ಹೂವಿನಲ್ಲಿ ಮಹಾತ್ಮ ಗಾಂಧಿ ಮಂಟಪ...!

| Published : Sep 22 2025, 01:00 AM IST

ಹೂವಿನಲ್ಲಿ ಮಹಾತ್ಮ ಗಾಂಧಿ ಮಂಟಪ...!
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘವು ಸೆ.22 ರಿಂದ ಅ.2 ರವರೆಗೆ ದಸರಾ ಫಲಪುಷ್ಪ ಪ್ರದರ್ಶನ

ಕನ್ನಡಪ್ರಭ ವಾರ್ತೆ ಮೈಸೂರುಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗದಲ್ಲಿರುವ ಹಾರ್ಡಿಂಜ್ ವೃತ್ತದ ಪಕ್ಕದ ಕುಪ್ಪಣ್ಣ ಪಾರ್ಕ್ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿದೆ.ಕುಪ್ಪಣ್ಣ ಉದ್ಯಾನದಲ್ಲಿರುವ ಗಾಜಿನ ಮನೆಯಲ್ಲಿ (ಗ್ಲಾಸ್ ಹೌಸ್) 3 ಲಕ್ಷ ಗುಲಾಬಿ ಹೂಗಳಿಂದ ಕನ್ಯಾಕುಮಾರಿಯಲ್ಲಿರುವ ಮಹಾತ್ಮ ಗಾಂಧಿ ಮಂಟಪದ (ಮಹಾತ್ಮ ಗಾಂಧಿ ಮೊಮೊರಿಯಲ್ ಮ್ಯೂಸಿಯಂ) ಆಕೃತಿ ನಿರ್ಮಿಸಲಾಗಿದೆ.ಹೌದು, ದಸರಾ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘವು ಸೆ.22 ರಿಂದ ಅ.2 ರವರೆಗೆ ದಸರಾ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದ್ದು, ಸೆ.22ರ ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.ದಸರಾ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಫಲಪುಷ್ಪ ಪ್ರದರ್ಶನಕ್ಕೆ ಪ್ರತಿದಿನ 40 ರಿಂದ 50 ಸಾವಿರ ಜನ ಭೇಟಿ ನೀಡುತ್ತಾರೆ. ಈ ಬಾರಿಯ ದಸರಾ ಜಂಬೂಸವಾರಿ ಗಾಂಧಿ ಜಯಂತಿ ದಿನವೇ ನಡೆಯುತ್ತಿರುವುದರಿಂದ ಫಲಪುಷ್ಪ ಪ್ರದರ್ಶನದಲ್ಲಿ ಗಾಂಧಿ ತತ್ವ ಸಂದೇಶ ಸಾರುವ ನಿಟ್ಟಿನಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಇದಕ್ಕಾಗಿ 3 ಲಕ್ಷ ಗುಲಾಬಿ ಹೂವಿನಿಂದ ಕನ್ಯಾಕುಮಾರಿಯಲ್ಲಿರುವ ಗಾಂಧಿ ಮಂಟಪ ನಿರ್ಮಿಸಿದ್ದು, ಅದರ ಮುಂದೆ ಚರಕದಲ್ಲಿ ನೂಲು ನೇಯುವ ಭಂಗಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಆಕೃತಿ, ಗಾಂಧಿ ಪುತ್ಥಳಿ ನಿರ್ಮಿಸಲಾಗಿದೆ. ಗಾಂಧಿ ಮಂಟಪದ ಹಿಂಭಾಗದಲ್ಲಿ ದಂಡಿಯಾತ್ರೆ ಆಕೃತಿಯನ್ನು ಸಹ ನಿರ್ಮಿಸಲಾಗಿದೆ. ಹೂಗಳಲ್ಲಿ ಗ್ಯಾರಂಟಿ- ಆಪರೇಷನ್ ಸಿಂದೂರಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಮಾದರಿಗಳನ್ನು ಹೂಗಳಿಂದ ಅಲಂಕರಿಸಲಾಗಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಮಾದರಿಗಳನ್ನು ಹೂವುಗಳಿಂದ ನಿರ್ಮಿಸಲಾಗಿದೆ.ಆಪರೇಷನ್ ಸಿಂದೂರದಲ್ಲಿ ದಿಟ್ಟತನದಿಂದ ಹೋರಾಟ ಮಾಡಿ ನಮ್ಮ ದೇಶಕ್ಕೆ ಕೀರ್ತಿ ತಂದಂತಹ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವೋಮಿಕಾ ಸಿಂಗ್‌ಅವರಿಗೆ ಕೃತಜ್ಞತೆ ಅರ್ಪಿಸುವ ಆರ್ಮಿ ಟ್ರಕ್, ಏರ್ ಜೆಟ್ ಮತ್ತು ಯುದ್ಧ ನೌಕೆ ಅನ್ನು ಗುಲಾಬಿ, ಸೇವಂತಿಗೆ ಮತ್ತು ವಿಶಿಷ್ಟ ಹೂವುಗಳಿಂದ ನಿರ್ಮಿಸಲಾಗಿದೆ. ಅಲ್ಲದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಅಂಬಾರಿ ಹೊತ್ತ ಆನೆ, ನವದುರ್ಗೆಯರು, ಭೂಮಿಯನ್ನು ರಕ್ಷಿಸಿ ಸಂದೇಶ, ತಂಡಿ ಸಡಕ್, ಮಕ್ಕಳ ಉದ್ಯಾನವನ ಸಹ ಇದೆ.ತೋಟಗಾರಿಕೆ ಇಲಾಖೆ ವತಿಯಿಂದ 60 ಸಾವಿರ ಹೂವಿನ ಗಿಡಗಳನ್ನು ಬೆಳೆಸಿ ಕುಪ್ಪಣ್ಣ ಪಾರ್ಕ್ ಅನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಕಾಕ್ಸ್ ಕೂಂಬ್, ಸೆಲೋಸಿಯಾ, ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಝೆನಿಯಾ, ಟುರೇನಿಯಾ, ಪೆಟೂನಿಯಾ, ಇಂಪೇಷಿಯನ್ಸ್, ಕಾಸ್ಮೊಸ್, ದಹಾಲಿಯಾ, ಅನಿಯಲ್ ಕ್ರೈಸಾಂಥೆಮಮ್, ಬಟನ್ ಕ್ರೈಸಾಂಥೆಮಮ್, ಆಸ್ಟರ್, ಆಂಟಿರಿರಿನಂ, ಸಾಲ್ವಿಯಾ, ಗೊಂಫೆರ್ನಿಯಾ, ಗಿಲ್ಲಾರ್ಡಿಯಾ, ವರ್ಬೆನಾ, ಡಯಾಂಥಸ್, ಸ್ಪೈಡರ್, ಲಿಲ್ಲಿ, ವಿಶೇಷವಾದ ಪಾಯ್ನಸಿಟ್ಟಿಯಾ, ಕ್ಯಾಲಾಂಚೊ, ಕಾರ್ಕುಮಾ, ಆಕ್ಸಾಲಿಸ್, ಪೆಂಟಾಸ್ ಕಾರ್ನಿಯಾ, ಆರ್ಕಿಡ್‌ಗಳು, ಲಿಮೋನಿಯಮ್, ಹಿಲ್ ಬಾಲ್ಸಾಮ್, ಆಂಥೂರಿಯಂ ಗಿಡಗಳನ್ನು ಜೋಡಿಸಲಾಗಿದೆ. ವಿವಿಧ ಸೌಲಭ್ಯಕುಪ್ಪಣ್ಣ ಪಾರ್ಕ್ ನಲ್ಲಿ ಫುಡ್ ಕೋರ್ಟ್ ನಿರ್ಮಿಸಲಾಗಿದ್ದು, ತಿಂಡಿ ತಿನಿಸುಗಳು ಲಭ್ಯವಿರುತ್ತದೆ. ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಕೃಷಿ, ಕೃಷಿಗೆ ಸಂಬಂಧಿಸಿದ ಮಳಿಗೆಗಳು ಹಾಗೂ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ.ತೋಟಗಾರಿಕೆ ಇಲಾಖೆಯಿಂದ ಸಸ್ಯ ಸಂತೆ ಆಯೋಜಿಸಿದ್ದು, ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ/ ನರ್ಸರಿಗಳಲ್ಲಿ ಬೆಳೆಸಿರುವಂತಹ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಇಲಾಖಾ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ.ಬಿಇಎಂಎಲ್, ಅರಮನೆ, ತೋಟಗಾರಿಕೆ ಮಂಡಳಿ, ಜೆ.ಕೆ. ಟೈರ್ಸ್, ಬ್ರೇಕ್ಸ್ ಇಂಡಿಯಾ ಲಿಮಿಟೆಡ್ ಮುಂತಾದ ಸಂಸ್ಥೆಗಳಿಂದ ಹೂ ಕುಂಡಗಳ ಜೋಡಣೆ ಹಾಗೂ ತೋಟಗಾರಿಕೆ ಪ್ರದರ್ಶನ ಏರ್ಪಡಿಸಲಾಗಿದೆ.-----ಬಾಕ್ಸ್... ವಿವಿಧ ಸ್ಪರ್ಧೆಸೆ.23 ರಂದು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಸೆ.24 ರಂದು ಪುಷ್ಪ ರಂಗೋಲಿ, ಸೆ.25 ರಂದು ಭಾರತೀಯ ಪುಷ್ಪ ಕಲೆ ಹೂಗಳ ಜೋಡಣೆ, ಸೆ.26 ರಂದು ತರಕಾರಿ ಕೆತ್ತನೆ, ಸೆ.27 ರಂದು ಇಕೆಬಾನಿ, ಸೆ.28 ರಂದು ಚಿತ್ರ ಕಲಾ ಸ್ಪರ್ಧೆಗಳನ್ನು ಕರ್ಜನ್ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ. ನಗರದ ಖಾಸಗಿ ಮನೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಆಡಳಿತ ಕಚೇರಿಗಳು ಹಾಗೂ ಮದುವೆ ಮಂಟಪಗಳಿಗೆ ಅಲಂಕಾರಿಕಾ ತೋಟದ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು.