ದತ್ತ ಜಯಂತಿ: ಚಿಕ್ಕಮಗಳೂರಲ್ಲಿ ಶೋಭಾಯಾತ್ರೆಗೆ ಶಾಂತಿಯುತ ತೆರೆ

| Published : Dec 26 2023, 01:30 AM IST / Updated: Dec 26 2023, 01:03 PM IST

ದತ್ತ ಜಯಂತಿ: ಚಿಕ್ಕಮಗಳೂರಲ್ಲಿ ಶೋಭಾಯಾತ್ರೆಗೆ ಶಾಂತಿಯುತ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಮಂಗಳವಾರ ತೆರೆ ಕಾಣಲಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆದ ಶೋಭಾಯಾತ್ರೆ ಶಾಂತಿಯುತವಾಗಿ ಸಂಪನ್ನವಾಯಿತು.

ಚಿಕ್ಕಮಗಳೂರು: ಪಶ್ಚಿಮಘಟ್ಟದ ತಪ್ಪಲಲ್ಲಿರುವ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಮಂಗಳವಾರ ತೆರೆ ಕಾಣಲಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆದ ಶೋಭಾಯಾತ್ರೆ ಶಾಂತಿಯುತವಾಗಿ ಸಂಪನ್ನವಾಯಿತು.

ಪೂರ್ವ ನಿಗಧಿಯಂತೆ ಮಧ್ಯಾಹ್ನ 2.30 ಕ್ಕೆ ಹೊರಡಬೇಕಾಗಿದ್ದ ಶೋಭಾಯಾತ್ರೆ ಸಂಜೆ 4 ಗಂಟೆಗೆ ಇಲ್ಲಿನ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಿಂದ ಹೊರಟಿತು. ಆರಂಭದಲ್ಲಿ ದತ್ತಮಾಲಾಧಾರಿಗಳ ಸಂಖ್ಯೆ ಕಡಿಮೆಯಂತೆ ಕಂಡು ಬಂದರೂ ಟೌನ್ ಕ್ಯಾಂಟಿನ್ ವೃತ್ತದಿಂದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಿ ಸಂಜೆ 7 ಗಂಟೆಯ ವೇಳೆಗೆ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಮಾಲಾಧಾರಿ ಗಳು ರಸ್ತೆ ಉದ್ದಕ್ಕೂ ಕಂಡು ಬಂದರು.

ತಂಡೋಪ ತಂಡವಾಗಿ ಯಾತ್ರೆಯಲ್ಲಿ ಸಾಗಿದ ಯುವಕರು ಮುಗಿಲು ಮುಟ್ಟುವಂತೆ ಘೋಷಣೆ ಹಾಕುತ್ತಿದ್ದರು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗೆ ರಸ್ತೆಯ ಉದ್ದಕ್ಕೂ ನಿಂತಿದ್ದ ಸಾರ್ವಜನಿಕರು ಧ್ವನಿ ಗೂಡಿಸುತ್ತಿದ್ದರು.

ಶೋಭಾಯಾತ್ರೆಯಲ್ಲಿ ಡಿಜೆ, ಗೊಂಬೆ ಮೇಳ, ಹಳ್ಳಿ ವಾದ್ಯಗಳು ಮಾತ್ರ ಇದ್ದವು ಆದರೆ, ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಕಲಾ ತಂಡಗಳ ಸಂಖ್ಯೆ ಕಡಿಮೆಯಾಗಿತ್ತು. ನಿರೀಕ್ಷೆಯಷ್ಟು ಮಾಲಾಧಾರಿಗಳು ಭಾಗ ವಹಿಸಲಿಲ್ಲ. ಚಿಕ್ಕಮಗಳೂರು ನಗರ ಪ್ರದೇಶದ ಯುವಕ, ಯುವತಿಯರು ಹಾಗೂ ಬಿಜೆಪಿ ಮುಖಂಡರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಯಾತ್ರೆ ಮುಂಚೂಣಿಯಲ್ಲಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ವಿಪಕ್ಷ ನಾಯಕ ಆರ್. ಅಶೋಕ್, ಕಾರ್ಕಳ ಶಾಸಕ ವಿ. ಸುನೀಲ್‌ಕುಮಾರ್, ಮಾಜಿ ಸಚಿವ ಸಿ.ಟಿ. ರವಿ, ಮುಖಂಡರಾದ ಪ್ರಮೋದ್ ಮಧ್ವರಾಜ್, ವಿಎಚ್‌ಪಿ ಹಾಗೂ ಭಜರಂಗದಳ ಮುಖಂಡರಾದ ಸೂರ್ಯ ನಾರಾಯಣ, ಶ್ರೀಕಾಂತ್ ಪೈ, ಯೋಗೀಶ್ ರಾಜ್ ಅರಸ್, ಮಹೇಂದ್ರ ಇದ್ದರು.

ಚಿಕ್ಕಮಗಳೂರು ನಗರ ಅಲಂಕಾರಗೊಂಡಿದ್ದು, ಅದೇ ಹುಮ್ಮಸ್ಸಿನಲ್ಲಿ ಶೋಭಾಯಾತ್ರೆಯಲ್ಲಿ ಮಾಲಾ ಧಾರಿಗಳು ಭಾಗವಹಿಸುತ್ತಾರೆಂಬ ಲೆಕ್ಕಾಚಾರ ತಲೆಕೆಳಗಾಗಿತ್ತು. ಯಾತ್ರೆಯ ವೈಭವ ನೋಡಲು ರಸ್ತೆಯ ಉದ್ದಕ್ಕೂ ಮಾತ್ರವಲ್ಲ ಆಸುಪಾಸಿನ ಕಟ್ಟಡಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಜನರು ಗಂಟೆಗಟ್ಟಲೆ ನಿಂತು ಕಣ್ತುಂಬಿಕೊಂಡರು.

ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ. ರಸ್ತೆಯಿಂದ ಆಜಾದ್ ಪಾರ್ಕ್‌ ವೃತ್ತಕ್ಕೆ ತಲುಪಿದ ಬಳಿಕ ಯಾತ್ರೆ ಮುಕ್ತಾಯಗೊಂಡಿತು.

ಇಂದು ತೆರೆ: ಮೂರು ದಿನಗಳ ದತ್ತ ಜಯಂತಿ ಉತ್ಸವಕ್ಕೆ ಮಂಗಳವಾರ ತೆರೆ ಬೀಳಲಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ದತ್ತಭಕ್ತರು ಮಾಲೆ ಧರಿಸಿ ಆಗಮಿಸಿದ್ದಾರೆ. ಬೆಳಿಗ್ಗೆ ಆಗಮಿಸಲಿರುವ ದತ್ತಪೀಠದ ದತ್ತ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದು ನಂತರ ನಿರ್ಗಮಿಸಲಿದ್ದಾರೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 4 ಸಾವಿರಕ್ಕೂ ಹೆಚ್ಚು ಪೊಲೀಸರು, ಕೆಎಸ್‌ಆರ್‌ಪಿ, ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. 26 ಚೆಕ್ ಪೋಸ್ಟ್‌ಗಳು, 52 ಮಂದಿ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳ ನಿಯೋಜನೆ ಮಾಡಿ, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ, ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ ಚಿಕ್ಕಮಗಳೂರಿನಲ್ಲಿ ಮೊಕ್ಕಂ ಹೂಡಿದ್ದಾರೆ. ---- ಬಾಕ್ಸ್ ----

ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹ

ದತ್ತಜಯಂತಿ ಸಂದರ್ಭದಲ್ಲಿ ಪ್ರತೀತಿಯಂತೆ ಮಾಜಿ ಸಚಿವ ಸಿ.ಟಿ. ರವಿ ಹಾಗೂ ದತ್ತಮಾಲಾಧಾರಿಗಳು ನಗರದ ಬಸವನಹಳ್ಳಿ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ. ರವಿ, ದತ್ತಾತ್ರೇಯ ಪೀಠ ಪುರಾತನವಾದದ್ದು, ಸಾವಿರಾರು ವರ್ಷಗಳ ಪರಂಪರೆಯ ಕ್ಷೇತ್ರವಾಗಿದೆ. ಯಾವುದೇ ಜಾತಿ, ಬೇಧಕ್ಕೆ ಅವಕಾಶವಿಲ್ಲ ಎನ್ನುವುದನ್ನು ಸಹಸ್ರಾರು ವರ್ಷಗಳ ಹಿಂದೆಯೇ ದತ್ತಾತ್ರೇಯರು ಜಗತ್ತಿಗೆ ಸಾರಿದ್ದಾರೆ. ಬ್ರಹ್ಮ, ವಿಷ್ಞು, ಮಹೇಶ್ವರರ ಸ್ವರೂಪಿ ಎಂಬ ಪ್ರತೀತಿ ಇದೆ ಎಂದರು.

ದತ್ತಾತ್ರೇಯರು ತಪಸ್ಸು ಮಾಡಿದ ಗುಹಾಂತರ ದೇವಾಲಯದಲ್ಲಿ ಅಲ್ಲಿಂದ ಅಂತರ್‌ಧ್ಯಾನರಾಗಿ ಹೋಗುವ ಮೂಲಕ ಪಾದುಕೆಗಳನ್ನು ಬಿಟ್ಟು ಹೋಗಿದ್ದಾರೆ. ಅದನ್ನು ನಾವು ದತ್ತಾತ್ರೇಯರ ರೂಪದಲ್ಲಿ ಪೂಜಿಸುತ್ತಾ ಬಂದಿದ್ದೇವೆ. ಲೋಕಕಲ್ಯಾಣ ಮತ್ತು ವ್ಯಕ್ತಿಗತ ಕಲ್ಯಾಣದ ಭಾವನೆಯಿಂದ ಬರುವವರಿಗೆ ಒಳ್ಳೆಯ ದಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಕಾರಣಕ್ಕೆ ಎಲ್ಲರೂ ಬಂದು ಪಾಲ್ಗೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ಮಾಲೆ ಧಾರಣೆ ಮಾಡಿರುವ ಭಕ್ತರು ಕನಿಷ್ಟ 5 ಮನೆಗಳಲ್ಲಿ ಭಿಕ್ಷಾಟನೆ ಮಾಡಿ, ಇರುಮುಡಿಯೊಂದಿಗೆ ದತ್ತಪೀಠಕ್ಕೆ ತೆರಳಬೇಕು ಎನ್ನುವ ಪ್ರತೀತಿಯನ್ವಯ ಭಿಕ್ಷಾಟನೆ ಪೂರ್ಣಗೊಳಿಸಲಾಗಿದೆ. ದತ್ತನ ಅನುಗ್ರಹ ಸಕಲ ಜೀವಿಗಳ ಮೇಲೂ ಇರಲಿ, ತಾಯಿ ಭಾರತಿ ವಿಶ್ವಗುರುವಾಗಲು ಶಕ್ತಿ ನೀಡಲಿ.

ದತ್ತಪೀಠಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ

ಇದೇ ಮೊದಲ ಬಾರಿಗೆ ದತ್ತಮಾಲೆ ಧರಿಸಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಕಾರ್ಕಳದ ಶಾಸಕ ವಿ. ಸುನಿಲ್‌ಕುಮಾರ್, ಮಾಜಿ ಸಚಿವರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಮರಡಪ್ಪ, ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಅವರು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆದರು.

ಬಳಿಕ ಪೀಠದ ಹೊರ ವಲಯದಲ್ಲಿ ನಡೆದ ಗಣಹೋಮ, ದತ್ತಾತ್ರೇಯ ಹೋಮದಲ್ಲಿ ಪಾಲ್ಗೊಂಡು ಪೂರ್ಣಾಹುತಿವರೆಗೆ ಸ್ಥಳದಲ್ಲಿದ್ದು, ಪೂಜಾ ಕೈಂಕರ್ಯದ ಬಳಿಕ ಚಿಕ್ಕಮಗಳೂರಿಗೆ ಆಗಮಿಸಿದರು. ಮಧ್ಯಾಹ್ನ ಜರುಗಿದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.