ಅಂಕಲಿಯಲ್ಲಿ ಮೊಳಗಿದ ಮಯೂರ ಚಿತ್ರಮಂದಿರ ಘಾಟು!

| Published : May 18 2025, 01:08 AM IST

ಅಂಕಲಿಯಲ್ಲಿ ಮೊಳಗಿದ ಮಯೂರ ಚಿತ್ರಮಂದಿರ ಘಾಟು!
Share this Article
  • FB
  • TW
  • Linkdin
  • Email

ಸಾರಾಂಶ

ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ವ್ಯಾಪ್ತಿ ಬಳಿಯ ಅಂಕಲಿ ಈಗ ಗ್ರಾಮವಾಗಿ ಉಳಿದಿಲ್ಲ. ನಗರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ವಾಣಿಜ್ಯ, ಉದ್ದಿಮೆ, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಸಿನೆಮಾ ಥಿಯೇಟರು, ಸಕ್ಕರೆ ಕಾರ್ಖಾನೆಗಳ ಜೊತೆಗೆ ಮೈದುಂಬಿ ಬೆಳೆದಿರುವ ಪ್ರಗತಿಶೀಲ ಗ್ರಾಮ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಂಕಲಿ ಗ್ರಾಮದ ಪ್ರಗತಿಗೆ ಕನಸು ಕಂಡವರು ಕೋರೆ ಮನೆತನದವರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ವ್ಯಾಪ್ತಿ ಬಳಿಯ ಅಂಕಲಿ ಈಗ ಗ್ರಾಮವಾಗಿ ಉಳಿದಿಲ್ಲ. ನಗರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ವಾಣಿಜ್ಯ, ಉದ್ದಿಮೆ, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಸಿನೆಮಾ ಥಿಯೇಟರು, ಸಕ್ಕರೆ ಕಾರ್ಖಾನೆಗಳ ಜೊತೆಗೆ ಮೈದುಂಬಿ ಬೆಳೆದಿರುವ ಪ್ರಗತಿಶೀಲ ಗ್ರಾಮ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಂಕಲಿ ಗ್ರಾಮದ ಪ್ರಗತಿಗೆ ಕನಸು ಕಂಡವರು ಕೋರೆ ಮನೆತನದವರು.

ಲಿಂ.ಬಸವಪ್ರಭು ಕೋರೆಯವರು ಸ್ವಾತಂತ್ರ್ಯ ಹೋರಾಟದ ಸೇನಾನಿಯಾಗಿ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದರೆ, ಮನೆತನದ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಿದವರು ಲಿಂ.ಚಿದಾನಂದ ಕೋರೆಯವರು. ಅವರು ತಂದೆಯೊಂದಿಗೆ ಸಹಕಾರಿ ಕ್ಷೇತ್ರಕ್ಕೆ ಶ್ರೀಕಾರ ಹಾಕಿದರು. ಅವರ ಅಕಾಲಿಕ ನಿಧನದ ನಂತರ ಅದರ ಜವಾಬ್ದಾರಿಯನ್ನು ಹೊತ್ತು ಮನೆತನದ ಹಿರಿಮೆ ಗರಿಮೆಗಳನ್ನು, ಅಂಕಲಿಯ ಹೆಸರನ್ನು ದಿಲ್ಲಿಯಿಂದ ಜಾಗತಿಕವಾಗಿ ವಿಸ್ತರಿಸಿದವರು ಡಾ.ಪ್ರಭಾಕರ ಕೋರೆಯವರು.ಡಾ.ಪ್ರಭಾಕರ ಕೋರೆಯವರ ಆಸಕ್ತಿ ಮತ್ತು ಅಭಿರುಚಿ ವಿಭಿನ್ನ ವಿಶಿಷ್ಟ. ಕೃಷಿ, ಶಿಕ್ಷಣ, ಸಹಕಾರ, ವೈದ್ಯಕೀಯ, ಉದ್ಯಮ, ಕಲೆ-ಸಾಹಿತ್ಯ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ಕಳೆದ ಐದು ದಶಕಗಳಿಂದ ತೊಡಗಿಸಿಕೊಂಡವರು. ಅದರಂತೆ ಸಿನಿಮಾ ರಂಗವನ್ನು ಅವರು ಬಿಟ್ಟಿಲ್ಲ. ಇದು ಅವರ ಕಲಾ ಅಭಿರುಚಿಗೆ ವ್ಯಾಖ್ಯಾನ.ಒಂದು ಕಾಲಕ್ಕೆ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಸಿನೆಮಾ ಥೇಟರ್‌ಗಳೇ ಇರಲಿಲ್ಲ. ಆಗೆಲ್ಲ ಟೆಂಟ್ ಟಾಕೀಸುಗಳೇ ಇದ್ದವು. ಅವು ಟೂರಿಂಗ್ ಟಾಕೀಸಗಳೆಂದು ಪ್ರಸಿದ್ಧಿಯಾಗಿದ್ದವು. ಇದು ಸರಿಸುಮಾರು 1975ರ ಪೂರ್ವದ ಮಾತು. ಆ ಕೊರತೆ ನೀಗಿಸಲು ಅಂಕಲಿಯ ಪ್ರಸಿದ್ಧ ಕೋರೆ ಮನೆತನದ ಲಿಂ.ಬಸವಪ್ರಭು ಕೋರೆಯವರು ಜೀವಿತ ಅವಧಿಯಲ್ಲಿ ಒಂದು ಸಿನೆಮಾ ಗೃಹ ಕಟ್ಟಿದರೂ ಅಲ್ಲಿ ಸಿನೆಮಾ ಪ್ರದರ್ಶನಗೊಳ್ಳುತ್ತಿರಲಿಲ್ಲ. 1968-69ರ ಕಾಲಕ್ಕೆ ಬಿ.ಕಾಂ. ಪದವಿ ಸಂಪಾದಿಸಿದ ಪ್ರಭಾಕರ ಕೋರೆಯವರ ಗೆಳೆಯರ ಬಳಗ ಬೆಳೆದಿತ್ತು. ಅವರಲ್ಲಿ ರಮೇಶ ದೇಸಾಯಿಯವರೂ ಒಬ್ಬರು. ಗೋಗಟೆ ಕಾಮರ್ಸ್ ಕಾಲೇಜಿನ ಕ್ಲಾಸ್‌ಮೇಟ್‌. ಅದೇ ಕಾಲಕ್ಕೆ ರಮೇಶ ದೇಸಾಯಿ ಹಾಗೂ ಶ್ರೀ ಶಿರೀಷ ಆಚಾರ್ಯ ಅವರು ಸೇರಿ ಫಿಲ್ಮ್‌ ಡಿಸ್ಟ್ರಿಬ್ಯೂಶನ್ ಆಫೀಸ್ ಪ್ರಾರಂಭಿಸಿದರು. ಆಚಾರ್ಯ ಫಿಲ್ಮ್‌ ಡಿಸ್ಟ್ರಿಬ್ಯೂಶನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕುವಾಗ ಶ್ರೀ ಪ್ರಭಾಕರ ಅವರಿಗೆ ಅಂಕಲಿಯಲ್ಲಿ ಒಂದು ಥೇಟರ್ ಕಟ್ಟಿಸಲು ಹೇಳಿದರು. ಆಗ ಪ್ರಭಾಕರ ಅವರು ಮನೆಯಲ್ಲಿ ’ನನಗ ತಂಬಾಕು-ಬೆಲ್ಲದ ವ್ಯಾಪಾರ ಮಾಡೋದರಲ್ಲಿ ಆಸಕ್ತಿ ಇಲ್ಲ. ನನಗ ಅಂಕಲಿಯೊಳಗ ಒಂದು ಬಿಸಿನೆಸ್ ಬೇಕು’ ಎಂದು ಹೇಳಿ ಸಿನೆಮಾ ಥೇಟರ್ ಕಟ್ಟುವ ಬಗ್ಗೆ ಪ್ರಸ್ತಾಪ ಇಟ್ಟರು. ಆಗ ಅವರ ತಂದೆ ಬಸವಪ್ರಭು ಈಗಾಗಲೇ ಒಂದು ಥೇಟರ್ ಇದೆ. ಮತ್ತೊಂದು ಕಟ್ಟುವುದು ಬೇಡ. ಅದೂ ಅಲ್ಲದ ನಮ್ಮಲ್ಲಿ ದುಡಿಯುವ ಕಾರ್ಮಿಕರೇ ತಮ್ಮ ದುಡಿಮೆಯಿಂದ ಬಂದ ಹಣವನ್ನು ಮನರಂಜನೆಗಾಗಿ ಖರ್ಚು ಮಾಡತಾರ. ನಾವೇ ಪಗಾರ ಕೊಟ್ಟು ಕಸಿದುಕೊಂಡ್ಹಾಗತದ ಎಂದು ಹೇಳಿದರು. ಆಗ ಪ್ರಭಾಕರ ಕೋರೆಯವರು ಕೊಟ್ಟ ಉತ್ತರ ನೋಡಿ ನಾವು ಥೇಟರ್ ಕಟ್ಟದಿದ್ದರೆ ಬೇರೆಯವರು ಕಟ್ಟತಾರ. ನಾವೇ ಕಟ್ಟೋಣ ಎಂದು ಮನವರಿಕೆ ಮಾಡಿ ಅಣ್ಣ ಚಿದಾನಂದ ಕೋರೆಯವರ ಸಹಕಾರದೊಂದಿಗೆ ಬ್ಯಾಂಕಿನಿಂದ ಸಾಲವನ್ನೂ ಪಡೆದು ಅಂಕಲಿಯಲ್ಲಿ ಮಯೂರ ಚಿತ್ರಮಂದಿರವನ್ನು ಕಟ್ಟಿಸಿಯೇ ಬಿಟ್ಟರು.ಉದ್ಘಾಟನೆ:

1975ರಲ್ಲಿ ಮಯೂರ 425 ಆಸನಗಳ ಸುಸಜ್ಜಿತ ಥೇಟರ್ ₹3 ಲಕ್ಷ ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿತು. ಈ ಸಿನೆಮಾ ಗೃಹದ ಉದ್ಘಾಟನೆಗೆ ಅಂದಿನ ಕರ್ನಾಟಕ ರಾಜ್ಯದ ಕಂದಾಯ ಸಚಿವರಾಗಿದ್ದ ದಿ.ಎಚ್.ವಿ.ಕೌಜಲಗಿಯವರು ಆಗಮಿಸಿದ್ದರು. ದಿ.ಚಿದಾನಂದ ಕೋರೆಯವರು ಅಧ್ಯಕ್ಷತೆ ವಹಿಸಿದ್ದರು.ಅಂದಿನ ಡೆಪ್ಯುಟಿ ಕಮೀಶನರ್ ಜ್ಯೋತಿ ಸೆಂತಾನ, ಕೋರೆಯವರೇ ಹಳ್ಳಿಯೊಳಗ ಥೇಟರ್ ಮಾಡುದಕ್ಕಿಂತ ಶಹರದಾಗ ಮಾಡ್ರಿ ಇನ್‌ಕಮ್ ಆಗ್ತದ ಎಂದು ಸಲಹೆ ಮಾಡಿದರು. ಆಗ ಕೋರೆಯವರು ’ಸಾಹೇಬ್ರ ಶಹರದ ಜನರಿಗೆ ಅನುಕೂಲ ಇರ್ತದ, ಹಳ್ಳಿ ಜನರಿಗೆ ಸಿಟಿಗೆ ಹೋಗಲಿಕ್ಕೆ ಆಗೋದಿಲ್ಲ. ರೈತರು ಮುಂಜಾನಿಂದ ಸಂಜಿಮಟ ಹೊಲದಾಗ ದುಡದ ಹೈರಾಣ ಆಗಿರ್ತಾರ. ಅವರಿಗೆ ಸಂಜಿ ಮುಂದ ಮನರಂಜನೆ ಇರೋದಿಲ್ಲ. ಅದಕ್ಕ ಹಳ್ಳಿಯೊಳಗ ಮಾಡೇನ್ರಿ’ ಎಂದದ್ದು ಡಾ.ಕೋರೆಯವರ ದೃಢವಾದ ಇಚ್ಛಾಶಕ್ತಿಗೆ ನಿದರ್ಶನವಾಗಿತ್ತು.

ಮಯೂರ ಚಿತ್ರ ಮಂದಿರ ಉದ್ಘಾಟನೆಯಾಗಿದ್ದು ’ದೇವರಗುಡಿ’ ಕನ್ನಡ ಚಿತ್ರಪ್ರದರ್ಶನದೊಂದಿಗೆ. ದಿನಕ್ಕೆ ಕೇವಲ ಎರಡು ಪ್ರದರ್ಶನಗಳು. ಸಂಜೆ 6 ಹಾಗೂ ರಾತ್ರಿ 9ಕ್ಕೆ ತಿಕೀಟು ದರ ₹1, ₹1-50 ಮತ್ತು ₹2. ಹೀಗೆ ಮಯೂರ ಗಡಿಭಾಗದಲ್ಲಿ ಹೊಸ ಅಧ್ಯಾಯವನ್ನೇ ಪ್ರಾರಂಭಿಸಿತು. ತದನಂತರದಲ್ಲಿ 508 ಆಸನಗಳಿಗೆ ಚಿತ್ರಮಂದಿರವನ್ನು ವಿಸ್ತರಿಸಲಾಯಿತು.ಖ್ಯಾತ ನಟನಟಿಯರ ಭೇಟಿ:

ನಾಡಿನ ಚಲನಚಿತ್ರ ರಂಗದ ಖ್ಯಾತ ಕಲಾವಿದರಾದ ದಿ.ಉದಯಕುಮಾರ, ಶ್ರೀನಾಥ, ಭಾರತಿ, ವಿಷ್ಣುವರ್ಧನ, ಟೆನ್ನಿಸ್ ಕೃಷ್ಣ, ಮುಖ್ಯಮಂತ್ರಿ ಚಂದ್ರು, ಸುದರ್ಶನ, ಶೈಲಶ್ರೀ, ಶೃತಿ, ಶರಣ್, ಉಮಾಶ್ರೀ, ಜಯಪ್ರದಾ, ರಾಘವೇಂದ್ರ ರಾಜಕುಮಾರ, ಪುನೀತ ರಾಜಕುಮಾರರಂತಹ ದಿಗ್ಗಜ ಕಲಾವಿದರು ಭೇಟಿ ನೀಡಿ ಶುಭಕೋರಿದ್ದು ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು.ಮಯೂರ ಚಿತ್ರಮಂದಿರಲ್ಲಿ ಇಲ್ಲಿಯವರೆಗೆ 2210 ಚಲನಚಿತ್ರಗಳು ಪ್ರದರ್ಶನಗೊಂಡಿವೆ. ಅದರಲ್ಲಿ 80ರಷ್ಟು ಚಿತ್ರಗಳು ಕನ್ನಡದ ಚಿತ್ರಗಳು ಎಂಬುದು ಹೆಮ್ಮೆಯ ಸಂಗತಿ. ಗಡಿಭಾಗದಲ್ಲಿ ಕನ್ನಡ ಧ್ವನಿಯನ್ನು ಮೊಳಗಿಸಿದ ಕೀರ್ತಿ ಮಯೂರ ಥಿಯೇಟರ್‌ಗೆ ಸಲ್ಲುತ್ತದೆ. ಡಾ.ರಾಜಕುಮಾರ ಅವರ ಅಸಂಖ್ಯ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿದ್ದು ವಿಶೇಷ. ಭಕ್ತ ಸಿರಿಯಾಳ, ಭಕ್ತ ಕುಂಬಾರ, ಅನುರಾಗ ಅರಳಿತು, ಬಬ್ರುವಾಹನ, ಮಯೂರ, ಅನುರಾಗ ಅರಳಿತು, ಆಕಸ್ಮಿಕ, ಒಡಹುಟ್ಟಿದವರು ಹೀಗೆ ಒಂದರ ಹಿಂದೊಂದು ಒಂದು ಸೂಪರ್‌ಹಿಟ್ ಚಿತ್ರಗಳು ಪ್ರದರ್ಶನಗೊಂಡಿವೆ. ಚಂದ್ರಚಕೋರಿ, ಜನುಮದ ಜೋಡಿ, ಅಣ್ಣ ತಂಗಿ ಮೊದಲಾದ ಚಿತ್ರಗಳೋ ಜನತೆಯನ್ನು ಆಕರ್ಷಿಸಿದ್ದು ಒಂದು ದಾಖಲೆ. ಇದರೊಂದಿಗೆ ಪರಭಾಷಾ ಚಿತ್ರಗಳನ್ನು ಮಯೂರ ಪ್ರದರ್ಶಿಸಿದೆ. 197 ಹಿಂದಿ, 34 ಮರಾಠಿ, 14 ತೆಲಗು, 3 ಇಂಗ್ಲಿಷ್ ಭಾಷಾ ಚಿತ್ರಗಳು ಇಲ್ಲಿಯವರೆಗೆ ಪ್ರದರ್ಶನಗೊಂಡು ಪ್ರೇಕ್ಷಕರ ಅಭಿರುಚಿಗೆ ರಸದೌತಣ ನೀಡಿದೆ. ಅಸಂಖ್ಯ ಪ್ರೇಕ್ಷಕರಗಳನ್ನು ಸೆಳೆದ ಚಿತ್ರಗಳು:

ಒಂದು ಕಾಲದಲ್ಲಿ ಮಯೂರ ಥಿಯಟರ್ ಜನತೆಯನ್ನು ಎಷ್ಟು ಪ್ರಭಾವಿತಗೊಳಿಸಿತು ಎಂದರೆ ಜನರನ್ನು ನಿಯಂತ್ರಿಸುವುದೂ ದುಸ್ತರವಾಗುತ್ತಿತ್ತು. ಭಕ್ತ ಸಿರಿಯಾಳ ಚಲನಚಿತ್ರವು 50 ದಿನಗಳವರೆಗೆ ಓಡಿತ್ತು. 77 ಸಾವಿರ ಜನರು ವೀಕ್ಷಿಸಿದ್ದು, ಸಾರ್ವಕಾಲಿಕ ದಾಖಲೆ. ಭಕ್ತಕುಂಬಾರ ಚಿತ್ರ ಹಾಗೂ ಅನುರಾಗ ಅರಳಿತು ಚಿತ್ರಗಳನ್ನು 30 ಸಾವಿರದಷ್ಟು ಜನರು ನೋಡಿ ಕಣ್ತುಂಬಿಕೊಂಡರು. ಅದರಲ್ಲಿಯೂ ಸಂಗೊಳ್ಳಿ ರಾಯಣ್ಣ ಚಿತ್ರವು 100 ದಿನಗಳ ಜಯಭೇರಿ ಬಾರಿಸಿತು. 67374 ಜನ ಈ ಚಿತ್ರವನ್ನು ವೀಕ್ಷಿಸಿ ದಾಖಲೆ ಬರೆದರು.ಕನ್ನಡ ಸಿನಿಮಾಗಳ ಆರ್ಭಟ:

ಈಗಾಗಲೇ ಹೇಳಿದಂತೆ ಗಡಿಭಾಗವಾದ ಅಂಕಲಿಯಲ್ಲಿ ಹೆಚ್ಚು ಪ್ರದರ್ಶನಗೊಂಡಿದ್ದು ಕನ್ನಡದ ಸಿನಿಮಾಗಳು. ಡಾ.ಕೋರೆಯವರು ಒಂದರ ಹಿಂದೊಂದು ಕನ್ನಡದ ಖ್ಯಾತ ಚಿತ್ರಗಳನ್ನು ಥಿಯಟರ್‌ಗೆ ತಂದರು. ಕನ್ನಡ ಭಾಷಾ ಪ್ರೇಮವನ್ನು ಮೂಡಿಸಿದರು. ಡಾ.ರಾಜಕುಮಾರ ಚಿತ್ರಗಳಾದ ಬೇಡರ ಕಣ್ಣಪ್ಪ, ಎಮ್ಮೆ ತಮ್ಮಣ್ಣ, ರೌಡಿರಂಗಣ್ಣ, ಅನುರಾಗ ಅರಳಿತು ಅನೇಕ ಚಿತ್ರಗಳು ಸರಣಿಯಾಗಿ ಪ್ರದರ್ಶನಗೊಂಡವು. ರಾಜ ಚಿತ್ರಗಳು ಬಂದರೆ ಪ್ರತಿದಿನ ಹೌಸ್‌ಫುಲ್. ಜನರನ್ನು ನಿಯಂತ್ರಿಸುವುದು ಅಷ್ಟೇ ಕಷ್ಟವಾಗುತ್ತಿತ್ತು. ಸುತ್ತಮುತ್ತಲಿನ ಅಸಂಖ್ಯ ಗ್ರಾಮಗಳ, ಪಟ್ಟಣ ಪ್ರದೇಶಗಳ ಜನತೆ ತಂಡೋಪತಂಡವಾಗಿ ಬಂದು ವೀಕ್ಷಿಸಿ ತೆರಳುತ್ತಿದ್ದ ದೃಶ್ಯ ಸಹಜವಾಗಿತ್ತು. ಇಂಥ ಮೋಡಿ ಮಾಡಿದ ಶ್ರೇಯಸ್ಸು ’ಮಯೂರ’ಚಿತ್ರಮಂದಿರದು. ಮಯೂರದಿಂದ ಅಂಕಲಿಯು ಮತ್ತಷ್ಟು ಕಳೆಕಟ್ಟಿತು.ಸುಸಜ್ಜಿತ ಸೌಲಭ್ಯಗಳ ಚಿತ್ರಮಂದಿರ: ಪ್ರಸ್ತುತ ಈ ಚಿತ್ರ ಮಂದಿರದ ಮಾಲೀಕರು ಶ್ರೀಮತಿ ಆಶಾ ಪ್ರಭಾಕರ ಕೋರೆಯವರು. ಶ್ರೀಮತಿಯವರೊಂದಿಗೆ ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಡಾ.ಕೋರೆಯವರು ಕೈಹಾಕಿದೆಡೆಗೆ ಅದ್ಭುತ ಸೌಧವೇ ನಿರ್ಮಿಸುತ್ತಾರೆ ಎಂಬ ಮಾತು ಸೂರ್ಯನಷ್ಟೇ ಸತ್ಯ. ಈ ಸಂದರ್ಭದಲ್ಲಿ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಟಾಕೀಸ್‌ನ ಮ್ಯಾನೇಜರ್ ಅಣ್ಣಾಸಾಹೇಬ ಜಕಾತಿಯವರ ಸೇವೆ ಮರೆಯುವಂತಿಲ್ಲ. ಒಂದು ಕಾಲದಲ್ಲಿ ಸಾಮಾನ್ಯ ಥೇಟರ್ ಆಗಿ ಪ್ರೇಕ್ಷಕರನ್ನು ರಂಜಿಸಿದ್ದ ’ಮಯೂರ’ಚಿತ್ರ ಮಂದಿರವು ಡಾ.ಕೋರೆಯವರ ಸಂಕಲ್ಪದಂತೆ ಭವ್ಯವಾಗಿ ರೂಪುಗೊಂಡಿತು. ಬೆಂಗಳೂರು, ಬೆಳಗಾವಿಗಳಲ್ಲಿರುವ ಅತ್ಯಾಧುನಿಕ ಥಿಯೆಟರ್‌ಗಳಂಥೆ ’ಮಯೂರ’ ಅತ್ಯಾಧುನಿಕ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿದೆ. ವಿಶಾಲವಾದ ಡಿಜಿಟಲ್ ಸ್ಕ್ರೀನ್, ಡಿಜಿ ಸೌಂಡ್ ಸಿಸ್ಟಮ್, ಸುಂದರವಾದ ಆಸನಗಳ ವ್ಯವಸ್ಥೆ, ನೀರಿನ ಸೌಕರ‌್ಯ, ಉತ್ತಮವಾದ ಪರಿಸರಸ್ನೇಹಿ ನೈರ್ಮಲ್ಯ ಹಾಗೂ ಸ್ವಚ್ಛತೆಗೆ ವಿಶೇಷವಾದ ಆದ್ಯತೆ ನೀಡಿದೆ. ಅದಕ್ಕಾಗಿಯೇ ಎಲ್ಲೆಡೆಗೆ ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು, ನೂಕುನುಗ್ಗಲಾಗದಂತೆ ಮುಂಜಾಗ್ರತೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದೆ.2025 ಸುವರ್ಣ ಸಂಭ್ರಮ:

ಹೊಸತನವನ್ನು ಕಾಣುವ ಅಭಿರುಚಿ ಇದ್ದರೆ ಲೋಕಕ್ಕೆ ಹೊಸತನವನ್ನು ನೀಡಲು ಸಾಧ್ಯ’ಎಂಬ ನುಡಿಗೆ ಡಾ.ಕೋರೆಯವರ ಕ್ರಿಯಾಶೀಲ ಮನಸ್ಸು, ರಚನಾತ್ಮಕವಾದ ಕಾರ್ಯಗಳು ಹೊಸತನಕ್ಕೆ ಭಾಷ್ಯವನ್ನು ಬರೆದಿವೆ ಎಂಬಂತೆ ಚಿತ್ರರಂಗದೊಂದಿಗೆ ನಂಟು ಬೆಳೆಸಿಕೊಂಡು ಪುಟ್ಟ ಅಂಕಲಿಯಲ್ಲಿ ಹೊಸ ಜಗತ್ತನೇ ಸೃಷ್ಟಿಸಿದ್ದಾರೆ. ಡಾ.ಕೋರೆಯವರು ಉತ್ತರ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಸದಸ್ಯರಾಗಿ, ಕರ್ನಾಟಕ ಫಿಲ್ಮ ಚೇಂಬರ್ ಆಫ್ ಕಾಮರ್ಸ್‌ದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ನಾಟಕ, ಸಿನೆಮಾಗಳ ಕಲಾಪ್ರೇಮಿಗಳಾಗಿ, ರಂಗಭೂಮಿ ಕಲಾವಿದರನ್ನು, ಖ್ಯಾತ ಗಾಯಕರನ್ನು ಆಹ್ವಾನಿಸಿಆದರ ಗೌರವವನ್ನು ನೀಡಿದ್ದಾರೆ. ಕನ್ನಡ ಸಂಸ್ಕೃತಿಯ ರಕ್ಷಣೆಗೆ ಬದ್ಧರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.