ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಭೂಮಿ-ವಸತಿ ಹಕ್ಕು ಮತ್ತು ಇತರೆ ಹಕ್ಕೊತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದ.ಸಂ.ಸ (ಅಂಬೇಡ್ಕರ್ ವಾದ)ತಾಲೂಕು ಸಮಿತಿ ಕಾರ್ಯಕರ್ತರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂದಿನ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನಾ ಧರಣಿ ನಡೆಸಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಸದಸ್ಯ ಅಂಬುಗ ಮಲ್ಲೇಶ್ ಮಾತನಾಡಿ, ಭೂಮಿ ಉಳುಮೆ ಮಾಡಿ ಬದುಕು ಕಟ್ಟಿಕೊಂಡ ಸಾವಿರಾರು ಕುಟುಂಬಗಳು ಬಗರ್‌ಹುಕುಂನಲ್ಲಿ ೫೦,೫೩.೫೭ ಹಾಗೂ ೯೪/ಸಿ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು, ಬಗರ್‌ಹುಕುಂ ಸಮಿತಿ ಉಳ್ಳವರಿಗೆ, ರಾಜಕೀಯ ಪ್ರಭಾವಿಗಳಿಗೆ ಸಾಗುವಳಿ ನೀಡಿ ದಲಿತರ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. ೫೦ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದ ದಲಿತರ ಭೂಮಿಗೆ ಸಾಗುವಳಿ ನೀಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಈ ದಸಂಸ ಅಂಬೇಡ್ಕರ್ ವಾದ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್‌ರವರು ಬಡವರಿಗೆ, ದಲಿತರಿಗೆ ಭೂಮಿ ಸಿಗಬೇಕೆಂಬ ನಿಟ್ಟನಲ್ಲಿ ಕಂದಾಯ ಸಚಿವರನ್ನು ಭೇಟಿಮಾಡಿ ಮನವಿ ಸಲ್ಲಿಸಿ, ರಾಜ್ಯವ್ಯಾಪ್ತಿ ಏಕಕಾಲದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳದೆ ಅರ್ಹರಿಗೆ ಭೂಮಿ ಕೊಡಲು ಮುಂದಾಗಬೇಕು ಎಂದರು.ದಸಂಸ ವಿಭಾಗೀಯ ಸಂ. ಸಂಚಾಲಕ ಲಕ್ಷ್ಮಣ್ ಬೇಲೂರು ಮಾತನಾಡಿ, ಡಾ. ಅಂಬೇಡ್ಕರ್‌ರವರ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಸಂಘಟನೆ ಭೂಮಿ, ಶಿಕ್ಷಣ, ಉದ್ಯೋಗ, ಮನುಷ್ಯನ ಮೂಲಭೂತ ಅವಶ್ಯಕತೆಗಾಗಿ ನಿರಂತರ ಸಂಘರ್ಷ ನಡೆಸುತ್ತಿದೆ. ೪ ದಶಕಗಳಿಂದ ದಲಿತರ ಭೂಮಿಗಾಗಿ ನಡೆಸಿದ ಹೋರಾಟದಿಂದ ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿತ್ತು. ೭೦ರ ದಶಕದಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಜಾತಿವಾದಿಗಳ, ಅಧಿಕಾರಶಾಹಿ ಸರ್ಕಾರಗಳ ಕುತಂತ್ರದಿಂದ ಪಿಟಿಸಿಎಲ್ ಪ್ರಕರಣಗಳಲ್ಲಿ ದಲಿತರು ಕೋರ್ಟ್‌ಗೆ ಅಲೆಯುತಿದ್ದಾರೆ. ೮೦ರ ದಶಕದಲ್ಲೇ ದಸಂಸ ಹೆಂಡ ಬೇಡ ಭೂಮಿ ಬೇಕು ಎಂಬ ಘೋಷಣೆ ಮೊಳಗಿಸಿತು. ಜಮೀನು ಸಾಗು ಮಾಡುತ್ತಿರುವ ದಲಿತರನ್ನು ಅರಣ್ಯಭೂಮಿ, ಸಾಮಾಜಿಕ ಅರಣ್ಯೀಕರಣ, ಗೋಮಾಳಕ್ಕೆ ಕಾಯ್ದಿರಿಸುವ ನೆಪದಲ್ಲಿ ಒಕ್ಕಲೆಬ್ಬಿಸುವುದ ಕೈಬಿಟ್ಟು, ಸರ್ಕಾರ ಬಗರ್‌ಹುಕುಂ ಹಾಗೂ ೯೪/ಸಿ ನಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹರಿಗೂ ಭೂಮಿ, ಮನೆ ಮಂಜೂರು ಮಾಡಿ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.ತಾಲೂಕು ಪ್ರಗತಿಪರ ಸಂಘಟನೆಗಳ ಮುಖಂಡ ಕೆ.ಸುದರ್ಶನ್, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ಕಾರ್ಯದರ್ಶಿ ಮಂಜುನಾಥ್ ದಸಂಸ (ಅಂಬೇಡ್ಕರ್ ವಾದ) ಕಲಾ ಮಂಡಳಿ ಸಂಚಾಲಕ ಡಾ. ಹರೀಶ್, ಜಿಲ್ಲಾ ಸಂ. ಸಂಚಾಲಕ ಹೋಯ್ಸಳ, ಜಿಲ್ಲಾ ಸಮಿತಿ ಸದಸ್ಯರಾದ ನಿಂಗರಾಜು, ಕೃಷ್ಣಯ್ಯ, ದಲಿತ ಮುಂಡರಾದ ನಿಂಗರಾಜು ಚುಂಗನಹಳ್ಳಿ, ಪ್ರವೀಣ್, ಮಲ್ಲಿಕಾರ್ಜುನ್, ಸತೀಶ್ ಟೈಲರ್, ಆಟೋ ಲಕ್ಷ್ಮಣ್, ಮಲ್ಲೇಶ್, ಚಂದ್ರಪ್ಪ, ಉಮೇಶ್, ನಿಂಜರಾಜು ರಾಜಗೆರೆ, ಸ್ವಾಮಿ ಸೇರಿದಂತೆ ಇತರರಿದ್ದರು.