ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹನಕೆರೆ ಗ್ರಾಮದ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ದಲಿತರ ಪ್ರವೇಶ ಕುರಿತಂತೆ ಸೋಮವಾರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿಸಭೆ ವಿಫಲಗೊಂಡಿದೆ.ಭಾನುವಾರ ಶ್ರೀಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ದಲಿತರು ಪ್ರವೇಶಿಸುವುದನ್ನು ಸವರ್ಣೀಯರು ತೀವ್ರವಾಗಿ ವಿರೋಧಿಸಿದ್ದರು. ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದರಿಂದ ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪೊಲೀಸ್ ರಕ್ಷಣೆಯಲ್ಲಿ ದೇಗುಲದೊಳಗೆ ದಲಿತರಿಗೆ ಪ್ರವೇಶಾವಕಾಶ ಕಲ್ಪಿಸಿದ್ದರು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನೆಲೆಸಿತ್ತು.
ಊರಿನಲ್ಲಿ ಶಾಂತಿ ಕಾಪಾಡುವ ಸಲುವಾಗಿ ಸೋಮವಾರ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ಕರೆಯಲಾಗಿತ್ತು. ಮಾಜಿ ಶಾಸಕ ಎಂ.ಶ್ರೀನಿವಾಸ್, ದಲಿತ ಮುಖಂಡರಾದ ಚಂದ್ರಶೇಖರ್, ಸಿದ್ದಲಿಂಗಯ್ಯ ಸೇರಿದಂತೆ ಹಲವರು ಹಾಜರಿದ್ದರು.ದಲಿತರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಸವರ್ಣೀಯರನೇಕರು ಸಭೆಯಿಂದ ದೂರವೇ ಉಳಿದಿದ್ದರು. ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಸಭೆಗೆ ಕರೆತರುವಂತೆ ಮಾಡುವ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ವಿಧಿಯಿಲ್ಲದೆ ಅವರನ್ನು ನೋಟಿಸ್ ನೀಡಿ ಕರೆಸಿಕೊಳ್ಳುವ ಅಥವಾ ಮತ್ತೊಮ್ಮೆ ಶಾಂತಿ ಸಭೆ ನಡೆಸುವ ಕುರಿತಂತೆ ಚಿಂತನೆ ನಡೆಸಿ ತೀರ್ಮಾನಿಸುವುದಾಗಿ ಹೇಳಿ ಅಧಿಕಾರಿಗಳು ವಾಪಸಾದರೆಂದು ತಿಳಿದುಬಂದಿದೆ.
ಮತ್ತೆ ದೇಗುಲ ಸೇರಿದ ಉತ್ಸವ ಮೂರ್ತಿ:ಶ್ರೀಕಾಲಭೈರವೇಶ್ವರಸ್ವಾಮಿ ದೇಗುಲದೊಳಗೆ ದಲಿತರ ಪ್ರವೇಶ ವಿರೋಧಿಸಿ ಭಾನುವಾರ ದೇವಾಲಯದಿಂದ ಹೊರಗೆ ತಂದಿಟ್ಟಿದ್ದ ಶ್ರೀಕಾಲಭೈರವೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಸೋಮವಾರ ಅಧಿಕಾರಿಗಳು ಸುರಕ್ಷಿತವಾಗಿ ದೇವಾಲಯದೊಳಗೆ ಸೇರಿಸಿದರು. ಉತ್ಸವ ಮೂರ್ತಿಯನ್ನು ದೇವಾಲಯದ ಹೊರಗಿರುವ ಕೊಠಡಿಯಲ್ಲಿರಿಸಿ ಬೀಗ ಹಾಕಿಕೊಂಡು ಹೋಗಿದ್ದರು. ಭಾನುವಾರ ಸಂಜೆ ದೇವಾಲಯ ಸಮಿತಿಯವರಿಗೆ ಕೀ ನೀಡಿದ್ದರೆನ್ನಲಾಗಿದ್ದು, ಅದರ ಮೂಲಕ ಕೊಠಡಿಯ ಬಾಗಿಲು ತೆರೆದು ಉತ್ಸವ ಮೂರ್ತಿಯನ್ನು ಸ್ವಸ್ಥಾನಕ್ಕೆ ಸೇರಿಸಲಾಯಿತು.
ದೇಗುಲ ಉದ್ಘಾಟನೆ ನಂತರ ತಡೆ:ಎಂ.ಶ್ರೀನಿವಾಸ್ ಶಾಸಕರಾಗಿದ್ದ ಸಮಯದಲ್ಲಿ ಊರಿನಲ್ಲಿ ಜೀರ್ಣೋದ್ಧಾರದಿಂದ ವಂಚಿತವಾಗಿದ್ದ ಶ್ರೀಕಾಲಭೈರವೇಶ್ವರ ಸ್ವಾಮಿ, ಶ್ರೀಚಿಕ್ಕಮ್ಮ, ಶ್ರೀಮಂಚಮ್ಮ ದೇಗುಲಗಳನ್ನು ಜೀರ್ಣೋದ್ಧಾರಗೊಳಿಸಿದ್ದರು. ದಲಿತರಿಗಾಗಿ ಶ್ರೀಚಿಕ್ಕಮ್ಮ ಮತ್ತು ಶ್ರೀಮಂಚಮ್ಮ ದೇವಸ್ಥಾನಗಳನ್ನು ನಿರ್ಮಿಸಿಕೊಟ್ಟಿದ್ದರು. ಈ ಮೂರೂ ದೇಗುಲಗಳು ಏಕಕಾಲಕ್ಕೆ ಉದ್ಘಾಟನೆಗೊಂಡಿದ್ದವು. ಈ ಪೂಜಾ ಕಾರ್ಯಕ್ರಮಗಳಲ್ಲೆಲ್ಲಾ ಸವರ್ಣೀಯರು, ದಲಿತರು ಒಟ್ಟಾಗಿಯೇ ಪಾಲ್ಗೊಂಡು ಸಾಮರಸ್ಯದಿಂದ ನೆರವೇರಿಸಿದ್ದರು.
ದೇವಾಲಯ ಉದ್ಘಾಟನೆಗೊಂಡ ನಂತರದ ೪೮ ದಿನಗಳ ಪೂಜಾ ಕಾರ್ಯಕ್ರಮಗಳು ನಡೆಯುವ ವೇಳೆ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯ ಪ್ರವೇಶಿಸುವುದಕ್ಕೆ ದಲಿತರಿಗೆ ತಡೆಯೊಡ್ಡುವ ಪ್ರಯತ್ನಗಳು ಶುರುವಾದವು. ಹಿಂದೆ ಇದ್ದ ಶ್ರೀಕಾಲಭೈರವೇಶ್ವರ ದೇವಾಲಯಕ್ಕೆ ಅಲ್ಲಿಯವರೆಗೂ ದಲಿತರು ಪ್ರವೇಶ ಮಾಡಿರಲಿಲ್ಲ.ಒಂದು ದಿನದ ಪೂಜೆಗೂ ಅವಕಾಶ ನೀಡಲಿಲ್ಲ:
೪೮ ದಿನಗಳ ಪೂಜಾ ಕಾರ್ಯಕ್ರಮದಲ್ಲಿ ಒಂದು ದಿನದ ಪೂಜೆ ಅವಕಾಶ ಕಲ್ಪಿಸುವಂತೆ ಕೋರಿದರೂ ಸವರ್ಣೀಯರು ಅವಕಾಶ ನೀಡಲಿಲ್ಲವೆಂಬ ಕಾರಣಕ್ಕೆ ದಲಿತರು ದೇಗುಲದೊಳಗೆ ಪ್ರವೇಶ ಮಾಡಲೇಬೇಕೆಂಬ ಹಠಕ್ಕೆ ಬಿದ್ದರು.ಶಾಸಕರಾಗಿದ್ದ ಎಂ.ಶ್ರೀನಿವಾಸ್ ಅವರ ಗಮನಕ್ಕೂ ದಲಿತರು ಈ ವಿಷಯವನ್ನು ತಂದರು. ಆಗ ಶ್ರೀನಿವಾಸ್ ಅವರು ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿ ದಲಿತರ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಕ್ಕೆ ಸಿದ್ಧತೆ ನಡೆಸಿದ್ದರು. ಅಷ್ಟರೊಳಗೆ ಚುನಾವಣೆ ಎದುರಾಗಿದ್ದರಿಂದ ದಲಿತರ ದೇಗುಲ ಪ್ರವೇಶ ವಿಳಂಬವಾಗುತ್ತಲೇ ಬಂದಿತು.
ಎಂ.ಶ್ರೀನಿವಾಸ್ ಶಾಂತಿಸಭೆಗೂ ಮನ್ನಣೆ ಸಿಗಲಿಲ್ಲ:ದಲಿತರು ದೇವಾಲಯ ಪ್ರವೇಶಿಸುವುದಕ್ಕೆ ಪ್ರಬಲ ವಿರೋಧ ಎದುರಾಗಿದ್ದರಿಂದ ಮಾಜಿ ಶಾಸಕ ಎಂ.ಶ್ರೀನಿವಾಸ್ ಎರಡು ಬಾರಿ ಶಾಂತಿಸಭೆ ನಡೆಸಿದರೂ ಪ್ರಯೋಜನವಾಗಿರಲಿಲ್ಲವೆನ್ನಲಾಗಿದೆ. ಸವರ್ಣೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಊರಿನಲ್ಲಿ ಶಾಂತಿ ಕದಡದಂತೆ ಸಾಮರಸ್ಯ ಮತ್ತು ಸೌಹಾರ್ದತೆಯಿಂದ ದೇವರ ಪೂಜೆಗೆ ದಲಿತರಿಗೆ ಅವಕಾಶ ಕಲ್ಪಿಸಿಕೊಡುವುದಕ್ಕೆ ಶ್ರೀನಿವಾಸ್ ಮುಂದಾಗಿದ್ದರು. ಆದರೆ, ಇದಕ್ಕೆ ಸವರ್ಣೀಯರಿಂದ ಸಮಪರ್ಕವಾದ ಸಹಕಾರ ಸಿಗಲಿಲ್ಲವೆಂದು ತಿಳಿದುಬಂದಿದೆ.
ಕೊನೆಗೆ ಭಾನುವಾರ ದಲಿತರ ದೇಗುಲ ಪ್ರವೇಶಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ನಿರೀಕ್ಷೆಯಂತೆ ಸವರ್ಣೀಯರು ದಲಿತರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದರಾದರೂ ಪೊಲೀಸ್ ರಕ್ಷಣೆಯಲ್ಲಿ ದಲಿತರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.ಸೋಮವಾರದ ಶಾಂತಿ ಸಭೆಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಈ.ಸಿ.ತಿಮ್ಮಯ್ಯ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ಇತರರು ಹಾಜರಿದ್ದರು.
ಊರಿನಲ್ಲಿ ಶಾಂತಿ ಕದಡುವುದು ಬೇಡ. ಸಾಮರಸ್ಯ-ಸೌಹಾರ್ದತೆಯಿಂದ ಜೀವನ ನಡೆಸುವ ಹೃದಯವೈಶಾಲ್ಯತೆ ಬೆಳೆಸಿಕೊಳ್ಳಬೇಕು. ಶ್ರೀಕಾಲಭೈರವೇಶ್ವರ ಸ್ವಾಮಿ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು. ಆ ದೇವಸ್ಥಾನ ಪ್ರವೇಶಿಸದಂತೆ ದಲಿತರು ಸೇರಿದಂತೆ ಯಾರೊಬ್ಬರಿಗೂ ತಡೆಯೊಡ್ಡುವ ಅಧಿಕಾರ ಯಾರಿಗೂ ಇಲ್ಲ. ಜನರು ಇದನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು.- ಎಂ.ಶ್ರೀನಿವಾಸ್, ಮಾಜಿ ಶಾಸಕರು
ಊರಿನ ಎಲ್ಲರೂ ದಲಿತರ ದೇಗುಲ ಪ್ರವೇಶಕ್ಕೆ ಅಡ್ಡಿಪಡಿಸುತ್ತಿಲ್ಲ. ಕೆಲವರಷ್ಟೇ ವಿರೋಧಿಸುತ್ತಿದ್ದಾರೆ. ಮಹಿಳೆಯರನ್ನು ಮುಂದೆ ಬಿಡುತ್ತಾ ಹಿಂದೆ ಅವರು ಕುಮ್ಮಕ್ಕು ನೀಡುತ್ತಿದ್ದಾರೆ. ದೇಗುಲಗಳು ಉದ್ಘಾಟನೆಯಾದಾಗ ದಲಿತರು-ಸವರ್ಣೀಯರು ಎಲ್ಲರೂ ಸೇರಿ ಒಟ್ಟಾಗಿ ಪೂಜಾ ಕೈಂಕರ್ಯ ನೆರವೇರಿಸಿದ್ದೆವು. ೪೮ ದಿನಗಳ ಪೂಜಾ ಕಾರ್ಯಕ್ರಮದಿಂದ ನಮ್ಮನ್ನು ದೂರವಿಡುವ ಪ್ರಯತ್ನ ನಡೆಯುತ್ತಿತ್ತು.- ಚಂದ್ರಶೇಖರ್, ದಲಿತ ಮುಖಂಡ