ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾರತ್ ಜೋಡೋ ಯುವ ಸಂಘ ಸ್ಥಾಪನೆ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ, ಸಾಮಾಜಿಕ ಸಾಮರಸ್ಯ ಉತ್ತೇಜಿಸುವಲ್ಲಿ ಸರ್ಕಾರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಆ ನಿಟ್ಟಿನಲ್ಲಿ ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ, ಪೌರಾಡಳಿತ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ವಹಿಸುವಂತೆ ಸೂಚಿಸಿದರು.

ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ಒಂದು ಭಾರತ್ ಜೋಡೋ ಯುವ ಸಂಘ ಸ್ಥಾಪಿಸಬೇಕು. ಪ್ರತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ, ನಗರಸಭೆ ವ್ಯಾಪ್ತಿಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಬೇಕು ಎಂದು ಸೋಮಶೇಖರ್ ವಿವರಿಸಿದರು.


ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲೆಯಲ್ಲಿ 102 ಗ್ರಾಪಂಗಳಿದ್ದು, ಪ್ರತಿ ಗ್ರಾಪಂನಲ್ಲೂ ತಲಾ ಒಂದು ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಮುಂದಾಗಲಾಗುವುದು ಎಂದರು.

ಸ್ಥಳೀಯ ಸಮುದಾಯದ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಯುವಕರನ್ನು ನೇರ ಪಾಲುದಾರರನ್ನಾಗಿ ಮಾಡುವುದು. ಹಾಗೆಯೇ ಕ್ರೀಡೆ, ಪಿಟ್ನೆಸ್ ಮತ್ತು ಕೌಶಲ್ಯಾಭಿವೃದ್ಧಿ ಮೂಲಕ ಯುವಜನರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಸಾಧಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಮಂಜುನಾಥ ರಾಮಣ್ಣ ಅವರು ಮಾತನಾಡಿ, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 4, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 5, ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ 4, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಒಂದು ಭಾರತ್ ಜೋಡೋ ಸಂಘ ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ಪ್ರತಿಯೊಂದು ಭಾರತ್ ಜೋಡೋ ಯುವ ಸಂಘಕ್ಕೆ ತಲಾ 10 ಲಕ್ಷ ರು. ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ. ಪ್ರತಿ ಸಂಘಕ್ಕೆ ಒಬ್ಬ ತರಬೇತುದಾರರ ಗೌರವ ಧನಕ್ಕೆ ವಾರ್ಷಿಕ 24 ಸಾವಿರ ರು. ಭರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ. ವಿಸ್ಮಯಿ ಅವರು ಮಾತನಾಡಿ, ಭಾರತ್ ಜೋಡೋ ಯುವ ಸಂಘ ಸ್ಥಾಪಿಸುವಲ್ಲಿ ಪೋರ್ಟಲ್, ಮೊಬೈಲ್ ಆ್ಯಪ್ ಮೂಲಕ ಅಥವಾ ಗ್ರಾಪಂ ಹಾಗೂ ನಗರ ಪ್ರದೇಶದಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿ ಅಬ್ದುಲ್ ನಭೀ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ತಾ.ಪಂ. ಇಒಗಳಾದ ಪರಮೇಶ್, ಅಪ್ಪಣ್ಣ, ರಾಜೇಶ್, ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್, ಪುರಸಭೆ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ನಾಚಪ್ಪ, ಗೋಪಿ ಇದ್ದರು.

ಸದಸ್ಯರ ನೋಂದಣಿಗೆ ಆಧಾರ್ ಕಡ್ಡಾಯವಾಗಿದ್ದು, 16ರಿಂದ 35 ವರ್ಷದ ಯುವಕರು ಸಂಘದಲ್ಲಿ ನೋಂದಣಿಯಾಗಲು ಅವಕಾಶವಿದೆ. ಘಟಕ ರಚನೆಗೆ ಕನಿಷ್ಠ 100 ಯುವ ಜನರು ಸದಸ್ಯರಾಗಿರಬೇಕು. ಪ್ರತಿ ಸದಸ್ಯರು ಗುರುತಿನ ಚೀಟಿಗಾಗಿ 10 ರು. ನೋಂದಣಿ ಶುಲ್ಕ ಭರಿಸಬೇಕು. ಪ್ರತಿಯೊಂದು ಸಂಘವು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆ್ಯಕ್ಟ್ 1960ರಡಿ ನೋಂದಾಯಿಸಿರಬೇಕು. ಅರ್ಜಿದಾರರು ಅದೇ ಗ್ರಾಪಂ/ವಾರ್ಡಿನ ‘ಆರ್ಡಿನರಿ ರೆಸಿಡೆಂಟ್’ ಆಗಿರಬೇಕು. ಒಬ್ಬರು ಒಂದು ಸಂಘದಲ್ಲಿ ಮಾತ್ರ ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆಂದು ಜಿಲ್ಲಾಧಿಕಾರಿ ವಿವರಿಸಿದರು.