ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ರಾಷ್ಟ್ರೀಯ ಹೆದ್ದಾರಿ ಮಡಂತ್ಯಾರು, ಮದ್ದಡ್ಕ ಪಿಲಿಚಾಮುಂಡಿ ಕಲ್ಲು, ವಾಣಿ ಕಾಲೇಜು, ಉಜಿರೆ, ಸೋಮಂತಡ್ಕ, ಮುಂಡಾಜೆ, ಚಾರ್ಮಾಡಿ ಮೊದಲಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಿಸಿದರು.ವಾಣಿ ಕಾಲೇಜು ಬಳಿ ಮಕ್ಕಳಿಗೆ ಹೋಗಲು ಸರ್ವಿಸ್ ರಸ್ತೆ, ಮೋರಿ ಅಗಲೀಕರಣ, ಮಕ್ಕಳಿಗೆ ನಿಲ್ಲಲು ರಸ್ತೆಗೆ ಜಲ್ಲಿ ಹಾಕಬೇಕು ಎಂದು ಪಟ್ಟಣ ಪಂಚಾಯಿತಿ ನಿಕಟಪೂರ್ವ ಉಪಾಧ್ಯಕ್ಷ ಜಯನಂದ ಗೌಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಅಸಮರ್ಪಕ ಕಾಮಗಾರಿಗೆ ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನೀರು ಸರಿಯಾಗಿ ಹೋಗುವಂತೆ, ಕಬ್ಬಿಣ, ರಾಡ್ ಕಾಣದಂತೆ ತಗಡು ಶೀಟು ಹಾಕಬೇಕು. ಜನರಿಗೆ ಅನಾಹುತವಾಗದಂತೆ ಕ್ರಮ ಕೈಗೊಳ್ಳಬೇಕು, ಮುಂದಿನ ಭಾನುವಾರದ ಒಳಗೆ ಕೆಲಸವನ್ನು ಮುಗಿಸಿರಬೇಕು. ಸೋಮವಾರ ಮತ್ತೆ ಭೇಟಿ ನೀಡುತ್ತೇನೆ ಎಂದು ತಾಕೀತು ಮಾಡಿದರು. ಪುತ್ತೂರು ಎಸಿ ಜುಬಿನ್ ಮಹೋಪಾತ್ರ, ರಾಷ್ಟ್ರೀಯ ಹೆದ್ದಾರಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಸಹಾಯಕ ಎಂಜಿನಿಯರ್ ಮಹಾಬಲ ನಾಯ್ಕ್, ಬೆಳ್ತಂಗಡಿ ಅರಣ್ಯ ಇಲಾಖೆ ಆರ್‌ಎಫ್‌ಒ ಮೋಹನ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್, ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ್, ವಾಣಿ ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ, ವರ್ತಕರ ಸಂಘದ ಕಾರ್ಯದರ್ಶಿ ರೊನಾಲ್ಡ್ ಲೋಬೊ, ಸದಸ್ಯರಾದ
ಲ್ಯಾನ್ಸಿ ಪಿಂಟೋ, ವಿನ್ಸೆಂಟ್, ಶೀತಲ್ ಜೈನ್, ಶಶಿಧರ ಪೈ, ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ ಮುಂತಾದವರು ಉಪಸ್ಥಿತರಿದ್ದು ಸಮಸ್ಯೆಗಳ ಕುರಿತು ವಿವರಿಸಿದರು.ಸಮಸ್ಯೆ ಹಲವು: ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಇದರಿಂದ ತಾಲೂಕಿನ ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಚರಂಡಿಗಳ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಸಮೀಪದ ಮನೆಗಳ ಕಡೆ ಬರುತ್ತಿದೆ, ರಸ್ತೆಯನ್ನು ಅಗಲೀಕರಣಗೊಳಿಸಿದ ಕಡೆ ಮರಗಳು ರಸ್ತೆಯತ್ತ ವಾಲಿ ನಿಂತು ಅಪಾಯಕಾರಿ ಸ್ಥಿತಿ ಉಂಟಾಗಿದೆ, ಚರಂಡಿಗಳಿಲ್ಲದೆ ಮಳೆ ನೀರು ಅಲ್ಲಲ್ಲಿ ಸಂಗ್ರಹಗೊಂಡು ರಸ್ತೆಬದಿ ಹಲವೆಡೆ ಕೆರೆಯಂತಾಗಿದೆ, ಡಾಮಾರಿಕರಣವಾಗದ ಸ್ಥಳಗಳಲ್ಲಿ ಸಂಚಾರಕ್ಕೆ ಭಾರಿ ಸಮಸ್ಯೆ ಉಂಟಾಗಿದೆ. ಹೆದ್ದಾರಿಯಿಂದ ಗ್ರಾಮೀಣ ರಸ್ತೆಗಳಿಗೆ ತಿರುವು ಪಡೆಯುವಲ್ಲಿ ಕೆಸರು ತುಂಬಿ ಪಾದಚಾರಿಗಳು, ಶಾಲಾ ಮಕ್ಕಳು ಸಂಚಾರಕ್ಕೆ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಡಾಮಾರಿಕರಣ ಪೂರ್ಣಗೊಂಡಿರುವ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಎರಡು ಅಡಿಗಿಂತ ಅಧಿಕ ಅಂತರವಿದೆ, ಇದರಿಂದ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿರುವ ಕುರಿತು ಸ್ಥಳೀಯರು ಡಿಸಿ ಅವರ ಗಮನಕ್ಕೆ ತಂದರು.ಮರ ತೆರವಿಗೆ ಸೂಚನೆ: ಮಡಂತ್ಯಾರಿನಿಂದ ಉಜಿರೆಯ ಟಿಬಿ ಕ್ರಾಸ್ ತನಕ ಹೆದ್ದಾರಿ ಅಭಿವೃದ್ಧಿಗೆ ಗುರುತಿಸಲಾದ ಮರಗಳನ್ನು ಪೂರ್ಣವಾಗಿ ವಿಲೇವಾರಿ ಮಾಡಲಾಗಿಲ್ಲ. ಗುತ್ತಿಗೆದಾರ ಕಂಪನಿ ಅರಣ್ಯ ಇಲಾಖೆಗೆ ಈ ಪ್ರದೇಶದ ಮರ ತೆರವಿಗೆ ಹಣ ಪಾವತಿಸಿದೆ. ಆದರೆ ಕಾಮಗಾರಿ ಪೂರ್ಣಗೊಳಿಸಿಲ್ಲ ಗುರುತಿಸಲಾದ ಮರಗಳನ್ನು ಒಂದೇ ಬಾರಿ ತೆಗೆದು ಗುತ್ತಿಗೆದಾರರು ಅದನ್ನು ಸಾಗಾಟ ಮಾಡಬೇಕು ಆದರೆ ಆ ಕೆಲಸ ಮಾಡಿಲ್ಲ. ಉಜಿರೆಯ ಟಿಬಿ ಕ್ರಾಸ್‌ನಿಂದ ಚಾರ್ಮಾಡಿ ತನಕ ಗುರುತಿಸಲಾದ ಮರಗಳನ್ನು ಗುತ್ತಿಗೆದಾರರು ದ್ವಿತೀಯ ಹಂತದಲ್ಲಿ ತೆರವುಗೊಳಿಸಬೇಕಿತ್ತು. ಆದರೆ ಅರಣ್ಯ ಇಲಾಖೆ ಈ ಬಗ್ಗೆ ಹಲವು ಬಾರಿ ಸೂಚನೆ ನೀಡಿದರು ಗುತ್ತಿಗೆದಾರ ಕಂಪೆನಿ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಿಚಾರ ಡಿಸಿ ಅವರ ಗಮನಕ್ಕೆ ತಂದಾಗ ಈ ಪ್ರಕ್ರಿಯೆಯನ್ನು ತಕ್ಷಣ ನಡೆಸುವಂತೆ ಸೂಚಿಸಿದರು.