ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಅರಕೆರೆ ಗ್ರಾಮದ ನಾಡಕಚೇರಿ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಡೀಸಿ, ಸ್ವೀಕೃತ ಅಹವಾಲುಗಳನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಉಪ ತಹಸೀಲ್ದಾರ್‌ಗೆ ಸೂಚಿಸಿದರು. ನಂತರ ಕಚೇರಿ ಆವರಣ ಹಾಗೂ ಒಳಾಂಗಣ ಪರಿಶೀಲಿಸಿದರು.
ಸಾರ್ವಜನಿಕರು ಸಲ್ಲಿಸುವ ಅರ್ಜಿಗಳ ಬಾಬ್ತು ನಿಗದಿತ ಅವಧಿಯಲ್ಲಿ ಸಕಾಲ ಸೇವೆಗಳನ್ನು ಸಾರ್ವಜನಿಕರಿಗೆ ಯಾವುದೇ ಲೋಪದೋಷವಿಲ್ಲದಂತೆ ಒದಗಿಸಬೇಕು ಎಂದು ಉಪ ತಹಸೀಲ್ದಾರ್, ಹೋಬಳಿ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಿಳಿಸಿದರು.ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಭೂಹಿಡುವಳಿ ಪ್ರಮಾಣ ಪತ್ರ, ವಂಶವೃಕ್ಷ ಹಾಗೂ ಇತರೆ ಎಲ್ಲಾ ರೀತಿಯ ಸೇವೆಗಳನ್ನು ಸಕಾಲದಲ್ಲಿ ನಿಗದಿಪಡಿಸಿರುವ ಅವಧಿಯಲ್ಲಿಯೇ ಕಡ್ಡಾಯವಾಗಿ ಒದಗಿಸತಕ್ಕದ್ದು, ತಪ್ಪಿದ್ದಲ್ಲಿ ಅಂತಹ ನೌಕರರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಲಾಗುವುದು ಎಂದು ನೌಕರರಿಗೆ ಎಚ್ಚರಿಕೆ ನೀಡಿದರು.
ಕಚೇರಿ ಅಭಿಲೇಖಾಲಯ ಶಾಖೆ ಪರಿಶೀಲಿಸಿ, ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸಿಕೊಂಡೇ ದಾಖಲಾತಿ ನೀಡತಕ್ಕದ್ದು ಹಾಗೂ ನಾಡಕಚೇರಿಗೆ ಸ್ವೀಕೃತವಾಗುದ ಯಾವುದೇ ಶುಲ್ಕವನ್ನು ಕಡ್ಡಾಯವಾಗಿ ಆಯಾ ದಿನದಂದೇ ಸರ್ಕಾರಕ್ಕೆ ಪಾವತಿಸಿ ದಾಖಲೆಗಳನ್ನು ನಿರ್ವಹಣೆ ಮಾಡುವಂತೆ ಸೂಚಿಸಿದರು.ಹೋಬಳಿಯ ಎಲ್ಲಾ ಸಿಬ್ಬಂದಿಯು ಸಾರ್ವಜನಿಕರಿಗೆ ದಿನದ 24ಗಂಟೆಗಳ ಲಭ್ಯವಿದ್ದು, ಸಾರ್ವಜನಿಕರ ಮನವಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕೆಂದು ತಿಳಿಸಿದರು.
ನಂತರ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ದಾಖಲಾತಿ, ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ವಿದ್ಯಾರ್ಥಿಗಳು ಮಲಗುವ ಕೊಠಡಿಗಳು, ಭೋಜನಾಲಯ, ಉಗ್ರಾಣ, ಕ್ರೀಡಾಂಗಣವನ್ನು ವೀಕ್ಷಿಸಿ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು.ಸರ್ಕಾರದಿಂದ ಲಭ್ಯವಾಗುವ ಅನುದಾನವನ್ನು ದುರುಪಯೋಗಪಡಿಸಿಕೊಳ್ಳದೇ ವಿದ್ಯಾರ್ಥಿ ನಿಲಯವನ್ನು ಉನ್ನತೀಕರಿಸುವಲ್ಲಿ ಅಗತ್ಯ ಕ್ರಮವಹಿಸಬೇಕು. ವಿದ್ಯಾರ್ಥಿ ನಿಲಯದ ಸಿಬ್ಬಂದಿ ಬಗ್ಗೆ ಹಾಗೂ ಊಟದ ವ್ಯವಸ್ಥೆ ಬಗ್ಗೆ ಪರಿಶೀಲಿಸಿ, ಶುಚಿ-ರುಚಿಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದು ನಿಲಯಪಾಲಕರುಗಳಿಗೆ ಸೂಚಿಸಿದರು.