ಮೈಕ್ರೋಫೈನಾನ್ಸ್‌ ಸಂಸ್ಥೆಗಳಿಗೆ ಡೀಸಿ ಎಚ್ಚರಿಕೆ

| Published : Feb 02 2025, 11:48 PM IST

ಮೈಕ್ರೋಫೈನಾನ್ಸ್‌ ಸಂಸ್ಥೆಗಳಿಗೆ ಡೀಸಿ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲವನ್ನು ನೀಡುವಾಗ ಮತ್ತು ಮರುಪಾವತಿಗೆ ಏನೆಲ್ಲಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ನಿರ್ದೇಶನಗಳನ್ನು ಹಣಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳು, ವ್ಯಕ್ತಿಗಳು ಕಡ್ಡಾಯವಾಗಿ ಪಾಲಿಸಬೇಕು. ಸಾಲ ಪಡೆದವರ ಸಂಬಂಧಿಕರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಮುಖಾಂತರ ಸಾಲ ವಾಪಸ್‌ ಪಡೆಯಲು ಕಿರುಕುಳ ಕೊಡುವಂತಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾಲವನ್ನು ನೀಡುವಾಗ ಬಡ್ಡಿದರ, ಸಾಲ ಪೂರ್ಣ ಮರುಪಾವತಿ ಅವಧಿ, ಪೋಸೆಸಿಂಗ್ ಶುಲ್ಕ ಹಾಗೂ ಹೆಚ್ಚುವರಿ ಶುಲ್ಕಗಳು ಏನೇ ಇದ್ದರೂ ಸಾಲ ಪಡೆಯುವವರಿಗೆ ಮುಂಚಿತವಾಗಿಯೇ ತಿಳಿಸಬೇಕು. ಯಾವುದೇ ಶುಲ್ಕಗಳನ್ನು ಮುಚ್ಚಿಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಸಾಲವನ್ನು ನೀಡುವಾಗ ಮತ್ತು ಮರುಪಾವತಿಗೆ ಏನೆಲ್ಲಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ನಿರ್ದೇಶನಗಳನ್ನು ಹಣಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳು, ವ್ಯಕ್ತಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದರು.ಬೆಕರಿಕೆ ಹಾಕಬಾರದು

ಸಾಲ ಪಡೆದವರಿಗೆ ಕರೆ ಮಾಡುವಾಗ ಬೆದರಿಕೆ ಹಾಕುವುದು ಹಾಗೂ ಕೆಟ್ಟ ಪದಗಳನ್ನು ಬಳಸಿ ನಿಂದಿಸಬಾರದು. ಸಾಲ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದವರ ಸಂಬಂಧಿಕರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಮುಖಾಂತರ ಸಾಲ ವಾಪಸ್‌ ಪಡೆಯಲು ಕಿರುಕುಳ ಕೊಡುವಂತಿಲ್ಲ. ಸಾಲ ಪಡೆದವರ ಕುಟುಂಬಕ್ಕೆ, ಆಸ್ತಿಗೆ ಹಾನಿ ಮಾಡಬಾರದು. ರೌಡಿಗಳನ್ನು, ಗೂಂಡಾಗಳನ್ನು ಸಾಲ ವಸೂಲಾತಿಗೆ ಕಳುಹಿಸಿದ ಪ್ರಕರಣ ಕಂಡು ಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಯ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಹಾಯವಾಣಿ ಬಳಸಿ

ದೌರ್ಜನ್ಯ ಕಿರುಕುಳ ಹಾಗೂ ಹಿಂಸಾತ್ಮಕ ಕ್ರಮಗಳಿಗೆ ಮುಂದಾದರೆ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು. ಈ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಆ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಹಣಕಾಸಿನ ವ್ಯವಹಾರ ಮಾಡುವವರು ಕಿರುಕುಳ ನೀಡಿದರೆ ಸಹಕಾರ ಸಂಘಗಳ ಉಪನಿಬಂಧಕರ ದೂ.ಸಂ: 9844329790 ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕರ ದೂ.ಸಂ 9379862426 ರವರಿಗೆ ಕರೆ ಮಾಡಿ ತಿಳಿಸಿದರೆ ಜಿಲ್ಲಾಡಳಿತ ಸಾಲಗಾರರ ನೆರವಿಗೆ ಬರಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾಗರಾಜು, ಸಹಕಾರ ಸಂಘಗಳ ಉಪನಿಬಂಧಕ ಡಾ. ಶಂಕರ್, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು, ಹಣಕಾಸು ಲೇವಾದೇವಿಗಾರರು ಹಾಗೂ ಗಿರಿವಿದಾರರು ಮತ್ತು ಅಧಿಕಾರಿಗಳು ಇದ್ದರು.