ಸಾರಾಂಶ
ಮಾಹಿತಿ ಹಕ್ಕು ಕಾಯ್ದೆಯು ನಾಗರೀಕರನ್ನು ಸಶಕ್ತಗೊಳಿಸಿದೆ. ಆಡಳಿತಾತ್ಮಕ ಸುಧಾರಣೆಗಳನ್ನು ತಂದಿದೆ. ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದೆ ಹಾಗೂ ಒಂದು ಹಂತಕ್ಕೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಆದಾಗ್ಯೂ ಇನ್ನೂ ಹಲವು ಸವಾಲುಗಳು ಉಳಿದುಕೊಂಡಿವೆ. ಈ ಕಾಯ್ದೆ ಅನುಷ್ಠಾನಗೊಂಡು ೨೦ ವರ್ಷ ಕಳೆದಿದ್ದರೂ ಸಾವಿರಾರು ದೂರುಗಳು ಮಾತ್ರ ಬರುತ್ತಿವೆ.
ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ಅಧಿಕಾರಿಗಳು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಶ್ರದ್ದೆಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಹಿತಾಸಕ್ತಿ ರಕ್ಷಿಸಲು ಮಾಹಿತಿ ಹಕ್ಕು ಕಾಯ್ದೆ-೨೦೦೫ನ್ನು ಜಾರಿಗೆ ತರಲಾಗಿದೆ. ಹೊಣೆಗಾರಿಕೆ, ಪಾರದರ್ಶಕತೆ ಹಾಗೂ ಉತ್ತಮ ಆಡಳಿತ ಮಾಹಿತಿ ಹಕ್ಕು ಕಾಯ್ದೆಯ ಮೂಲಮಂತ್ರವಾಗಿದೆ ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತ ಎಸ್.ರಾಜಶೇಖರ್ ಅಭಿಪ್ರಾಯಪಟ್ಟರು. ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ, ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಇಲಾಖೆಗಳ ಕಾರ್ಯದ ಮಾಹಿತಿ
ಆರ್.ಟಿ.ಐ ಕಾಯ್ದೆ ಜಾರಿಗೆ ಮುನ್ನ ಸರ್ಕಾರದ ಮಾಹಿತಿಯು ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಇತ್ತು, ೨೦೦೫ನೇ ಸಾಲಿನಲ್ಲಿ ತೆರಿಗೆದಾರರ ಹಣ ಖರ್ಚು ಮಾಡುವ ಪ್ರತಿ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಕರ್ತವ್ಯಗಳನ್ನು ನಿಭಾಯಿಸುವ ವರದಿಗಳನ್ನು ತಿಳಿದುಕೊಳ್ಳುವ ಸಲುವಾಗಿ ಹಾಗೂ ಆ ಮೂಲಕ ನಾಗರೀಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಯಿತು ಎಂದರು.ಈ ಕಾಯ್ದೆಯು ಇಂದು ನಾಗರೀಕರನ್ನು ಸಶಕ್ತಗೊಳಿಸಿದೆ. ಆಡಳಿತಾತ್ಮಕ ಸುಧಾರಣೆಗಳನ್ನು ತಂದಿದೆ. ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದೆ ಹಾಗೂ ಒಂದು ಹಂತಕ್ಕೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಆದಾಗ್ಯೂ ಇನ್ನೂ ಹಲವು ಸವಾಲುಗಳು ಉಳಿದುಕೊಂಡಿವೆ. ಈ ಕಾಯ್ದೆ ಅನುಷ್ಠಾನಗೊಂಡು ೨೦ ವರ್ಷ ಕಳೆದಿದ್ದರೂ ಸಾವಿರಾರು ದೂರುಗಳು ಬರುತ್ತಿವೆ. ಪ್ರತಿ ಮಾಹೆ ಅಂದಾಜು ೧೦೦೦ಕ್ಕೂ ಅಧಿಕ ಮೇಲ್ಮನವಿ ಅರ್ಜಿಗಳು ದಾಖಲಾಗುತ್ತಿದ್ದು, ಸಾರ್ವಜನಿಕ ಕ್ಷೇತ್ರಗಳಲ್ಲಿ ಮಾಹಿತಿ ನೀಡಲು ಉಪೇಕ್ಷೆ ಮಾಡುತಿರುವುದನ್ನು ತೋರಿಸುತ್ತದೆ ಎಂದರು.ಕಾನೂನಿನ ಉದ್ದೇಶ ಈಡೇರಬೇಕು
ಬಹುತೇಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೊದಲ ಮೇಲ್ಮನವಿ ಪ್ರಾಧಿಕಾರಗಳು ತಪ್ಪುಗಳನ್ನು ಮುಚ್ಚಿ ಹಾಕಲು ಅಥವಾ ಯಾರದೋ ಹಿತಾಸಕ್ತಿ ಕಾಪಾಡಲು ಮಾಹಿತಿ ನಿರಾಕರಿಸುತ್ತಾರೆ ಅಥವಾ ಕಾಯ್ದೆಯ ಪ್ರಾಮುಖ್ಯತೆಯ ಅರಿವಿನ ಕೊರತೆ ಇರುತ್ತದೆ. ಈ ಹಿಂಜರಿಕೆಯು ಕಾನೂನಿನ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಬೆಂಗಳೂರು ನಗರ, ಗುಲ್ಬರ್ಗ ಹೊರತುಪಡಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳು ಸ್ವೀಕೃತವಾಗುವುದು ಕಂಡುಬರುತ್ತದೆ. ಇದು ಸಾರ್ವಜನಿಕರಲ್ಲಿ ಕಾಯ್ದೆ ಬಗ್ಗೆ ಇರುವ ಅರಿವನ್ನು ತೋರಿಸಿದರೆ, ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹ ಕಾಣಬಹುದಾಗಿದೆ ಎಂದರು.೨೯೮೮ ಮೇಲ್ಮನವಿಗಳು ಬಾಕಿ
ಅಧಿಕಾರಿಗಳು ಹೊಣೆಗಾರಿಕೆಯಿಂದ ವರ್ತಿಸಬೇಕು ಯಾವುದೇ ಹಿಂಜರಿಕೆ ಇಲ್ಲದೆ. ಸ್ಪಷ್ಠ ಮಾಹಿತಿಯನ್ನು ಒದಗಿಸುವುದು ಕರ್ತವ್ಯವಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ತಮಗೆ ಸಂಬಂಧಿಸದ ಅರ್ಜಿಗಳನ್ನು ಸೂಕ್ತ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಬೇಕು. ಕೋಲಾರ ಜಿಲ್ಲೆಯಲ್ಲಿ ೨೯೮೮ ಮೇಲ್ಮನವಿ ಅರ್ಜಿಗಳು ಬಾಕಿಯಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅತಿ ಹೆಚ್ಚು ೧೮೩೬ ಅರ್ಜಿಗಳು ಮೇಲ್ಮನವಿಯಲ್ಲಿ ಬಾಕಿ ಇವೆ ಎಂದರು.ನಿಯಮಾನುಸಾರ ಮಾಹಿತಿ ನೀಡಿ
ಅಂತೆಯೇ ಕಂದಾಯ ಇಲಾಖೆಯಲ್ಲಿ ೬೨೩, ನಗರಾಭಿವೃದ್ಧಿಯಲ್ಲಿ ೧೨೩, ಸಮಾಜ ಕಲ್ಯಾಣ ಇಲಾಖೆಯಲ್ಲಿ ೮೦, ಗೃಹ ಇಲಾಖೆಯಲ್ಲಿ ೭೨, ಅರಣ್ಯ ಇಲಾಖೆಯಲ್ಲಿ ೫೧, ಶಿಕ್ಷಣ ಇಲಾಖೆಯಲ್ಲಿ ೩೦, ಕೃಷಿ ಇಲಾಖೆಯಲ್ಲಿ ೨೦, ಇಂಧನ ಇಲಾಖೆಯಲ್ಲಿ ೨೦, ಜಲಸಂಪನ್ಮೂಲ ಇಲಾಖೆಯಲ್ಲಿ ೧೬ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಮೇಲ್ಮನವಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸಾಧ್ಯವಾದಷ್ಟು ಪ್ರಥಮ ಮೇಲ್ಮನವಿ ಪ್ರಾಧಿಕಾರದಲ್ಲೇ ನಿಯಮಾನುಸಾರ ಮಾಹಿತಿ ಒದಗಿಸಿ ಆಯೋಗದ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಿಪಂ ಸಿಇಓ ಡಾ.ಪ್ರವೀಣ್ ಪಿ. ಬಾಗೇವಾಡಿ, ಎಡಿಸಿ ಮಂಗಳಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಉಪ ಕಾರ್ಯದರ್ಶಿ ಶಿವಕುಮಾರ್ ಇದ್ದರು.