ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಕನ್ನಡ ನಾಮಫಲಕ ಅಳವಡಿಸಲು ನೀಡಲಾದ ಗಡುವು ಬುಧವಾರಕ್ಕೆ ಮುಕ್ತಾಯಗೊಂಡಿದ್ದರೂ ನಗರದಲ್ಲಿ 625 ವಾಣಿಜ್ಯ ಮಳಿಗೆಗಳು ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಂಡಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಫೆ.28ರವರೆಗೆ ಅವಕಾಶ ನೀಡಿದಾಗ ಸುಮಾರು ಮೂರು ಸಾವಿರ ವಾಣಿಜ್ಯ ಮಳಿಗೆಗಳು ಅಳವಡಿಕೆ ಕಾರ್ಯ ಬಾಕಿ ಇತ್ತು. ಹೀಗಾಗಿ ಮಾ.13 ರವರೆಗೆ ವಿಸ್ತರಿಸಲಾಗಿತ್ತು. ಅವಧಿ ಮುಗಿದರೂ ಕನ್ನಡ ನಾಮಫಲಕ ಅಳವಡಿಕೆ ಮಾಡದ ವ್ಯಾಪಾರಿಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಬಿಬಿಎಂಪಿ ಆದೇಶ ಮಾಡಿಲ್ಲ.
ಮತ್ತೆ ಗಡುವು ವಿಸ್ತರಣೆ?ಈಗಾಗಲೇ 15 ದಿನ ಗಡುವು ವಿಸ್ತರಣೆ ಮಾಡಿರುವ ರಾಜ್ಯ ಸರ್ಕಾರವೂ ಮತ್ತೊಂದು ಬಾರಿ ಗಡುವು ವಿಸ್ತರಣೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಮಾ.31ರ ವರೆಗೆ ಗಡುವು ವಿಸ್ತರಣೆ ಮಾಡಲಾಗುವುದು ಎನ್ನಲಾಗುತ್ತಿದೆ.20ರವರೆಗೆ ಕರವೇ ಗಡುವು
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯಾದ್ಯಂತ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ನಿಯಮ ಪಾಲಿಸದಿದ್ದರೆ ಮಾ.20ರಂದು ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಮಾ.13ರೊಳಗೆ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಅಳವಡಿಸುವಂತೆ ನೀಡಿದ್ದ ಗಡುವು ಬುಧವಾರ ಮುಕ್ತಾಯಗೊಂಡಿದೆ. ಆದರೂ ಮಾ.20ರವರೆಗೆ ಮತ್ತೊಂದು ಅವಕಾಶ ನೀಡಲಾಗುವುದು. ಅಷ್ಟರೊಳಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಾರ-ವ್ಯವಹಾರ ನಡೆಸುತ್ತಿರುವವರು ಕನ್ನಡದಲ್ಲಿ ನಾಮಫಲಕ ಹಾಕಬೇಕು. ಇಲ್ಲದಿದ್ದರೆ, ಮುಂದಿನ ಅನಾಹುತಕ್ಕೆ ಅಂಗಡಿ, ಮಾಲ್, ಕಂಪನಿ, ಕಾರ್ಖಾನೆಗಳು ಸೇರಿದಂತೆ ಇತರೆ ಮಳಿಗೆಗಳ ಮಾಲೀಕರೇ ಕಾರಣವಾಗಬೇಕಾಗುತ್ತದೆ ಎಂದರು.ಕನ್ನಡ ನೆಲದಲ್ಲಿ ಉದ್ಯಮ ಮಾಡುವವರು, ಇಲ್ಲಿ ಬದುಕು ಕಟ್ಟಿಕೊಂಡಿರುವವರು ಇಲ್ಲಿನ ಸಾರ್ವಭೌಮ ಭಾಷೆಯಾದ ಕನ್ನಡ ಬಳಸಬೇಕು. ವ್ಯಾಪಾರ ವ್ಯವಹಾರ ಮಾಡುವವರಿಗೆ ಬೇಡ ಎಂದು ಹೇಳುತ್ತಿಲ್ಲ. ಆದರೆ, ತಮ್ಮ ವಹಿವಾಟಿನಲ್ಲಿ ಈ ನೆಲದ ಭಾಷೆಯನ್ನು ಬಳಸಿ ಎಂದು ಹೇಳುತ್ತಿದ್ದೇವೆ. ಅದು ತಪ್ಪು ಎಂದು ಹೇಳುವುದಾದರೆ, ನಿಮ್ಮ ಅಗತ್ಯ ನಮಗಿಲ್ಲ ಎಂದು ಹೇಳುತ್ತೇವೆ ಎಂದು ತೀಕ್ಷ್ಮವಾಗಿ ಎಚ್ಚರಿಸಿದರು.
ಈಗಾಗಲೇ ಬದಲಾಗದ ಉಳಿದ ಎಲ್ಲ ನಾಮಫಲಕಗಳು ಕನ್ನಡೀಕರಣ ಆಗಲೇಬೇಕು. ಆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿ ಜಿಲ್ಲೆಯಲ್ಲೂ ತೀವ್ರತರವಾದ ಹೋರಾಟ ಕೈಗೊಳ್ಳಲಿದ್ದು, ಅನ್ಯಭಾಷಾ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಿದೆ ಎಂದರು.