DC directs efforts towards implementation of 'Tegasiri'

-ಡಿ.ಸಿ ಪ್ರಕಾಶ ಜಿ.ಟಿ.ನಿಟ್ಟಾಲಿ ಸಲಹೆ । ತೇಗಸಿರಿ ಯೋಜನೆ ಅನುಷ್ಠಾನದ ಕುರಿತ ಸಭೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತೇಗಸಿರಿ ಯೋಜನೆಯು ಕೃಷಿಯೊಂದಿಗೆ ವೃಕ್ಷ ಸಂಪತ್ತನ್ನೂ ಬೆಳೆಸಿ, ರೈತರಿಗೆ ಭವಿಷ್ಯದಲ್ಲಿ ಆದಾಯದ ಮತ್ತೊಂದು ಮೂಲ ಸೃಷ್ಟಿಸುವ ಆಶಯವನ್ನು ಹೊಂದಿದ್ದು, ಬೆಳೆದ ಮರಗಳನ್ನು ಮಾರಾಟ ಮಾಡಿದಾಗ ದೊರೆಯುವ ಆದಾಯದಲ್ಲಿ ಶೇ.70ರಷ್ಟು ರೈತರಿಗೆ ಹಾಗೂ ಶೇ.30 ರಷ್ಟು ಸರ್ಕಾರಕ್ಕೆ ಹಂಚಿಕೆ ಮಾಡುವ ಯೋಜನೆ ಇದಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಶ್ರಮಿಸುವಂತೆ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಹೇಳಿದರು.ಅವರಿಂದ ತಮ್ಮ ಕಚೇರಿ ಸಭಾಂಗಣದಲ್ಲಿ ತೇಗಸಿರಿ ಯೋಜನೆ ಅನುಷ್ಠಾನದ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.

ರೈತರು ತಮ್ಮ ಜಮೀನಿನ ರಸ್ತೆ ಬದಿ ಹಾಗೂ ಸೂಕ್ತ ಖಾಲಿ ಜಾಗಗಳಲ್ಲಿ ತೇಗದ ಸಸಿಗಳನ್ನು ನೆಟ್ಟು, 10 ರಿಂದ 15 ವರ್ಷಗಳ ಕಾಲ ಅವುಗಳನ್ನು ಪೋಷಿಸಿ ಸಂರಕ್ಷಿಸಬೇಕು ಎಂದರು.ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದ ಜಮೀನಿನ ಬಳಕೆಯಾಗದ ಜಾಗದ ಸದ್ಬಳಕೆಯಾಗುವುದರ ಜೊತೆಗೆ ದೀರ್ಘಾವಧಿಯಲ್ಲಿ ಹೆಚ್ಚುವರಿ ಆದಾಯ ಪಡೆಯಲು ಅವಕಾಶ ದೊರೆಯಲಿದೆ. ಭವಿಷ್ಯದಲ್ಲಿ ಮರದ ಸಂಪತ್ತು ಹೆಚ್ಚಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಉತ್ತೇಜನವಾಗಲಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದ ಜಾಗದಲ್ಲಿ ತೇಗದ ಮರ ಬೆಳೆಸಬಹುದಾಗಿದೆ ಎಂದರು.

ಯೋಜನೆಯ ಅನುಷ್ಠಾನಕ್ಕೆ ಪೂರ್ವದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಂದಾಯಾಧಿಕಾರಿಗಳು ಯೋಜನೆಯ ವ್ಯವಸ್ಥಿತ ಅನುಷ್ಠಾನ ಕ್ಕೆ ಸಂಬಂಧಿಸಿದಂತೆ ಕಾಮಗಾರಿ ಕೈಗೊಳ್ಳಬೇಕಾದ ಪ್ರದೇಶ, ಅಗತ್ಯವಾಗುವ ಗಿಡಗಳು ಮತ್ತಿತರ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಮಾತನಾಡಿ, ತೇಗಸಿರಿ ಯೋಜನೆಯ ಅನುಷ್ಠಾನದಲ್ಲಿ ಕಂದಾಯ ಇಲಾಖೆ, ಜಿ.ಪಂ. ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲಾ, ತಾಲೂಕು ಮತ್ತು ಗ್ರಾ.ಪಂ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದು ನುಡಿದರು.

ಅರಣ್ಯ ಪ್ರದೇಶಗಳ ಸಂರಕ್ಷಣೆ, ನಿರ್ವಹಣೆ ಹಾಗೂ ಅರಣ್ಯ ಭೂಮಿಗೆ ಸಂಬಂಧಿಸಿದ ಆಡಳಿತಾತ್ಮಕ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ಉದ್ದೇಶದಿಂದಾಗಿ ಸರ್ಕಾರವು ಅರಣ್ಯ ಭೂಮಿಗಳ ಕ್ರೋಢೀಕರಣ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.ಈ ಯೋಜನೆಯಲ್ಲಿ ಬಹುಮುಖ್ಯವಾಗಿ ಅರಣ್ಯ ಭೂಮಿಗಳ ಸರ್ವೆ, ಗಡಿ ಗುರುತಿಸುವಿಕೆ, ದಾಖಲೆಗಳ ಪರಿಶೀಲನೆ, ಒತ್ತುವರಿ ತೆರವು ಮತ್ತು ಅರಣ್ಯ ಪ್ರದೇಶಗಳ ಸಂರಕ್ಷಣೆಯ ಅಂಶಗಳಿಗೆ ಮಹತ್ವ ನೀಡಲಾಗುತ್ತಿದೆ ಎಂದರು.

ಅರಣ್ಯ ಇಲಾಖೆಯಲ್ಲಿರುವ ಭೂ ದಾಖಲೆಗಳನ್ನು ಮತ್ತು ಕಂದಾಯ ಇಲಾಖೆಯ ದಾಖಲೆಗಳನ್ನು ಒಗ್ಗೂಡಿಸಿ ಸಮೀಕ್ಷೆ ನಡೆಸುವುದು, ಆ ಮೂಲಕ ಮೀಸಲು ಅರಣ್ಯ, ಸಂರಕ್ಷಿತ ಅರಣ್ಯ ಹಾಗೂ ಡೀಮ್ಡ್ ಫಾರೆಸ್ಟ್ ಪ್ರದೇಶಗಳನ್ನು ಗುರುತಿಸುವುದು, ಅರಣ್ಯ ಮತ್ತು ಕಂದಾಯ ಭೂಮಿಗಳ ನಡುವಿನ ಗಡಿ ವಿವಾದಗಳನ್ನು ಪರಿಹರಿಸಲು ದಾಖಲೆ ಸಿದ್ಧಪಡಿಸುವಲ್ಲಿ ಗಮನಹರಿಸುವುದು ಈ ಯೋಜನೆಯಿಂದಾಗಿ ಸಾಧ್ಯವಾಗಲಿದೆ ಎಂದ ಅವರು, ಅರಣ್ಯ ಭೂಮಿಗಳ ನಿಖರ ವಿಸ್ತೀರ್ಣವನ್ನು ಸರ್ವೆ ಮೂಲಕ ದೃಢೀಕರಿಸುವುದಲ್ಲದೆ ಅರಣ್ಯಭೂಮಿ ಒತ್ತುವರಿ ಹಾಗೂ ಅತಿಕ್ರಮಣದ ಕುರಿತು ಸ್ಪಷ್ಟ ಮಾಹಿತಿ ಸಂಗ್ರಹಿಸಿ, ಅರಣ್ಯ ಭೂಮಿಗೆ ಸಂಬಂಧಿಸಿದ ಹಳೆಯ ದಾಖಲೆಗಳಲ್ಲಿನ ಗೊಂದಲಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.ವಿಶೇಷ ತನಿಖಾ ತಂಡದ ರಚನೆ ಮತ್ತು ಅರಣ್ಯ ಭೂಮಿ ಹಂಚಿಕೆಗಳ ಪರಿಶೀಲನಾ ಅಭಿಯಾನ ಹಾಗೂ SIT (Special Investigation Team) ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅರಣ್ಯ ಭೂಮಿಗಳ ದಾಖಲೆ ಮತ್ತು ಅಕ್ರಮ ಹಂಚಿಕೆಗಳನ್ನು ಪರಿಶೀಲಿಸಲು ಸರ್ಕಾರ ಕೈಗೊಂಡಿರುವ ವಿಶೇಷ ತನಿಖಾ ಪ್ರಕ್ರಿಯೆ ಇದಾಗಿದೆ. ಅರಣ್ಯ ಇಲಾಖೆಯ ಹೆಸರಿನಲ್ಲಿ ಅಧಿಸೂಚಿತವಾಗಿರುವ ಭೂಮಿಗಳು ಕಂದಾಯ ಇಲಾಖೆಯ ವಶದಲ್ಲಿವೆಯೇ ಮತ್ತು ಅವುಗಳನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಅರಣ್ಯೇತರ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಕೂಡ ಈ ಅಭಿಯಾನದ ಉದ್ದೇಶವಾಗಿದೆ ಎಂದರು.

ಈ ಅಭಿಯಾದ ಮೇಲುಸ್ತುವಾರಿಗಾಗಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ರೈತರ ಜಮೀನುಗಳನ್ನು ತಕ್ಷಣ ವಶಪಡಿಸಿಕೊಳ್ಳುವುದು ಈ ಯೋಜನೆಯ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು.ಸಭೆಯಲ್ಲಿ ಜಿ.ಪಂ ಸಿಇಒ ರಿಷಿ ಆನಂದ್ ಸೇರಿದಂತೆ ಅರಣ್ಯ, ಕಂದಾಯ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

-------------------ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರು ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ತೇಗಸಿರಿ ಯೋಜನೆ ಅನುಷ್ಠಾನದ ಕುರಿತು ಅಧಿಕಾರಿಗಳ ಸಭೆ ನಡೆಸಿದರು.