ಕಡೂರನ್ನು ಉಪೇಕ್ಷಿಸುವ ಪ್ರಶ್ನೆಯೇ ಇಲ್ಲ: ಬೈರತಿ ಸುರೇಶ್‌

| Published : Dec 26 2023, 01:30 AM IST

ಸಾರಾಂಶ

ಕಡೂರು- ಬೀರೂರು ಅವಳಿ ಪಟ್ಟಣಗಳ ಅಭಿವೃದ್ಧಿಗೆ ಅಗತ್ಯ ಸಂಪನ್ಮೂಲ ಒದಗಿಸಲಾಗುವುದು ಎಂದು ಸಚಿವ ಭೈರತಿ ಸುರೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಐದು ಶಾಸಕರನ್ನು ಕೊಟ್ಟ ಚಿಕ್ಕಮಗಳೂರು ಜಿಲ್ಲೆಯ ಕಡೂರನ್ನು ಉಪೇಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಮಾಡಿ ಹೋಗಿದ್ದ ತಪ್ಪುಗಳ ಸರಿಪಡಿಸುವುದೇ ಸವಾಲಿನ ಕಾರ್ಯವಾಗಿತ್ತು.ಅದೆಲ್ಲವನ್ನು ಮೀರಿ ಸಿದ್ದರಾಮಯ್ಯ ಸರ್ಕಾರ ಚುನಾವಣಾ ಪೂರ್ವ ನೀಡಿದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದೆ. ಸರ್ವ ಸಮುದಾಯಗಳ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತಹ ಆಡಳಿತ ನೀಡುವುದು ಸರ್ಕಾರದ ಗುರಿ‌. ಅದೇ ರೀತಿ ಆಡಳಿತ ನೀಡುತ್ತಿದೆ. ಸಾರ್ವಜನಿಕರ ಹಣ ಕಳ್ಳರ ಪಾಲಾಗದಂತೆ ತಡೆದು ಅದೇ ಹಣ ಸದ್ಬಳಕೆ ಮಾಡಿಕೊಂಡು ಸಮಾನ ಪ್ರಾಮುಖ್ಯತೆ ನೀಡಿ ಜನರಿಗೆ ನೆಮ್ಮದಿ ನೀಡುವುದು ಸರ್ಕಾರದ ಆದ್ಯತೆಎಂದರು.

ಕಡೂರು- ಬೀರೂರು ಅವಳಿ ಪಟ್ಟಣಗಳ ಅಭಿವೃದ್ಧಿಗೆ ಅಗತ್ಯ ಸಂಪನ್ಮೂಲ ಒದಗಿಸಲಾಗುವುದು. ಪಕ್ಷಕ್ಕೆ ಐದು ಶಾಸಕರನ್ನು ಜಿಲ್ಲೆ ನೀಡಿದೆ. ಯುವ ಶಾಸಕ ಕೆ.ಎಸ್.ಆನಂದ್ ಅವರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒಂದು ಕನಸು ಇದೆ. ಆ ಕನಸು ನನಸಾಗಿಸಲು ನಮ್ಮ ಸರ್ಕಾರ ಮತ್ತು ನಾವೆಲ್ಲರೂ ಜೊತೆಗಿದ್ದು ಸಹಕಾರ ನೀಡುತ್ತೇವೆ. ಭಧ್ರಾ ಉಪಕಣಿವೆ ಯೋಜನೆಯನ್ನು ನಬಾರ್ಡ್ ಟ್ರಾಂಚಿ ಯೋಜನೆಗೆ ಸೇರಿಸಲು ಕೆ.ಎಸ್. ಆನಂದ್ ಪ್ರಸ್ತಾಪನೆ ಸಲ್ಲಿಸಿದ್ದಾರೆ. ಆ ವಿಚಾರವಾಗಿ ಖುದ್ದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಒಪ್ಪಿಸುತ್ತೇನೆ ಎಂದರು.

ಹಿಜಾಬ್ ವಿಚಾರವಾಗಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಸಮಾನತೆ ಮತ್ತು ಶಾಂತಿ ಸೌಹಾರ್ದತೆ ಮಾತ್ರ ನಮ್ಮ ಗುರಿ. ಧರ್ಮಗಳ ನಡುವೆ ವೈಮನಸ್ಯ ತಂದಿಡುವುದು ನಮ್ಮ ಕಾರ್ಯವಲ್ಲ. ಶಿವಾನಂದ ಪಾಟೀಲರು ರೈತರ ಬಗ್ಗೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾವೆಲ್ಲರೂ ರೈತರ ಮಕ್ಕಳು. ರೈತರ ಬಗ್ಗೆ ಎಲ್ಲಿಯೂ ತಮಾಷೆ ಮಾಡುವುದಿಲ್ಲ ಎಂದರು.

ಶಾಸಕರಾದ ಕೆ.ಎಸ್.ಆನಂದ್, ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ, ಆಸಂದಿ ಕಲ್ಲೇಶ್, ಬಾಸೂರು ಚಂದ್ರಮೌಳಿ, ಶರತ್ ಕೃಷ್ಣಮೂರ್ತಿ, ಪಂಚನಹಳ್ಳಿ ಪ್ರಸನ್ನ, ವಕೀಲ ಲಯನ್ ರವಿಕುಮಾರ್, ಕಂಸಾಗರ ಸೋಮಶೇಖರ್ ಮತ್ತಿತರರು ಇದ್ದರು.