ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ರಾಜೀನಾಮೆಗೆ ದಸಂಸ ಒತ್ತಾಯ

| Published : Jul 24 2024, 12:25 AM IST

ಸಾರಾಂಶ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಕ್ಕಳ ಶಿಕ್ಷಣದ ಹಕ್ಕನ್ನೇ ಕಸಿಯುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಎ. ಚಿದಾನಂದ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಶೇ. 75ರಷ್ಟು ಅಂಕಗಳನ್ನು ಪಡೆದರೆ ಮಾತ್ರ ಶಿಷ್ಯವೇತನಕ್ಕೆ ಅರ್ಹರು ಎಂದು ಸರ್ಕಾರ ಆದೇಶ ಮಾಡಿದ್ದು, ಈ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪನವರು ರಾಜೀನಾಮೆ ಸಲ್ಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ರಾಜ್ಯ ಸಮಿತಿ ಸದಸ್ಯ ಎ. ಚಿದಾನಂದ ಒತ್ತಾಯಿಸಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಕ್ಕಳ ಶಿಕ್ಷಣದ ಹಕ್ಕನ್ನೇ ಕಸಿಯುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಈಗಾಗಲೇ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೂ ಸಾಲ ಸೌಲಭ್ಯವನ್ನು ಸರ್ಕಾರ ನೀಡುತ್ತಿಲ್ಲ. ಈಗ ಶಿಷ್ಯವೇತನ ಪಡೆಯಲು ಷರತ್ತು ವಿಧಿಸಿರುವುದು ಸರಿಯಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದೇ ಹೆಚ್ಚು. ಹೀಗಿರುವಾಗ ಈಗ ಶಿಷ್ಯವೇತನ ಪಡೆಯಲು ಶೇ.75ರಷ್ಟು ಅಂಕಗಳನ್ನು ಗಳಿಸಬೇಕೆಂದು ಸರ್ಕಾರ ಹೇಳಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸಿ, ಎಸ್ಟಿಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ₹11,400 ಕೋಟಿ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಈ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ಬಳಕೆ ಮಾಡಿಕೊಳ್ಳಬಾರದಿತ್ತು. ಉಳಿದ ಸಮುದಾಯಗಳ ಹಣ ಪಡೆಯದೇ, ಎಸ್ಸಿ,ಎಸ್ಟಿ ಸಮುದಾಯದ ಹಣ ಬಳಕೆ ಮಾಡಲಾಗಿದೆ. ಇನ್ನೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹89 ಕೋಟಿ ಮೊತ್ತದ ಹಗರಣ ನಡೆದಿದೆ. ಇದು ಖಂಡನೀಯ, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಸ್ಸಿಪಿ, ಟಿಎಸ್‌ಪಿ ಹಣವನ್ನು ಕೂಡ ಸರಿಯಾಗಿ ಕೊಡುತ್ತಿಲ್ಲ ಎಂದು ದೂರಿದರು.

ಸಮಿತಿಯ ಜಿಲ್ಲಾ ಸಂಚಾಲಕ ಜಿ. ಹನುಮಂತಪ್ಪ, ಮುಖಂಡರಾದ ಶರಣಪ್ಪ, ವೀರೇಶ್‌ ಮತ್ತಿತರರಿದ್ದರು.