ದಂಡೂರು ಬಾಗಿಲು ಕೋಟೆ ಕುಸಿತ, ದುರಸ್ತಿಗೆ ಆಗ್ರಹ

| Published : May 22 2024, 12:51 AM IST

ಸಾರಾಂಶ

ಕಳೆದ ಎರಡು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಪಟ್ಟಣದ ಐತಿಹಾಸಿಕ ದಂಡೂರು ಬಾಗಿಲು ಪಕ್ಕದ ಕೋಟೆ ಕುಸಿದು ಬಿದ್ದಿದೆ. ಇದುವರೆಗೂ ಸಂಬಂಧ ಪಟ್ಟ ಕೇಂದ್ರ ಪುರಾತತ್ವ ಇಲಾಖೆ, ರಾಜ್ಯ ಪ್ರವಾಸೋಧ್ಯಮ ಇಲಾಖೆ ದುರಸ್ಥಿ ಪಡಿಸದೆ ಕೈ ಚಲ್ಲಿರುವುದು ಬೇಸರದ ಸಂಗತಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕನ್ನಡಪ್ರಭ ವಾರ್ತೆ ಮಧುಗಿರಿ

ಕಳೆದ ಎರಡು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಪಟ್ಟಣದ ಐತಿಹಾಸಿಕ ದಂಡೂರು ಬಾಗಿಲು ಪಕ್ಕದ ಕೋಟೆ ಕುಸಿದು ಬಿದ್ದಿದೆ. ಇದುವರೆಗೂ ಸಂಬಂಧ ಪಟ್ಟ ಕೇಂದ್ರ ಪುರಾತತ್ವ ಇಲಾಖೆ, ರಾಜ್ಯ ಪ್ರವಾಸೋಧ್ಯಮ ಇಲಾಖೆ ದುರಸ್ಥಿ ಪಡಿಸದೆ ಕೈ ಚಲ್ಲಿರುವುದು ಬೇಸರದ ಸಂಗತಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಶಿರಾ ಗೇಟ್ ಬಳಿಯಿರುವ ಪ್ರಾಚೀನ ಕಾಲದ ಹಾಗೂ ಪಟ್ಟಣಕ್ಕೆ ಶೋಭೆ ತರುವ ಹೆಬ್ಬಾಗಿಲು ಆಗಿರುವ ದಂಡೂರು ಬಾಗಿಲು ಶಿಥಿಲಾವಸ್ಥೆ ತಲುಪಿದೆ. ಇದುವರೆಗೂ ಜನಪ್ರತಿನಿಧಿ, ಸರ್ಕಾರ ಇದರ ದುರಸ್ಥಿ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಈ ಹೆಬ್ಬಾಗಿಲು ಮತ್ತಷ್ಠು ಅವಾಸನದ ಅಂಚಿಗೆ ತಲುಪುವ ಮೊದಲು ತುರ್ತಾಗಿ ಇದರ ದುರಸ್ಥಿ ಕಾರ್ಯಕ್ಕೆ ಮುಂದಾಗಬೇಕಿದೆ.

ಕೋಟೆಗೆ ಹೊಂದಿಕಂಡಂತೆ ಮನೆಗಳು ನಿರ್ಮಾಣವಾಗಿ ಜನವಸತಿ ಪ್ರದೇಶವಾಗಿದೆ. ಆದ್ದರಿಂದ ಕೋಟೆಯ ಕಲ್ಲುಗಳು ಇದರ ಅಕ್ಕಪಕ್ಕದ ಮನೆಗಳ ಮೇಲೆ ಬೀಳುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಇದರ ದುರಸ್ಥಿ ಕಾರ್ಯ ಕೈಗೊಳ್ಳಬೇಕು. ಐತಿಹಾಸಿಕ ಹೆಬ್ಬಾಗಿಲನ್ನು ಮುಂದಿನ ಪೀಳಿಗೆಗೆ ಇತಿಹಾಸದ ಕುರುಹನ್ನು ಶಾಶ್ವತವಾಗಿ ಉಳಿಸಬೇಕಿದೆ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಎಸಿ, ತಹಸೀಲ್ದಾರ್‌ ಓಡಾಡುತ್ತಾರೆ.

ಕೇವಲ ಅಧಿಕಾರಿಗಳ ಕಡತದಲ್ಲಿಯೇ ಕೋಟೆಯ ಅಭಿವೃದ್ಧಿ ಉಳಿದಿದ್ದು, ಇದುವರೆಗೂ ಈ ಹಿಂದೆ ಬಿದ್ದಿರುವ ಒಂದು ಕಲ್ಲನ್ನು ಎತ್ತಿಕ್ಕಿಲ್ಲ. ಪ್ರಾಚೀನ ಸ್ಮಾರಕ ಮತ್ತು ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳು ಕೋಟೆ ರಕ್ಷಣೆಗೆ ಮುಂದಾಗಬೇಕು. ಇದರಿಂದಾಗುವ ಅಪಾಯಗಳಿಂದ ಪಾರು ಮಾಡಿ ಪ್ರಾಚೀನ ಸ್ಮಾರಕಗಳನ್ನು ಉಳಿಸಬೇಕು.

ಪುರಾಣ ಪ್ರಸಿದ್ಧ ಶ್ರೀಪಾರ್ವತಿ ಮಲ್ಲೇಶ್ವರ ಸ್ವಾಮಿ ದೇಗುಲ ರಸ್ತೆಯಿಂದ ಹಿಡಿದು ಡೂಂಲೈಟ್‌ ಸರ್ಕಲ್‌ವರೆಗೂ ಅಂಗಡಿಗಳ ಮಾಲೀಕರು ಚರಂಡಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ಪರಿಣಾಮ ಬಿದ್ದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ಪುರಸಭೆ ಅಧಿಕಾರಿಗಳು ಚರಂಡಿ ಒತ್ತುವರಿ ತೆರವು ಮಾಡಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ಮಧುಗಿರಿ ತಾಲೂಕಿನಲ್ಲಿ ಎಲ್ಲಿ ಎಷ್ಟು ಮಳೆ: ಕಸಬಾ 11 ಮಿಮೀ, ಬಡವನಹಳ್ಳಿ 10 ಮಿಮೀ, ಬ್ಯಾಲ್ಯ 10 ಮಿಮೀ, ಮಿಡಿಗೇಶಿ 18 ಮಿಮೀ, ಕೊಡಿಗೇನಹಳ್ಳಿ 5 ಮಿಮೀ, ಐ.ಡಿ.ಹಳ್ಳಿ 16 ಮಿಮೀ, ಮಳೆಯಾಗಿದೆ. ಇನ್ನೂ ಮಧುಗಿರಿ ತಾಲೂಕಿನಲ್ಲಿ ಹದ ಮಳೆಯಾಗಿದ್ದು, ಬಿಟ್ಟರೆ ಇನ್ನೂ ಕಾಂಕ್ರಿಟ್‌ ಮನೆಗಳು ತಂಪಾಗುವಷ್ಠು ಮಳೆ ಬಿದ್ದಿಲ್ಲ. ಹೊಲ ಗದ್ದೆಗಳಲ್ಲಿ ಮಾತ್ರ ನೀರು ಹರಿದಿದ್ದು, ಹದ ಮಳೆ ಬಿದ್ದಿದೆ. ಉಳುಮೆಗೆ ತಕ್ಕಷ್ಠು ಮಾತ್ರ ಮಳೆಯಾಗಿದೆ. ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಮಳೆ ಬರಬೇಕಿದೆ.