ಸಾರಾಂಶ
ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ಕುಟುಂಬದ ಹಾಗೂ ದೇಶದ ಏಳಿಗೆಗೆ ಮಹಿಳೆಯರು ಸಶಕ್ತರಾಗಬೇಕು ಎಂದು ರಬಕವಿ ಬನಹಟ್ಟಿ ನಗರಸಭೆ ಪೌರಾಯುಕ್ತ ಜಗದೀಶ ಈಟಿ ಹೇಳಿದರು.ನಗರಸಭೆ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಸಾಧಕ ಮಹಿಳಾ ಪೌರ ಕಾರ್ಮಿಕರಿಗೆ ಸತ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಮಹಿಳಾ ದಿನವನ್ನು ಮಾ.೮ ರಂದು ಆಚರಿಸುವುದು ಏಕೆ ಎಂಬ ಪ್ರಶ್ನೆಗೆ ಸೃಷ್ಠಿಯ ಅನುಪಮ ಕೊಡುಗೆ ಮಹಿಳೆಯಾಗಿದ್ದು, ಮಾತೃತ್ವ, ಕುಟುಂಬದ ಹೊಣೆಗಾರಿಕೆ ಮತ್ತು ಎಲ್ಲ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯುರ ನಿಸ್ವಾರ್ಥ ಸೇವೆಗೆ ವರ್ಷವು ನೆನಪು ಮಾಡುವುದು ಒಂದು ಜವಾಬ್ದಾರಿಯಾಗಿದೆ ಎಂದರು.
ಸಮಾರಂಭದಲ್ಲಿ ನಗರಸಭೆ ಸದಸ್ಯೆ ಗೌರಿ ಮಿಳ್ಳಿ ಮಾತನಾಡಿ, ಜಗತ್ತಿನ ಎಲ್ಲ ದೇಶಗಳು ಸಹ ಅಭಿವೃದ್ಧಿ ಪಥದಲ್ಲಿ ತಾವು ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತಿವೆ. ಈ ಸಂದರ್ಭದಲ್ಲಿ ತಂತ್ರಜ್ಞಾನ, ಆವಿಷ್ಕಾರಗಳೊಂದಿಗೆ ಅನ್ಯಗ್ರಹದಲ್ಲಿ ವಾಸಿಸಲು ಯೋಗ್ಯ ಸ್ಥಳವನ್ನು ಹುಡುಕುತ್ತಿರುವ ಪ್ರಯತ್ನಗಳ ಸಂದರ್ಭದಲ್ಲಿ ಇಂದು ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ನಮಗೆ ಮೀಸಲಿರಿಸಲಾಗಿದೆ ಎಂದರು.ನಗರಸಭೆ ಹಿರಿಯ ಆರೋಗ್ಯ ಅಧಿಕಾರಿ ಶೋಭಾ ಹೊಸಮನಿ ಮಾತನಾಡಿ, ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಸಂಭ್ರಮಿಸಲಾಗುತ್ತಿದೆ. ೧೯೧೧ ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯ, ಜಮರ್ನಿ, ಸ್ವಜರ್‌ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನಾಚರಣೆ ಆಚರಿಸಲು ಆರಂಭಿಸಿದರು. ನಂತರ ಅಮೆರಿಕ, ಬ್ರಿಟನ್‌ಗಳು ಸೇರಿದಂತೆ ಹಲವು ದೇಶಗಳಲ್ಲಿನ ಸಮಾಜವಾದಿ ಪಕ್ಷಗಳು ಹೆಚ್ಚು ಪ್ರಚಾರ ಮಾಡುವ ಮೂಲಕ ಇಂದು ಬಹು ಸಂಖ್ಯಾತ ದೇಶಗಳಲ್ಲಿ ವಿಶೇಷ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದರು.
ಸಮಾರಂಭದಲ್ಲಿ ೫ ಮಹಿಳಾ ಪೌರ ಕಾರ್ಮಿಕರಿಗೆ ಸತ್ಕರಿಸಲಾಯಿತು. ಶಿವಾನಂದ ಬುದ್ನಿ, ಯಲ್ಲಪ್ಪ ಕಟಗಿ, ಶಶಿಕಲಾ ಸಾರವಾಡ, ಜಯಶ್ರೀ ಬಾಗೇವಾಡಿ, ದೀಪಾ ಕೊಣ್ಣೂರ, ಅಶೋಕ ಬೋಸ್ಲೆ, ಸಂಗೀತಾ ಕೋಳಿ, ರವಿ ಕೋರ್ತಿ, ಮುತ್ತು ಚೌಡಕಿ, ವೈಶಾಲಿ ಹಿಪ್ಪರಗಿ, ವಸಂತ ಪವಾರ, ಮುಖೇಶ ಬನಹಟ್ಟಿ ಸೇರಿದಂತೆ ಅನೇಕರಿದ್ದರು.