ಸಾರಾಂಶ
ಕನ್ನಡ ಪ್ರಭ ವಾರ್ತೆ ದಾವಣಗೆರೆ
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮಾ.8 ರ ಶುಕ್ರವಾರ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ದಾವಣಗೆರೆ ಸಜ್ಜಾಗಿದೆ.
ಈ ವರ್ಷವೂ ಸಹ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದರೂ ಭಕ್ತರು ಗಮನಕೊಡದೆ ಶಿವರಾತ್ರಿ ಹಬ್ಬದ ಆಚರಣೆಗೆ ಶಿವನಿಗೆ ನೈವೇದ್ಯಕ್ಕೆ ಉಪಹಾರ, ಫಲಹಾರ ತಯಾರಿಗೆ ಸಜ್ಜಾಗಿದ್ದಾರೆ.
ಶಿವರಾತ್ರಿಯ ಮುನ್ನಾದಿನ ಗುರುವಾರ ಇಲ್ಲಿನ ಕೆ.ಆರ್.ಮಾರುಕಟ್ಟೆ, ಮಂಡಿಪೇಟೆ, ಗಡಿಯಾರ ಕಂಬ, ಕಾಯಿಪೇಟೆ, ಹೊಂಡದ ಸರ್ಕಲ್, ವಿದ್ಯಾನಗರ, ಸಿದ್ದವೀರಪ್ಪ ಬಡಾವಣೆ, ವಿನೋಬನಗರ, ಆಂಜನೇಯ ಬಡಾವಣೆ, ನಿಟ್ಟುವಳ್ಳಿ, ದೇವರಾಜ ಅರಸು ಬಡಾವಣೆ, ಎಸ್.ನಿಜಲಿಂಗಪ್ಪ ಬಡಾವಣೆ ಸೇರಿದಂತೆ ಇನ್ನೂ ಹಲವೆಡೆ ಶಿವರಾತ್ರಿಗೆ ಬೇಕಾಗುವ ಬಿಲ್ವಪತ್ರೆ, ವಿವಿಧ ಬಗೆಯ ಹೂವು, ಕಲ್ಲಂಗಡಿ, ಕರ್ಬೂಜ, ಗಂಜಾಂ, ಬಾಳೆ, ಕರ್ಜೂರ, ಕಿತ್ತಳೆ, ಸೇಬು ಸೇರಿದಂತೆ ಇತರೆ ಹಣ್ಣುಗಳ ಖರೀದಿಗೆ ಜನಸಂದಣಿ ಸೇರಿತ್ತು.
ವಿಶೇಷ ಪೂಜೆ, ಅಭಿಷೇಕ, ಭಜನೆ: ನಗರದ ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಪಾತಾಳ ಲಿಂಗೇಶ್ವರ ಸ್ವಾಮಿ ದೇವಸ್ಥಾನ, ಎಸ್‌ಕೆಪಿ ರಸ್ತೆಯ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಇಲ್ಲಿನ ಕೆಟಿಜೆ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಬಂಬೂ ಬಜಾರ್‌ನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಶ್ರೀ ಸದ್ಗುರು ಕರಿಬಸವೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ, ಕೊಂಡಜ್ಜಿ ರಸ್ತೆಯ ಮೈಲಾರ ಲಿಂಗೇಶ್ವರ ದೇವಸ್ಥಾನ, ಸ್ವಾಮಿ ವಿವೇಕಾನಂದ ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ, ಪಿ.ಬಿ.ರಸ್ತೆಯ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ, ವಿನೋಬನಗರದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ನಗರದ ಪಿ.ಜೆ. ಬಡಾವಣೆಯ ಶ್ರೀ ಸತ್ಯಸಾಯಿ ಮಂದಿರ, ಎಸ್‌ಕೆಪಿ ರಸ್ತೆಯ ನರಗೇಶ್ವರ ಸ್ವಾಮಿ ದೇವಸ್ಥಾನ, ಬಕ್ಕೇಶ್ವರ ಶಾಲೆ ಸಮೀಪದ ಶಿವನ ದೇವಸ್ಥಾನಗಳನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಿದ್ದು, ಮಹಾ ಶಿವರಾತ್ರಿ ಹಬ್ಬಕ್ಕೆ ತಯಾರಿ ನಡೆಸಲಾಗಿತ್ತು
.ಹಣ್ಣುಗಳ ಬೆಲೆ ಗಗನಕ್ಕೆ: ಒಂದು ಕೆಜಿ ಕಲ್ಲಂಗಡಿ 30 ರು. ಕರ್ಬೂಜ ಕೆಜಿಗೆ 50 ರೂ, ಬಾಳೆಹಣ್ಣು 60 ರು. ಕಿತ್ತಳೆ 60 ರು. ಸೇಬು 180, ದಾಳಂಬರಿ 180, ದ್ರಾಕ್ಷಿ 80, ಸಪೋಟ 80, ಕರ್ಜೂರ 200 ರು.. ಕೆಜಿ ಬೆಲೆ ಇತ್ತು. ಹೂವುಗಳಲ್ಲಿ ಸೇವಂತಿಗೆ ಮಾರಿಗೆ 50-80 ರು., ಮಲ್ಲಿಗೆ, ಕನಕಾಂಬರಿ 50 ರೂ. ಬಿಲ್ವಪತ್ರೆ 100ರು.ಗಳಾಗಿದೆ.