ಟಿಪ್ಪರ್‌-ಶಾಲಾ ವ್ಯಾನ್‌ ಅಪಘಾತ ಬೆನ್ನಲ್ಲೇ ಆದೇಶ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಗಳು ಟಿಪ್ಪರ್‌ ಅತಿ ಭಾರ ಸಾಗಣೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀ ರೂಪ ಸೂಚಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀರೂಪಾ, ರಾತ್ರಿ ವೇಳೆಯಲ್ಲಿ ಟಿಪ್ಪರ್‌ಗಳ ಓಡಾಟವನ್ನು ನಿಯಂತ್ರಿಸಬೇಕು ಎಂದು ತಾಕೀತು ಮಾಡಿದರು.

ಟಿಪ್ಪರ್‌ ಓಡಾಟ ಹಾಗೂ ಅತಿ ಭಾರ ತಡೆಯಲು ತಾಲೂಕಿನಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸುವುದಕ್ಕೂ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶಿಸಿದರು.


ಟಿಪ್ಪರ್‌ ನಿಯಮ ಉಲ್ಲಂಘನೆಗಳನ್ನು ತಡೆಯಲು ಅಘೋಷಿತ ಪರಿಶೀಲನೆಗಳನ್ನು ನಡೆಸುವಂತೆ ಖಡಕ್‌ ಸೂಚನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನೀಡಿದರು.‌

ಬಂಡೀಪುರ ಸುತ್ತಲಿನ ಹೋಂ ಸ್ಟೇ, ರೆಸಾರ್ಟ್‌ಗಳ ಬಗ್ಗೆಯೂ ಮಾಹಿತಿ ಪಡೆದು ಅಕ್ರಮ ಹಾಗೂ ಅನಧಿಕೃತ ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಿ ಎಂದರು.

ಸಭೆಯಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಎಸ್. ಪ್ರಭಾಕರನ್, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್‌ ಮೀನಾ, ತಹಸೀಲ್ದಾರ್‌ ಎಂ.ಎಸ್. ತನ್ಮಯ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರಾಜೇಶ್‌, ವಲಯ ಅರಣ್ಯಾಧಿಕಾರಿಗಳಾದ ಎಚ್.ಎನ್. ನಾಗೇಂದ್ರ ನಾಯಕ್‌, ಬಿ.ಎಂ. ಮಲ್ಲೇಶ್‌, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

---

೨ಜಿಇಟಿ೭

ಗುಂಡ್ಲುಪೇಟೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.