ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಪೊನ್ನಪ್ಪ ಕೆ.ಪಿ. ಅಲಿಯಾಸ್ ವಿನು(41) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಪೊನ್ನಪ್ಪ ಕೆ.ಪಿ. ಅಲಿಯಾಸ್ ವಿನು(41) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಅಕ್ಟೋಬರ್ 21ರಂದು ಪೊನ್ನಪ್ಪ ನಾಪತ್ತೆಯಾಗಿದ್ದು, ಅಕ್ಟೋಬರ್ 26ರಂದು ಅವರ ತಾಯಿ ರೇಣು ಅವರು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಅ.30ರಂದು ಬೆಳಿಗ್ಗೆ ತೋರ ಗ್ರಾಮದ ಬಿದ್ದಂಡ ಕುಟುಂಬಕ್ಕೆ ಸೇರಿದ ವಾಟೆ ಬಿದಿರು ಕಾಡಿನಲ್ಲಿ ತೋಡಿನ ಬದಿಯ ಕೆಸರಿನ ಗುಂಡಿಯಲ್ಲಿ ವ್ಯಕ್ತಿಯ ಕೈ ಹಾಗೂ ಬಟ್ಟೆಯ ಭಾಗ ಕಾಣಿಸಿಕೊಂಡಿದ್ದು, ದುರ್ವಾಸನೆ ಬರುತ್ತಿತ್ತು. ಪರಿಶೀಲನೆ ನಡೆಸಿದಾಗ ಅದು ನಾಪತ್ತೆಯಾಗಿದ್ದ ಪೊನ್ನಪ್ಪ ಅವರ ಮೃತದೇಹವೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗುರುತಿಸಿದ್ದಾರೆ.ಯಾರೋ ದುರುದ್ದೇಶದಿಂದ ಪೊನ್ನಪ್ಪ ಅವರನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಹೂತು ಹಾಕಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸತೀಶ ಕೆ.ಜಿ. (19), ಹೆಚ್.ಬಿ. ರವಿ (61) ಹಾಗೂ ಕೆ.ಎಂ. ಪೊನ್ನಪ್ಪ ಅಲಿಯಾಸ್ ಅಪ್ಪಿ (43) ಎಂಬ ಮೂವರನ್ನು ಬಂಧಿಸಿದ್ದಾರೆ.ವಿರಾಜಪೇಟೆ ಪ್ರಭಾರ ಡಿವೈಎಸ್ಪಿ ಸೂರಜ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿಎಸ್ಐ ಪ್ರಮೋದ್ ಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.