ಸಾರಾಂಶ
ಧಾರವಾಡ: ಸಪ್ತಕಲೆಗಳಲ್ಲಿ ನೃತ್ಯ ಮತ್ತು ಸಂಗೀತವು ಮೊದಲಿಗೆ ಹುಟ್ಟಿಕೊಂಡಂತಹವುಗಳು. ಸಂಗೀತವು ಶಿವನ ಢಮರುಗದ ಓಂಕಾರ ಧ್ವನಿಯ ಮೂಲಕ ಹುಟ್ಟಿಕೊಂಡಿದೆ, ಹಾಗೆಯೇ ನೃತ್ಯವು ಮಗುವಿನ ಚಲನವಲನದ ಮೂಲಕವೇ ಹುಟ್ಟಿಕೊಂಡಿದೆ ಎಂದು ಹಿರಿಯ ವಿದ್ವಾಂಸ, ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.
ನಗರದ ಸೃಜನಾ ರಂಗಮಂದಿರದಲ್ಲಿ ಭರತ ನೃತ್ಯ ಅಕಾಡೆಮಿ ಹಾಗೂ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶಿವಲಾಸ್ಯ ವೈಭವ ನೃತ್ಯೋತ್ಸವ ಉದ್ಘಾಟಿಸಿದ ಅವರು, ಮನುಷ್ಯನು, ಭಾಷೆಯು ಹುಟ್ಟಿಕೊಳ್ಳುವುದರ ಪೂರ್ವದಲ್ಲಿ ತನ್ನ ವಿಚಾರಗಳನ್ನು ತನ್ನ ಮುಖಭಾವ ಹಾಗೂ ಆಂಗಿಕ ಸಂಕೇತಗಳ ಮೂಲಕವೇ ಹೇಳುತ್ತಿದ್ದನು. ಈ ಎಲ್ಲ ಆಂಗಿಕ ಚಲನವಲನಗಳೇ ಈ ನೃತ್ಯಕ್ಕೆ ಮೂಲ ಪ್ರೇರಣೆಯಾಗಿ ಶಾಸ್ತ್ರೀಯವಾಗಿ ಬೆಳೆದುಕೊಂಡು ಬಂದಿದೆ ಎಂದರು.ಮಗು ತೊಟ್ಟಿಲಿನಲ್ಲಿ ಮಲಗಿದಾಗಲಿಂದಲೇ ನೃತ್ಯ ಆರಂಭವಾಗುತ್ತದೆ. ಅದಕ್ಕೆ ಹೊಸ ಆಯಾಮಗಳನ್ನು ಜೋಡಿಸುವುದರ ಮೂಲಕ ಅದನ್ನು ಪರಿಪೂರ್ಣವಾದ ಕಲೆ ಅಂಥ ಪರಿಗಣಿಸಿದ್ದೇವೆ. ಕ್ರಿಶ ಪೂರ್ವ 5ನೇ ಶತಮಾನದಲ್ಲಿ ಭರತಮುನಿಯು ನಾಟ್ಯಶಾಸ್ತ್ರ ಗ್ರಂಥ ರಚನೆ ಮಾಡಿರುವುದರಿಂದ, ಅದಕ್ಕಿಂತಲೂ ಪೂರ್ವದಲ್ಲಿ ನೃತ್ಯವು ಪ್ರಚಲಿತದಲ್ಲಿತ್ತು ಅಂಥ ಭಾವಿಸಬಹುದಾಗಿದೆ ಎಂದರು.
ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ವಾನ ರಾಜೇಂದ್ರ ಟೊಣಪಿಯವರು ಸರಳ, ಸಜ್ಜನಿಕೆಯ ಮೃದು ಸ್ವಭಾವದ ಸೃಜನಶೀಲ ಕಲಾವಿದ. ಒಂದು ಶಾಲೆಯಲ್ಲಿ ಶಿಕ್ಷಕನಾಗಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲಿಕೆಯ ಸಂಸ್ಕಾರ ನೀಡುವ ಕಾರ್ಯದಲ್ಲಿ ಕಳೆದ 27 ವರ್ಷಗಳಿಂದ ನಿರತರಾಗಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ಸಂಸ್ಕೃತಿ ಉಳಿಸಬೇಕು, ಸಂಸ್ಕಾರ ಬೆಳೆಸಬೇಕು ಎನ್ನುವ ಹಿನ್ನೆಲೆಯಲ್ಲಿ ಭರತನಾಟ್ಯವು ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯ ಮುಂದುವರೆಸಿದೆ. ರಾಜೇಂದ್ರ ಟೊಣಪಿಯವರ ಸಹನಶೀಲತೆ, ಅವರ ಧ್ವನಿಯ ಏರಿಳಿತ, ನಿರಂತರ ಹಾಡುಗಾರಿಕೆಯು ಅಭಿನಂದನಾರ್ಹರು.
ವಿದ್ವಾನ್ ರಾಜೇಂದ್ರ ಟೊಣಪಿ, ಡಾ. ಆರ್.ವಿ. ದೇಶಪಾಂಡೆ, ಡಾ. ಪ್ರಸನ್ ಬೈಂದೂರ, ಭರತ ಹೂಗಾರ, ಪ್ರಕಾಶ ಹಾವಣಗಿ, ಎಸ್.ಎಂ. ಪಾಟೀಲ, ಕಿಶೋರ ಹಾವಣಗಿ ಇದ್ದರು.ರವಿ ಕುಲಕರ್ಣಿ ಮತ್ತು ವಿಶಾಲಾಕ್ಷೀ ಶಿವಳ್ಳಿಮಠ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಉಮೇಶ ಹಂಜಿ ವಂದಿಸಿದರು. ಕಲಾವಿದೆ ಅನನ್ಯ ಕಿರಣ ಹಾವಣಗಿ ಅವರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಜರುಗಿದ ಶಿವಲಾಸ್ಯ ವೈಭವ ನೃತ್ಯೋತ್ಸವದಲ್ಲಿ ನಟುವಾಂಗ ಹಾಗೂ ಹಾಡುಗಾರಿಕೆಯಲ್ಲಿ ವಿದ್ವಾನ್ ರಾಜೇಂದ್ರ ನಳರಾಜ ಟೊಣಪಿ, ಮೃದಂಗಂದಲ್ಲಿ ಪಂಚಮ ಉಪಾಧ್ಯೆ, ಕೊಳಲು ಬೆಂಗಳೂರಿನ ಕೆ.ಎನ್. ಗಣೇಶ, ರಿದಂ ಪ್ಯಾಡ್‌ನಲ್ಲಿ ಬೆಂಗಳೂರಿನ ಜೆ. ಲಕ್ಷ್ಮಿ ನಾರಾಯಣ, ಸಿತಾರದಲ್ಲಿ ಹುಬ್ಬಳ್ಳಿಯ ನಿಖಿಲ್ ಜೋಶಿ ಶಿವಲಾಸ್ಯ ವೈಭವದ ಕಲಾವಿದರಾಗಿ ವಾದ್ಯಮೇಳ ಪ್ರಸ್ತುತ ಪಡಿಸಿದರು. ಪ್ರಸಾದನದಲ್ಲಿ ಸಂತೋಷ ಮಹಾಲೆ, ಸ್ನೇಹಾ ಸಂತೋಷ ಮಹಾಲೆ ಹಾಗೂ ಧ್ವನಿ ಮತ್ತು ಬೆಳಕು ಡಾ. ನಾಗಲಿಂಗ ಮುರಗಿ ವಿವೇಕ ಸೌಂಡ್ ಹುಬ್ಬಳ್ಳಿ ಸಹಕಾರ ನೀಡಿದರು.