ದ. ಕನ್ನಡ, ಉಡುಪಿ ಜಿಲ್ಲೆಗೆ ರೆಡ್‌ ಅಲರ್ಟ್‌ - ಶಾಲಾ-ಕಾಲೇಜುಗಳಿಗೆ ರಜೆ : 6 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

| N/A | Published : Aug 29 2025, 05:04 AM IST

Heavy rain school closures
ದ. ಕನ್ನಡ, ಉಡುಪಿ ಜಿಲ್ಲೆಗೆ ರೆಡ್‌ ಅಲರ್ಟ್‌ - ಶಾಲಾ-ಕಾಲೇಜುಗಳಿಗೆ ರಜೆ : 6 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮುಂದಿನ 24 ಗಂಟೆಯಲ್ಲಿ ಕರಾವಳಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು : ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮುಂದಿನ 24 ಗಂಟೆಯಲ್ಲಿ ಕರಾವಳಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಬುಧವಾರದಿಂದ ಮಳೆ ಚುರುಕುಗೊಂಡಿದ್ದು, ಗುರುವಾರವೂ ವಿವಿಧೆಡೆ ಮುಂದುವರೆದಿದೆ. ಆ.29 ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಲಾಗಿದೆ. ಮುಂದುವರೆದು ಆ.30 ಮತ್ತು 31ಕ್ಕೆ ಆರೆಂಜ್‌ ಅಲರ್ಟ್‌, ಸೆ.1ರಿಂದ ಸೆ.4 ವರೆಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಿದೆ.

ಉಳಿದಂತೆ ಆ.29ಕ್ಕೆ ಬೆಳಗಾವಿ, ಬೀದರ್‌, ಕಲಬುರಗಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್‌ ಮತ್ತು ಹಾಸನ, ವಿಜಯಪುರ, ಯಾದಗಿರಿ ಗದಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆ.31ರ ವರೆಗೆ ಸಾಧಾರಾಣ ಮಳೆ ಮುಂದುವರೆಯಲಿದೆ. ಆ ಬಳಿಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ ಕ್ಯಾಸಲ್‌ರಾಕ್‌ ನಲ್ಲಿ ಅತಿ ಹೆಚ್ಚು 20 ಸೆಂ.ಮೀ. ಮಳೆಯಾಗಿದೆ.

ಗೇರುಸೊಪ್ಪ 17, ಹೊನ್ನಾವರ 14, ಅಂಕೋಲಾ 13, ಮಂಗಳೂರು ವಿಮಾನ ನಿಲ್ದಾಣ, ಕದ್ರಾ ಹಾಗೂ ಕಾರವಾರದಲ್ಲಿ ತಲಾ 12, ಜೇವರ್ಗಿ, ಔರಾದ್‌ದಲ್ಲಿ ತಲಾ 11, ಜೋಯಿಡಾ 11, ಯಡ್ರಾಮಿ, ಸುಳ್ಯ, ಸಿದ್ದಾಪುರ, ಶಕ್ತಿನಗರ ಮಂಕಿ, ಮಣಿ, ಕುಮಟಾ, ಕಾರ್ಕಳ, ಬೀದರ್‌, ಬಂಟ್ವಾಳದಲ್ಲಿ ತಲಾ 9, ಉಡುಪಿ, ಕುಂದಾಪುರದಲ್ಲಿ ತಲಾ 8, ಉಪ್ಪಿನಂಗಡಿ, ನಾರಾಯಣಪುರ, ಗದಗ ಹಾಗೂ ಧರ್ಮಸ್ಥಳದಲ್ಲಿ ತಲಾ 7 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಶಾಲಾ-ಕಾಲೇಜುಗಳಿಗೆ ರಜೆ

ಕೊಡಗು, ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಕೂಡ ಕರಾವಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು, ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಮೇಕೇರಿ ಬಳಿ ಭೂಕುಸಿತವಾಗಿದೆ. ಹೀಗಾಗಿ, ಈ ಭಾಗದಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕರಾವಳಿಯಾದ್ಯಂತ ಗುರುವಾರವೂ ಎಡೆಬಿಡದೆ ಮಳೆ ಸುರಿದಿದ್ದು, ಉಡುಪಿ, ದ.ಕ.ಜಿಲ್ಲೆಯ ಆರು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬೈಂದೂರು ತಾಲೂಕಿನ ಬಿಜೂರು ಗ್ರಾಮದಲ್ಲಿ ನದಿಯ ನೀರು ಆವೃತ್ತವಾದ ಕಾರಣ ಕುಟುಂಬವೊಂದರ 4 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯದ 11 ಗೇಟ್‌ಗಳ ಮೂಲಕ 35 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಚೈನಾಗೇಟ್ ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜೋಗ ಜಲಪಾತ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಗೇರುಸೊಪ್ಪ ಜಲಾಶಯದಿಂದ 75 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಶರಾವತಿ ನದಿಯ ಇಕ್ಕೆಲಗಳಲ್ಲಿ ಪ್ರವಾಹದ ಆತಂಕ ಉಂಟಾಗಿದೆ. ಮಂಡ್ಯದಲ್ಲಿ ಗುರುವಾರ ಮಧ್ಯಾಹ್ನ ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ದಿಢೀರ್ ಮಳೆ ಸುರಿಯಿತು.

ಇದೇ ವೇಳೆ, ರಾಜಧಾನಿ ಬೆಂಗಳೂರು, ಚಿಕ್ಕಮಗಳೂರು, ಉತ್ತರ ಕನ್ನಡ, ಗದಗ, ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದೆ.

Read more Articles on