ಪಡೀಲಿಗೆ ಡಿಸಿ ಕಚೇರಿ ಸ್ಥಳಾಂತರ: ಡಿಎಂ ನೋಟಿಫಿಕೇಷನ್‌ ಅಪ್ರಸ್ತುತ?

| Published : May 18 2025, 01:09 AM IST

ಸಾರಾಂಶ

ಸ್ಟೇಟ್‌ಬ್ಯಾಂಕ್‌ ಬಳಿ ಜಿಲ್ಲಾಧಿಕಾರಿಗಳ ಕಚೇರಿ ಹಿನ್ನೆಲೆಯಲ್ಲಿ ಸಾಕಷ್ಟು ಜನದಟ್ಟಣೆ ಉಂಟಾಗುತ್ತಿತ್ತು. ಅಲ್ಲದೆ ಇಕ್ಕಟ್ಟಾದ ರಸ್ತೆ, ಹೆಚ್ಚುತ್ತಿದ್ದ ವಾಹನ ದಟ್ಟಣೆಯನ್ನು ಗಮನಿಸಿ 1991ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಡಿಎಂ ನೋಟಿಫಿಕೇಷನ್‌ ಹೊರಡಿಸಿದ್ದರು. ಈ ನೋಟಿಫಿಕೇಷನ್‌ ಪ್ರಕಾರ ಸಿಟಿ ಬಸ್‌ಗಳು ಸ್ಟೇಟ್‌ಬ್ಯಾಂಕ್‌ ಪ್ರವೇಶಿಸುವುದು ನಿರ್ಬಂಧಿಸಲಾಗಿತ್ತು.

1991ರಿಂದ ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್‌ ಪ್ರವೇಶಕ್ಕೆ ಡಿಎಂ ನೋಟಿಫಿಕೇಷನ್‌ ನಿರ್ಬಂಧ

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಸ್ಟೇಟ್‌ಬ್ಯಾಂಕ್‌ಗೆ ಬಸ್‌ಗಳ ಪ್ರವೇಶಕ್ಕೆ 1991ರಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ (ಡಿಸ್ಟ್ರಿಕ್ಟ್‌ ಮ್ಯಾಜಿಸ್ಟ್ರೇಟ್‌-ಡಿಎಂ) ಹೊರಡಿಸಿದ್ದ ನೋಟಿಫಿಕೇಷನ್‌ ಈಗ ಮಹತ್ವ ಕಳೆದುಕೊಳ್ಳುತ್ತಿದೆ. ಸ್ಟೇಟ್‌ಬ್ಯಾಂಕ್‌ ಬಳಿ ಇದ್ದ ಜಿಲ್ಲಾಧಿಕಾರಿಗಳ ಕಚೇರಿ ಹೊರವಲಯದ ಪಡೀಲಿಗೆ ಸ್ಥಳಾಂತಗೊಂಡ ಬೆನ್ನಲ್ಲೇ ಡಿಎಂ ನೋಟಿಫಿಕೇಷನ್‌ ರದ್ದುಗೊಳಿಸಬೇಕು ಎನ್ನುವ ವಿಚಾರ ಮುನ್ನಲೆಗೆ ಬಂದಿದೆ.

ಡಿಎಂ ನೋಟಿಫಿಕೇಷನ್‌ ರದ್ದುಗೊಳಿಸಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ಆದರೆ ಈಗ ಇದರ ಕೂಗು ಮತ್ತಷ್ಟು ವೇಗ ಪಡೆದುಕೊಳ್ಳುವ ಸೂಚನೆ ಕಾಣುತ್ತಿದೆ.

ಏನಿದು ಡಿಎಂ ನೋಟಿಫಿಕೇಷನ್‌?:

ಸ್ಟೇಟ್‌ಬ್ಯಾಂಕ್‌ ಬಳಿ ಜಿಲ್ಲಾಧಿಕಾರಿಗಳ ಕಚೇರಿ ಹಿನ್ನೆಲೆಯಲ್ಲಿ ಸಾಕಷ್ಟು ಜನದಟ್ಟಣೆ ಉಂಟಾಗುತ್ತಿತ್ತು. ಅಲ್ಲದೆ ಇಕ್ಕಟ್ಟಾದ ರಸ್ತೆ, ಹೆಚ್ಚುತ್ತಿದ್ದ ವಾಹನ ದಟ್ಟಣೆಯನ್ನು ಗಮನಿಸಿ 1991ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಡಿಎಂ ನೋಟಿಫಿಕೇಷನ್‌ ಹೊರಡಿಸಿದ್ದರು. ಈ ನೋಟಿಫಿಕೇಷನ್‌ ಪ್ರಕಾರ ಸಿಟಿ ಬಸ್‌ಗಳು ಸ್ಟೇಟ್‌ಬ್ಯಾಂಕ್‌ ಪ್ರವೇಶಿಸುವುದು ನಿರ್ಬಂಧಿಸಲಾಗಿತ್ತು. ನಂತರ ಮೂರೇ ವರ್ಷದಲ್ಲಿ ಅಂದರೆ 1994ರಲ್ಲಿ ಪರಿಷ್ಕೃತ ನೋಟಿಫಿಕೇಷನ್‌ ಹೊರಡಿಸಿದ ಅಂದಿನ ಜಿಲ್ಲಾಧಿಕಾರಿಗಳು, ಗ್ರಾಮಾಂತರ ಬಸ್‌ಗಳು ಕೂಡ ಸ್ಟೇಟ್‌ಬ್ಯಾಂಕ್‌ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಿದರು. ಇದರಿಂದಾಗಿ ನಗರ ಹಾಗೂ ಗ್ರಾಮಾಂತರ ಹೊಸ ರೂಟ್‌ಗಳಿಗೆ ಸ್ಟೇಟ್‌ಬ್ಯಾಂಕ್‌ ಪ್ರವೇಶಿಸುವ ಪರವಾನಗಿ ನೀಡುವುದಕ್ಕೆ ತಡೆ ಉಂಟಾಗಿತ್ತು.

3ನೇ ಬಾರಿ ಪರಿಷ್ಕರಣೆಯ ಎಡವಟ್ಟು:

ವಾಹನ ದಟ್ಟಣೆ, ಜನದಟ್ಟಣೆ ಮತ್ತಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ 2013ರಲ್ಲಿ ಮತ್ತೆ ಡಿಎಂ ನೋಟಿಫಿಕೇಷನ್‌ ಪರಿಷ್ಕರಿಸಿದ ಜಿಲ್ಲಾಧಿಕಾರಿಗಳು, ಕದ್ರಿ ಮಲ್ಲಿಕಟ್ಟೆ ಕೊನೆ ನಿಲ್ದಾಣ ಇದ್ದುದನ್ನು ನಂತೂರು ವರೆಗೆ, ಕಂಕನಾಡಿ ಇದ್ದುದನ್ನು ಪಂಪ್‌ವೆಲ್‌, ಲೇಡಿಹಿಲ್‌ ಇದ್ದುದನ್ನು ಕೊಟ್ಟಾರ ಕ್ರಾಸ್ ಎಂದು ಮತ್ತೂ ಹಿಂದಕ್ಕೆ ನಿಗದಿಪಡಿಸಿದರು. ಅಲ್ಲದೆ 1991 ಮತ್ತು 1994ರಲ್ಲಿ ನೋಟಿಫಿಕೇಷನ್‌ 2013ರ ವರೆಗಿನ ಎಲ್ಲ ಪರವಾನಗಿ ಹೊಂದಿರುವ ಬಸ್‌ಗಳು ಸ್ಟೇಟ್‌ಬ್ಯಾಂಕ್‌ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಲಾಯಿತು. ಆದರೆ 2013ರ ಬಳಿಕ ಡಿಎಂ ನೋಟಿಫಿಕೇಷನ್‌ ಕಾರಣಕ್ಕೆ ಹೊಸ ಬಸ್‌ಗಳ ಪರವಾನಗಿಗೆ ಮಾತ್ರ ಇದನ್ನು ಅನ್ವಯಗೊಳಿಸಲಾಯಿತು.

ಈ ಮಧ್ಯೆ ಸ್ಟೇಟ್‌ಬ್ಯಾಂಕ್‌ ಪರಿಸರ ಸಾಕಷ್ಟು ಅಭಿವೃದ್ಧಿ ಕಂಡಿದೆ. ರಸ್ತೆಗಳ ಅಗಲೀಕರಣವಾಗಿದೆ. ಹೀಗಾಗಿ ಡಿಎಂ ನೋಟಿಫಿಕೇಷನ್‌ ರದ್ದುಪಡಿಸುವಂತೆ ಸಾರಿಗೆ ಪ್ರಾಧಿಕಾರದ ಸಭೆಗಳಲ್ಲಿ ಸಾಕಷ್ಟು ಒತ್ತಾಯಗಳು ಕೇಳಿಬಂದಿವೆ. ನಾಗರಿಕರು ಮಾತ್ರವಲ್ಲದೆ, ಖಾಸಗಿ ಬಸ್‌ ಮಾಲೀಕರು ಹಾಗೂ ಕೆಸ್ಸಾರ್ಟಿಸಿ ಅಧಿಕಾರಿಗಳೂ ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.

ಇನ್ನು ಡಿಎಂ ನೋಟಿಫಿಕೇಷನ್‌ ಅಪ್ರಸ್ತುತ?:

ಈಗ ಸ್ಟೇಟ್‌ಬ್ಯಾಂಕ್‌ ಬಳಿಯ ಡಿಸಿ ಕಚೇರಿ ಹೊರಭಾಗದ ಪಡೀಲಿಗೆ ಸ್ಥಳಾಂತಗೊಂಡಿದೆ. ಹೀಗಾಗಿ ಡಿಸಿ ಕಚೇರಿ ಕಾರಣಕ್ಕೆ ಹೊರಡಿಸಿದ್ದ ಡಿಎಂ ನೋಟಿಫಿಕೇಷನ್‌ ಮಹತ್ವ ಕಳೆದುಕೊಂಡಿದೆ ಎನ್ನುವುದು ಬಸ್‌ ಸಂಘಟನೆಗಳ, ನಾಗರಿಕರ ಅಭಿಪ್ರಾಯ.

ಡಿಸಿ ಕಚೇರಿ ಪಡೀಲಿಗೆ ಸ್ಥಳಾಂತರಗೊಂಡ ಕಾರಣ ಇಲ್ಲಿದ್ದ ವಿವಿಧ ಇಲಾಖೆಗಳು ಕೂಡ ಸ್ಥಳಾಂತಗೊಂಡಿವೆ. ಇಲ್ಲಿ ಡಿಸಿ ಕಚೇರಿ ಇದ್ದಾಗ ಸಹಜವಾಗಿ ಜನದಟ್ಟಣೆ ಇರುತ್ತಿತ್ತು. ಇನ್ನು ಹಾಗೆ ಇಲ್ಲ, ನಾಗರಿಕರು ಡಿಸಿ ಕಚೇರಿ ಕೆಲಸಕ್ಕೆ ಪಡೀಲಿಗೆ ತೆರಳಬೇಕು. ಹಾಗಾಗಿ ಡಿಎಂ ನೋಟಿಫಿಕೇಷನ್‌ ರದ್ದುಗೊಳಿಸಲು ಜಿಲ್ಲಾಧಿಕಾರಿಗಳು ಮುಂದಾಗಬೇಕು. ಮಾತ್ರವಲ್ಲ, ಪಡೀಲಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಅನಿವಾರ್ಯವಾದರೆ ಹೊಸದಾಗಿ ನೋಟಿಫಿಕೇಷನ್‌ ಹೊರಡಿಸಬೇಕು ಎಂದು ಆಗ್ರಹಿಸುತ್ತಾರೆ. -------------------ಪ್ರಸ್ತುತ ಸ್ಟೇಟ್‌ಬ್ಯಾಂಕ್‌ ಬಸ್ಟೇಂಡ್‌ಗೆ ದಿನಂಪ್ರತಿ ಸಿಟಿ ಹಾಗೂ ಗ್ರಾಮಾಂತರ, ಎಕ್ಸ್‌ಪ್ರೆಸ್‌, ಕಾಂಟ್ರಾಕ್ಟ್‌ ಕ್ಯಾರೇಜ್ ಸೇರಿ ಸುಮಾರು ಒಂದು ಸಾವಿರಕ್ಕೂ ಅಧಿಕ ಬಸ್‌ಗಳು ಬಂದುಹೋಗುತ್ತಿವೆ. ಈಗ ಡಿಸಿ ಕಚೇರಿ ಸ್ಥಳಾಂತಗೊಂಡ ಕಾರಣ ಜನದಟ್ಟಣೆಯ ಸಾಧ್ಯತೆ ದೂರ. ಹಳೆ ಡಿಸಿ ಕಚೇರಿಗೆ ಬೇರೆ ಇಲಾಖೆಗಳು ಸ್ಥಳಾಂತಗೊಂಡರೂ ಅವುಗಳು ಅಷ್ಟಾಗಿ ಜನದಟ್ಟಣೆ ಉಂಟು ಮಾಡುವ ಕಚೇರಿಗಳು ಆಗಿರುವುದಿಲ್ಲ. ಹಾಗಾಗಿ ಡಿಎಂ ನೋಟಿಫಿಕೇಷನ್‌ ರದ್ದುಪಡಿಸುವುದೇ ಉತ್ತಮ ಎಂಬ ಸಲಹೆ ನಾಗರಿಕರಿಂದ ಕೇಳಿಬರುತ್ತಿದೆ. ----------------ಪಡೀಲಿಗೆ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳಾಂತರಗೊಂಡ ಕಾರಣ ಡಿಎಂ ನೋಟಿಫಿಕೇಷನ್‌ನ್ನು ಇನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಪಡೀಲಿಗೆ ನಿರಂತರ ಸಾರಿಗೆ ಸಂಪರ್ಕ ಏರ್ಪಡಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಬೇಕು. ಇಲ್ಲದಿದ್ದರೆ ಜನಸಾಮಾನ್ಯರಿಗೆ ಡಿಸಿ ಕಚೇರಿ ಕೆಲಸಕ್ಕೆ ಆಗಮಿಸಲು ಸಾರಿಗೆ ಸಮಸ್ಯೆ ಉಂಟಾದೀತು.

-ಹನುಮಂತ ಕಾಮತ್‌, ಅಧ್ಯಕ್ಷರು, ನಾಗರಿಕ ಹಿತರಕ್ಷಣಾ ಸಮಿತಿ, ಮಂಗಳೂರು

-------------