ದಾವಣಗೆರೆ ಸೋತಿದ್ದು, ಮೋದಿಗೆ 1 ಸ್ಥಾನ ತಪ್ಪಿದ ನೋವಿದೆ

| Published : Jul 14 2024, 01:34 AM IST

ಸಾರಾಂಶ

ನಮ್ಮವರಿಂದಲೇ ನಾವು ಸೋತಿದ್ದೇವೆ । ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ: ಜಿ.ಎಂ.ಸಿದ್ದೇಶ್ವರ

ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ನಮ್ಮವರಿಂದಲೇ ನಾವು ಸೋತಿದ್ದು, ಈ ಸೋಲಿಗೆ ನಾನೂ ಸಹ ಕಾರಣ. ಆದರೆ, ನರೇಂದ್ರ ಮೋದಿಯವರಿಗೆ ಬರಬೇಕಾದ ಒಂದು ಸ್ಥಾನ ಹೋದ ಬೇಸರವಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಶನಿವಾರ ಜಿ.ಎಂ.ಸಿದ್ದೇಶ್ವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ತಮ್ಮ 72ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆಗೆ 2 ತಿಂಗಳು ಇರುವಾಗಲೇ ಕಿವಿನೋವು ಕಾಣಿಸಿದ್ದು, ಆರೋಗ್ಯದ ದೃಷ್ಟಿಯಿಂದ ನನಗೆ ಸ್ಪರ್ಧಿಸಲಾಗಲಿಲ್ಲ ಎಂದರು.

ಪತ್ನಿ ಅಥವಾ ತಮ್ಮನಿಗೆ ಟಿಕೆಟ್ ನೀಡುವಂತೆ ವರಿಷ್ಟರಿಗೆ ಕೇಳಿದ್ದೆ. ಅದರಂತೆ ಪತ್ನಿ ಗಾಯತ್ರಿಗೆ ಟಿಕೆಟ್ ಸಿಕ್ಕಿತು. ಆದರೆ, ಚುನಾವಣೆಯಲ್ಲಿ ನಮ್ಮವರಿಂದಲೇ ನಾವು ಸೋತಿದ್ದೇವೆ. ಈ ಸೋಲಿಗೆ ನಾನೂ ಕಾರಣ. ಅನಾರೋಗ್ಯದ ಕಾರಣಕ್ಕೆ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಾವ್ಯಾರೂ ಸೋತಿಲ್ಲ ಎಂದು ಅವರು ಹೇಳಿದರು.

ಕಾರ್ಯಕರ್ತರ ಜೊತೆಗಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಜರುಗಲಿದ್ದು, ಈಗಿನಿಂದಲೇ ಪಕ್ಷ ಸಂಘಟಿಸುವ ಕೆಲಸ ಮಾಡೋಣ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಸಿದ್ದೇಶ್ವರ ಕರೆ ನೀಡಿದರು. ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಮಾತನಾಡಿ, ಪಕ್ಷದ ಬೆಳವಣಿಗೆ, ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಂಸದರಾದ ಜಿ.ಮಲ್ಲಿಕಾರ್ಜುನಪ್ಪ, ಜಿ.ಎಂ.ಸಿದ್ದೇಶ್ವರರ ಕೊಡುಗೆ ಅಪಾರವಾಗಿದೆ. ಪಕ್ಷ ಬೆಳೆಯುವ ಜೊತೆಗೆ ಜಿಲ್ಲೆಯೂ ಅಭಿವೃದ್ಧಿ ಕಂಡಿದೆ. ಸೋಲಿಗೆ ಕಾರ್ಯಕರ್ತರು ಧೃತಿಗೆಡಬೇಡಿ. ಕಳೆದ ಚುನಾವಣೆಯಲ್ಲಿ ನಾವು ಸೋತಿಲ್ಲ. ಕುತಂತ್ರಿಗಳು ಸೋತಿದ್ದಾರೆ ಎಂದರು. ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ತಾವೇ ಪಕ್ಷ ಕಟ್ಟಿದ್ದಾಗಿ ಹೇಳಿಕೊಳ್ಳುವ ನಾಯಕರೊಬ್ಬರು 2004ರಲ್ಲಿ ಜೆಡಿಯುಗೆ ಹೊರಟಿದ್ದರು. ಈಗ ಲಗಾನ್‌ ಟೀಂನಲ್ಲಿದ್ದವರು ಮುಂಚೆ ಯಾವ ಪಕ್ಷದಲ್ಲಿದ್ದರು? ಆ ಎಲ್ಲರನ್ನೂ ಪಕ್ಷಕ್ಕೆ ಕರೆ ತಂದು, ಶಾಸಕರಾಗಿ ಮಾಡಿದ್ದೇ ಜಿ.ಎಂ.ಸಿದ್ದೇಶ್ವರ. ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ಜಾತಿ, ವರ್ಗದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯನ್ನು ಕಟ್ಟುವ ಜೊತೆಗೆ ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿಗೆ ಸಿದ್ದೇಶ್ವರ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಶಾಸಕ ಮುರುಗೇಶ ನಿರಾಣಿ, ವಿಪ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ, ಕೆ.ಎಸ್.ನವೀನ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಎಚ್.ಪಿ.ರಾಜೇಶ, ದೂಡಾ ಮಾಜಿ ಅಧ್ಯಕ್ಷರಾದ ಎ.ವೈ.ಪ್ರಕಾಶ, ರಾಜನಹಳ್ಳಿ ಶಿವಕುಮಾರ, ದೇವರಮನಿ ಶಿವಕುಮಾರ, ಉಪ ಮೇಯರ್ ಯಶೋಧ ಯೋಗೇಶ, ಮುಖಂಡರಾದ ಜಿ.ಎಂ.ಲಿಂಗರಾಜು, ಜಿ.ಎಸ್.ಅನಿತಕುಮಾರ, ಶ್ರೀನಿವಾಸ ಟಿ.ದಾಸಕರಿಯಪ್ಪ, ಅಣಬೇರು ಜೀವನಮೂರ್ತಿ, ಎಚ್.ಎನ್.ಶಿವಕುಮಾರ, ಐರಣಿ ಅಣ್ಣೇಶ, ಬಿ.ಎಸ್.ಜಗದೀಶ, ಮುರುಗೇಶ ಆರಾಧ್ಯ, ಹರಪನಹಳ್ಳಿ ನಂಜನಗೌಡ, ಆನಂದಪ್ಪ, ಗೌಡ್ರು ಲಿಂಗರಾಜ, ಸಿರಿಗೆರೆ ನಾಗನಗೌಡ್ರು, ಕೆ.ಪಿ.ಕಲ್ಲೇರುದ್ರೇಶ, ಎ.ಬಿ.ಹನುಮಂತಪ್ಪ, ಶಾಂತರಾಜ ಪಾಟೀಲ, ಶಂಕರಗೌಡ ಬಿರಾದಾರ, ಶಿವನಗೌಡ ಪಾಟೀಲ, ಟಿಂಕರ ಮಂಜಣ್ಣ ಪಕ್ಷದ ಮುಖಂಡರು, ಕಾರ್ಯಕರ್ತರು, ಪಾಲಿಕೆ ಸದಸ್ಯರು, ಇತರರು ಇದ್ದರು.

ಇದೇ ವೇಳೆ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಅಂಧ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಂಡರು. ಪಕ್ಷದ ಮುಖಂಡರು, ಹಾಲಿ-ಮಾಜಿ ಜನ ಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಹಿರಿಯ ನಾಗರೀಕರು ಜಿ.ಎಂ.ಸಿದ್ದೇಶ್ವರರಿಗೆ ಜನ್ಮದಿನದ ಶುಭಾರೈಸಿದರು.

ಸಿದ್ದೇಶ್ವರ ನೇತೃತ್ವದಲ್ಲೇ ಎಲ್ಲಾ ಚುನಾವಣೆ

ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಜಿಪಂ, ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು, ಎಲ್ಲಾ ಚುನಾವಣೆಗಳೂ ಸಿದ್ದೇಶ್ವರ ನೇತೃತ್ವದಲ್ಲೇ ನಡೆಯಲಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಹಿಂದೆ ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಸಚಿವ ಸ್ಥಾನವೂ ಸಿಗಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷ ಸಂಘಟಿಸುವ ಕೆಲಸ ಮಾಡೋಣ ಎಂದರು.