ಕಡೂರುಕನ್ನಡ ಭಾಷೆ ಮತ್ತು ಸಾಹಿತ್ಯದ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸುವ ಸದುದ್ದೇಶದಿಂದ ಕನ್ನಡ ಪುಸ್ತಕ ಓದಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ಕನ್ನಡ ಭಾಷೆ ಮತ್ತು ಸಾಹಿತ್ಯದ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸುವ ಸದುದ್ದೇಶದಿಂದ ಕನ್ನಡ ಪುಸ್ತಕ ಓದಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.

ಪಟ್ಟಣದ ವಿನಾಯಕ ಕೆಫೆಯಲ್ಲಿ ಭಾನುವಾರ ಸಂಜೆ 71 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೋಟಲ್ನಲ್ಲಿ ತಿಂಡಿ,ಕಾಫಿ ಕುಡಿಯುತ್ತಿದ್ದ ಗ್ರಾಹಕರ ಬಳಿ ತೆರಳಿ ಉಚಿತವಾಗಿ ಕನ್ನಡ ಪುಸ್ತಕ ನೀಡಿ ಕನ್ನಡ ಪತ್ರಿಕೆ, ಪುಸ್ತಕಗಳನ್ನು ಕೊಂಡು ಓದಿ ಎಂಬು ತಿಳಿ ಹೇಳಿದರು.

ರಾಜ್ಯೋತ್ಸವದ ಅಂಗವಾಗಿ ನ.1 ರಿಂದ ನ.30 ರವರೆಗೆ ಒಂದು ತಿಂಗಳ ಕಾಲ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡಿಗರಲ್ಲಿ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಕಡಿಮೆಯಾಗು ತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿ ಕನ್ನಡ ನಾಡಿನ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಡಿ ಹೋಟೆಲ್, ಬಸ್ ನಿಲ್ದಾಣ ಹಾಗೂ ಅಂಗಡಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸ್ವಂತ ಖರ್ಚಿನಲ್ಲಿ ಪುಸ್ತಕ ಖರೀದಿಸಿ ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರು ಕೈಜೋಡಿಸಬೇಕು. ಪಕ್ಕದ ತಮಿಳು ನಾಡಿನಲ್ಲಿ ಕೂಲಿ ಮಾಡುವವರು ಸಹ ಅಲ್ಲಿನ ಸ್ಥಳೀಯ ಭಾಷೆ ಪತ್ರಿಕೆ, ಪುಸ್ತಕಗಳನ್ನು ಹಣ ನೀಡಿ ಕೊಂಡುಕೊಂಡು ಓದುವ ಹವ್ಯಾಸ ಇದ್ದು ನಾವೇಕೆ ಮಾಡಬಾರದು ಎಂದರು.

ಪುಸ್ತಕ ವಿತರಣೆಯಲ್ಲಿ ಖ್ಯಾತ ಕವಿಯತ್ರಿ ಮಮತಾ ಅರಸೀಕೆರೆ, ತರೀಕೆರೆ ಮನಸೋಳಿ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಅಭಿಯಾನದಲ್ಲಿ ಸಾರ್ವಜನಿಕರು ಹಾಗೂ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಡೂರು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಯಗಟಿ ರವಿಶಂಕರ್, ದೀಕ್ಷಾ ಪ್ರಶಾಂತ್,ಬಿ.ಟಿ.ಗಂಗಾಧರನಾಯ್ಕ,ಬಿದರೆ ಜಗದೀಶ್,ಪ್ರೇಮಕುಮಾರ್, ವೈ.ಎಸ್.ವಿ ದತ್ತ ಅವರ ಅಭಿಮಾನಿಗಳು ಪುಸ್ತಕ ವಿತರಣೆಯಲ್ಲಿ ಇದ್ದರು.

1ಕೆಡಿಆರ್2

ಕನ್ನಡ ಪುಸ್ತಕ ಓದಿ ಅಭಿಯಾನಕ್ಕೆ ಮಾಜಿ ಶಾಸಕ ವೈ.ಎಸ್.ವಿ ದತ್ತ ಕಡೂರು ಪಟ್ಟಣದ ವಿನಾಯಕ ಖೆಪೆಯಲ್ಲಿ ಉಚಿತ ಪುಸ್ತಕಗಳನ್ನು ವಿತರಿಸಿದರು.