ಕೂಸಿನ ಮನೆ ಮಕ್ಕಳ ಬೌದ್ಧಿಕ ಬೆಳವಣಿಗೆ ಸಹಕಾರಿ: ದುಂಡಪ್ಪ ತುರಾದಿ

| Published : Dec 22 2024, 01:32 AM IST

ಕೂಸಿನ ಮನೆ ಮಕ್ಕಳ ಬೌದ್ಧಿಕ ಬೆಳವಣಿಗೆ ಸಹಕಾರಿ: ದುಂಡಪ್ಪ ತುರಾದಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಕೂಸಿನ ಮನೆಗಳು ಸಹಕಾರಿಯಾಗಿವೆ.

ಕೂಸಿನ ಮನೆಯ ಆರೈಕೆದಾರರಿಗೆ ಏರ್ಪಡಿಸಿದ್ದ ತರಬೇತಿಯ ಸಮಾರೋಪ ಸಮಾರಂಭಕನ್ನಡಪ್ರಭ ವಾರ್ತೆ ಕೊಪ್ಪಳ

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಕೂಸಿನ ಮನೆಗಳು ಸಹಕಾರಿಯಾಗಿವೆ ಎಂದು ಕೊಪ್ಪಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಕರೆ ನೀಡಿದರು.

ಶನಿವಾರ ಕೊಪ್ಪಳ ತಾಪಂಯ ಸಭಾಂಗಣದಲ್ಲಿ ಕೂಸಿನ ಮನೆಯ ಆರೈಕೆದಾರರಿಗೆ ಏರ್ಪಡಿಸಿದ್ದ 7 ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ ಬೇಕಾದ ಕಲಿಕಾ ಪೂರಕ ಚಟುವಟಿಕೆಗಳನ್ನು ಜರುಗಿಸಲು ನಾನಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನದಲ್ಲಿ ಕೂಸಿನ ಮನೆ ಅಭಿವೃದ್ಧಿಪಡಿಸಲಾಗಿದೆ. ಮಕ್ಕಳ ಆರೈಕೆದಾರರು ಕೂಸಿನ ಮನೆಗೆ ದಾಖಲಾಗುವ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕೆಂದರು.ಕೂಸಿನ ಮನೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ಆರೈಕೆ ಮಾಡಿ ಅವರಿಗೆ ಆಹಾರವನ್ನು ಕ್ರಮಬದ್ಧವಾಗಿ ನೀಡುವಂತೆ ತಿಳಿಸಿದರು. ಕೂಸಿನ ಮನೆಗೆ ನಿಗದಿಪಡಿಸಲಾದ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಮಕ್ಕಳಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಯಾವುದೇ ರೀತಿಯಾಗಿ ನಿರ್ಲಕ್ಷ್ಯವಹಿಸುವಂತಿಲ್ಲ. ಪ್ರತಿ ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಜರುಗಿಸುವ ಜೊತೆಗೆ ಪ್ರತಿ ಮಗುವಿನ ತೂಕ ಮತ್ತು ಆರೋಗ್ಯದ ಬಗ್ಗೆ ನಿಗಾವಹಿಸಲು ಪಾಲಕರಿಗೆ ಮಾಹಿತಿ ನೀಡಬೇಕೆಂದರು.

ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ ಮಾತನಾಡಿ, 7 ದಿನಗಳ ಕಾಲ ತರಬೇತಿಯನ್ನು ನೀಡಲಾಗಿದ್ದು ಆರೈಕೆದಾರರು ಆಸಕ್ತ ವಹಿಸಿ ಕೂಸಿನ ಮನೆಯನ್ನು ಮಾದರಿ ಕೂಸಿನ ಮನೆಯನ್ನಾಗಿ ನಿರ್ಮಿಸುವಲ್ಲಿ ನಿಮ್ಮಗಳ ಪಾತ್ರ ಬಹು ಮುಖ್ಯವಾಗಿದೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಜರುಗಿಸುವುದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.

ಶಿಬಿರಾರ್ಥಿಗಳು ತರಬೇತಿ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್, ವ್ಯವಸ್ಥಾಪಕ ಬಸವರಾಜ ಪಾಟೀಲ್, ವಿಷಯ ನಿರ್ವಾಹಕ ಬಸವರಾಜ ಬಳಿಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಮಾಸ್ಟರ್ ಟ್ರೈನರ್‌ಗಳಾದ ಜಯಶ್ರೀ, ಉಷಾ, ಎಚ್.ಎಸ್. ಹೊನ್ನುಂಚಿ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.