಾಡಿಯಲ್ಲಿ ಸಂಭವಿಸಿದೆ.
ಉಳ್ಳಾಲ : ಕೆಎಸ್ಆರ್ಟಿಸಿ ಬಸ್‌ವೊಂದರ ಬ್ರೇಕ್ ಫೇಲಾದ ಕಾರಣ ವೇಗವಾಗಿ ಹಿಮ್ಮುಖ ಚಲಿಸಿ ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಹರಿದು, ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೇರಳ-ಕರ್ನಾಟಕ ಗಡಿಯಲ್ಲಿರುವ ಕಾಸರಗೋಡಿನ ತಲಪ್ಪಾಡಿಯಲ್ಲಿ ಸಂಭವಿಸಿದೆ.
ಮೃತರನ್ನು ರಿಕ್ಷಾ ಚಾಲಕ, ಮುಳ್ಳುಗುಡ್ಡೆ ಅಜ್ಜಿನಡ್ಕ ನಿವಾಸಿ ಹೈದರ್ ಆಲಿ (47), ಫರಂಗಿಪೇಟೆ ಪರಾರಿ ನಿವಾಸಿ ಅವ್ವಮ್ಮ (60), ಅಜ್ಜಿನಡ್ಕ ನಿವಾಸಿ ಖತೀಜ (60), ಅವರ ಸಹೋದರಿ ನಫೀಸಾ (52), ಅವರ ಪುತ್ರಿ ಆಯೇಷಾ ಫಿದಾ (19), ನಫೀಸಾ ಅಣ್ಣನ ಪುತ್ರಿ ಹಸ್ನಾ (5) ಎಂದು ಗುರುತಿಸಲಾಗಿದೆ. ರಿಕ್ಷಾ ಚಾಲಕ ಹೊರತುಪಡಿಸಿ, ಉಳಿದವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಅಪಘಾತವಾದದ್ದು ಹೇಗೆ?:
ಮೃತರು ಅಜ್ಜಿನಡ್ಕದಿಂದ ಕುಂಜತ್ತೂರಿಗೆ ಸಂಬಂಧಿಕರ ಮನೆಗೆ ತೆರಳಲು ಆರೋಟದಲ್ಲಿ ಕೂತಿದ್ದರು. ತಲಪಾಡಿ ಬಸ್ ನಿಲ್ದಾಣದ ಬಳಿ ಆಟೋ ನಿಂತಿತ್ತು.
ಈ ವೇಳೆ, ಕಾಸರಗೋಡಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಹೊಸಂಗಡಿ ಕಡೆಯಿಂದ ಸರ್ವಿಸ್ ರಸ್ತೆ ಮೂಲಕ ಬರಬೇಕಿತ್ತು. ಆದರೆ, ನೂತನ ಹೆದ್ದಾರಿಯಲ್ಲಿ ವೇಗವಾಗಿ ಬಸ್ ಬಂದಿದ್ದು, ಚಾಲಕ ಮೇಲಿನ ತಲಪಾಡಿಯಲ್ಲಿ ಪ್ರಯಾಣಿಕರನ್ನು ಇಳಿಸಲು ಸಡನ್ನಾಗಿ ಬ್ರೇಕ್ ಹಾಕಿದ.
ಸಡನ್ನಾಗಿ ಬ್ರೇಕ್ ಹಾಕಿದ್ದರಿಂದ ಬ್ರೇಕ್ ಫೇಲಾಗಿದೆ. ಬೆನ್ನಲ್ಲೇ ಬಸ್ ಒಂದು ಸುತ್ತು ತಿರುಗಿದ್ದು, ಹಿಂಬದಿಯ ಟಯರ್ ಕೂಡ ಸಿಡಿದಿದೆ. ಪರಿಣಾಮ ರಿವರ್ಸ್ ಗೇರಲ್ಲಿ ಹಿಮ್ಮುಖವಾಗಿ ಚಲಿಸಿದ ಬಸ್, ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ಇಬ್ಬರು ವೃದ್ಧರ ಮೇಲೆ ಹರಿದು, ಪಕ್ಕದಲ್ಲಿ ನಿಲ್ಲಿಸಿದ್ದ ರಿಕ್ಷಾಗೆ ಡಿಕ್ಕಿ ಹೊಡೆಯಿತು. ಈ ವೇಳೆ, ಆಟೋದಲ್ಲಿದ್ದ 6 ಮಂದಿ ಸ್ಥಳದಲ್ಲೇ ಅಸುನೀಗಿದರು. ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಪೀಕರ್ ಯು.ಟಿ.ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಘಟನೆ ಕುರಿತು ತನಿಖೆ ನಡೆಸುವಂತೆ, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಚಾಲಕ ನಿಜಲಿಂಗಪ್ಪ ಛಲವಾದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಇಳಿಜಾರಿನಲ್ಲಿ ನಿಲ್ಲಿಸಿ
ಹೋದ್ದರಿಂದ ದುರಂತ
ಬಸ್ ಚಾಲಕ ವೇಗವಾಗಿ ಬಂದು ಇಳಿಜಾರಿನಲ್ಲಿ ಬಸ್ ನಿಲ್ಲಿಸಿ ಕೂಡಲೇ ಇಳಿದಿದ್ದಾನೆ. ಹೀಗಾಗಿ ಬಸ್ ಹಿಮ್ಮುಖವಾಗಿ ಚಲಿಸಿ ಅಪಘಾತಕ್ಕೆ ಕಾರಣವಾಗಿದೆ. ಬಸ್‌ನಲ್ಲಿ ಯಾವುದೇ ತಾಂತ್ರಿಕ ದೋಷವಿರಲಿಲ್ಲ. ನಿರ್ಲಕ್ಷ್ಯದಿಂದ ಹೀಗಾಗಿದೆ.
- ಅಕ್ರಮ್ ಪಾಷಾ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ