ನಿಷ್ಠಿ ಮನೆತನದಿಂದ ಬರಗಾಲದಲ್ಲೂ ದಾಸೋಹ: ಪತಂಗಿ

| Published : Mar 07 2024, 01:53 AM IST

ಸಾರಾಂಶ

ಸುರಪುರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಮಹಾವಿದ್ಯಾಲಯದ 12ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಸಗರನಾಡಿನ ಸುತ್ತಮುತ್ತ ಪ್ರದೇಶಗಳಲ್ಲಿ 101 ಮಠಗಳು, 101 ಕಲ್ಯಾಣಿಗಳು ಹಾಗೂ ಆಗಿನ ದಿನಮಾನಗಳಲ್ಲಿ ಬರಗಾಲ ಸಮಯದಲ್ಲಿ ನಿಷ್ಠಿ ಮನೆತನದವರು ದಾಸೋಹಗಳನ್ನು ನಡೆಸಿದ್ದಾರೆ ಹಾಗೂ ಸುರಪುರ ಸಂಸ್ಥಾನದೊಂದಿಗೆ ಉತ್ತಮ ಬಾಂಧವ್ಯವಿದೆ ಎಂದು ಕಲಬುರಗಿ ಗೋದುತಾಯಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ನಿವೃತ್ತ ಪ್ರಾಂಶುಪಾಲ ಪ್ರೊ. ನಿಂಗಮ್ಮ ಪತಂಗಿ ಹೇಳಿದರು.

ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಶರಣಬಸವ ಪಬ್ಲಿಕ್ ಸ್ಕೂಲ್, ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪಾಲಕ ಮತ್ತು ಪೋಷಕರ ಪಾತ್ರ ಅಗತ್ಯವಾಗಿದೆ. ಶಿಕ್ಷಕರಾದವರು ಅಗಾಧವಾದ ಪಾಂಡಿತ್ಯ ಹೊಂದಿರಬೇಕು. ಅಂದಾಗ ಮಾತ್ರ ಮಕ್ಕಳಿಗೆ ಸೃಜನಶೀಲ ಜ್ಞಾನ ನೀಡಲು ಸಾಧ್ಯ ಎಂದರು.

ಬಿಸಿಯೂಟ ಸಹಾಯಕ ನಿರ್ದೇಶಕ ಪಂಡಿತ ಎ. ನಿಂಬೂರ, ಸಂಸ್ಥೆಯ ಕಾರ್ಯದರ್ಶಿ ಶರಣಬಸಪ್ಪ ನಿಷ್ಠಿ, ಮಾತೋಶ್ರೀ ಡಾ. ಶಾಂತಲಾ ನಿಷ್ಠಿ ಮಾತನಾಡಿದರು. ಸಮಾರಂಭವನ್ನು ಕಡ್ಲಪ್ಪನವರ ನಿಷ್ಠಿ ವಿರಕ್ತಮಠ ಪ್ರಭುಲಿಂಗ ಸ್ವಾಮೀಜಿ ಮತ್ತು ಲಕ್ಷ್ಮಿಪುರ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಉದ್ಘಾಟಿಸಿದರು.

2022-23ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸುರಪುರ ಸಂಸ್ಥಾನದ ರಾಜಾ ಲಕ್ಷ್ಮಿನಾರಾಯಣ ನಾಯಕ, ರಾಜಾ ಮಂಜುನಾಥ ನಾಯಕ, ಬಿಆರ್‌ಸಿ ಖಾದರ ಪಟೇಲ್, ಪ್ರಾಂಶುಪಾಲ ಶಿವಾನಂದ ಹವಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. ಮೌನೇಶ ಬಡಿಗೇರ ಸ್ವಾಗತಿಸಿದರು. ರೇವಪ್ಪ ಪಾಟೀಲ್ ನಿರೂಪಿಸಿದರು. ಶರಣಗೌಡ ಬಿರಾದಾರ್ ವಂದಿಸಿದರು.