ಆನವಟ್ಟಿ ಹೋರಿ ಹಬ್ಬಕ್ಕೆ ಹರಿದುಬಂದ ಜನಸಾಗರ

| Published : Dec 26 2023, 01:30 AM IST

ಸಾರಾಂಶ

ಜನಪದ ಕಲೆಗಳು, ಸಾಹಸಗಳಿಗೆ ಹೆಸರಾದ ಸೊರಬ ತಾಲೂಕಿನಲ್ಲಿ ಆನವಟ್ಟಿ ಪಟ್ಟಣದಲ್ಲಿ ಹೋರಿಹಬ್ಬ ಜಾತ್ರೆಯಂತೆ ನಡೆಯುತ್ತದೆ. ಆನವಟ್ಟಿಯ ದುರ್ಗಾಂಬಾ ಗೆಳಯರ ಬಳಗ ಸೋಮವಾರ ರಾಜ್ಯಮಟ್ಟದ ಹೋರಿ ಬೆದರಿಸುವ ನಡೆಸಿದ್ದು, ಹಬ್ಬಕ್ಕೆ ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ, ಕಣ್ತುಂಬಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಸೊರಬ ತಾಲೂಕಿನ ಆನವಟ್ಟಿ ಪಟ್ಟಣದ ದುರ್ಗಾಂಬಾ ಗೆಳಯರ ಬಳಗ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬಕ್ಕೆ ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ, ಪ್ರಸಿದ್ಧ ಜಾನಪದ ಕ್ರೀಡೆ ಕಣ್ತುಂಬಿಕೊಂಡರು.

ಆನವಟ್ಟಿಯ ಹಿರಿಯ ಮುಖಂಡರಾದ ಚೌಟಿ ಚಂದ್ರಶೇಖರ್ ಪಾಟೀಲ್, ಶ್ರೀನಾಥ ಮಡ್ಡಿ ಭೂಮಿ ಪೂಜೆ, ಗ್ರಾಮದೇವತೆಗಳ ಪೂಜೆ, ಹೋರಿ ಅಖಾಡವನ್ನು ಪೂಜೆ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.

ಪಟ್ಟಣದ ತುಂಬ ಎಲ್ಲಿ ನೋಡಿದರೂ ತಮ್ಮ ಇಷ್ಟದ ಹೋರಿ ಮತ್ತು ಹೋರಿ ನಂಬರ್ ಟೀ ಶರ್ಟ್ ಹಾಕಿರುವವರೇ ಕಾಣುತ್ತಿದ್ದರು. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಹೋರಿ ಹಬ್ಬಕ್ಕೆ ಅಂತಲ್ಲೇ ತಯಾರಿ ಮಾಡಿರುವ ಪಿಪಿ ಹೋರಿಗಳು ವಿವಿಧ ಹೂಗಳು, ಬಣ್ಣಬಣ್ಣದ ಟೇಪ್. ಕೊಬ್ಬರಿ ಗಿಟುಕಗಳ ಹಾರ, ಬಲೂನ್‌ಗಳಿಂದ ಶೃಂಗಾರ ಮಾಡಿದ್ದು ನೋಡುಗರಲ್ಲಿ ಕುತೂಹಲ ಹೆಚ್ಚಿಸಿ, ಮನ ಸೆಳೆಯುತ್ತಿದ್ದವು. ಸ್ಥಳೀಯ ದೇಶಿಯ ತಳಿಗಳ ಹೋರಿಗಳನ್ನು ವಿಶೇಷ ಆದ್ಯತೆ ಮೇರೆಗೆ ಅಖಾಡಕ್ಕೆ ಇಳಿಸಲಾಯಿತು. ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಮೈಕ್‌ನಲ್ಲಿ ಹೋರಿ ನಂಬರ್‌ ಹಾಗೂ ಊರಿನ ಹೆಸರು ಹೇಳಿ ಅಖಾಡದಲ್ಲಿ ಪಿಪಿ ಹೋರಿ ನಾಗಾಲೋಟದಿಂದ ಬರುತ್ತಿದಂತೆ ನೋಡುಗರ ಮೈ ರೋಮಗಳು ನೆಟ್ಟಾಗುತ್ತಿದ್ದವು. ಗ್ರಾಮದ ಸ್ಥಳೀಯ ಪಿಪಿ ಹೋರಿ 20 ವರ್ಷದಿಂದ ಹಬ್ಬದಲ್ಲಿ ಪಾಲ್ಗೊಂಡಿರುವ ನಂಬರ್‌ 121, ಚಿನ್ನಾಟ ಚೆಲುವ ಎಂದು ಸಾರುತ್ತಿದಂತೆ ಅಭಿಮಾನಿಗಳ ಕೇಕೆ, ಸೀಳ್ಳೆಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಶಿಕಾರಿಪುರ, ಬ್ಯಾಡಗಿ, ಹಾವೇರಿ, ಕೊಲಾರ, ಶಿವಮೊಗ್ಗ, ದಾವಣಗೆರೆ, ರಾಮನಗರ ಸೇರಿದಂತೆ ರಾಜ್ಯದ ವಿವಿಧ ತಾಲೂಕು ಹಾಗೂ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಪಿಪಿ ಹೋರಿಗಳು ಹಬ್ಬದಲ್ಲಿ ಪಾಲ್ಗೊಂಡವು.

ರಕ್ಷಣಾತ್ಮಕ ಅಖಾಡ:

ಬಗಳದ ಅಧ್ಯಕ್ಷ ಮಧುಕೇಶ್ವರ ಪಾಟೀಲ್, ಗೌರವ ಅಧ್ಯಕ್ಷ ಮಾಲತೇಶ್ ಬಡಗಿ, ಉಪಾಧ್ಯಕ್ಷ ಚಂದ್ರು ಮಸಾಲ್ತಿ, ಕಾರ್ಯದರ್ಶಿ ಅಶ್ವಿನಿ ಹಾಗೂ ಸದಸ್ಯರು, ಮುಂತಾದವರು ಹೆಚ್ಚಿನ ನಿಗವಹಿಸಿ ಒಂದು ತಿಂಗಳಿಂದ ಹೋರಿಗಳಿಗೆ ಹಾಗೂ ವೀಕ್ಷಕರಿಗೆ ಯಾವುದೇ ಅಪಾಯ ಸಂಭವಿಸದಂತೆ ಗಟ್ಟಿಮುಟ್ಟಾದ 800 ಮೀಟರ್ ಉದ್ದದ ರಕ್ಷಣಾ ಬೇಲಿ ಜೊತೆಗೆ ಹೋರಿ ಬಿಡುವಲ್ಲಿ ಮೂರು ಹಂತದ ಗೇಟ್‌ಗಳನ್ನು ನಿರ್ಮಾಣ ಮಾಡಿದ್ದರು. ಈ ಕಾಳಜಿ ಹೋರಿ ಹಬ್ಬದ ಅಭಿಮಾನಿಗಳಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.

- - - -ಕೆಪಿ25ಎಎನ್‌ಟಿ1ಇಪಿ: ಆನವಟ್ಟಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ನೋಡುಗರ ಮೈನವಿರೇಳಿಸುವಂತೆ ಓಡುತ್ತಿರುವ ಹೋರಿ.