ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಕಂಡಕ್ಟರ್ ಓಡಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮೂವರು ಶಿಕ್ಷಕರು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ಬುಧವಾರ ಒಡೆಯರಪಾಳ್ಯ ಸಮೀಪ ನಡೆದಿದೆ. ಬಸ್‌ನಲ್ಲಿದ್ದ 30 ಮಂದಿ ಪ್ರಯಾಣಿಕರಲ್ಲಿ ಶಿಕ್ಷಕರೇ ಹೆಚ್ಚು ಮಂದಿ ಇದ್ದರು. ಅದೃಷ್ಟವಶಾತ್ 6-7 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ ಶಿಕ್ಷಕಿಯರಾದ ನಂದಿನಿ, ಸುಧಾರಾಣಿ, ದಿವ್ಯ ರಾಣಿ ಹಾಗೂ ಒಡೆಯರಪಾಳ್ಯ ಗುರುಸ್ವಾಮಿ ಗಾಯಗೊಂಡಿದ್ದಾರೆ. ಹನೂರು ತಾಲೂಕಿನ ಲೊಕ್ಕನಹಳ್ಳಿ ಮಾರ್ಗವಾಗಿ ಒಡೆಯರ್ ಪಾಳ್ಯ ಕಡೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕರಿಕಲ್ಲು ಗುಡ್ಡ ಆನೆ ಕಾರಿಡಾರ್ ರಸ್ತೆಗೆ ಇಳಿದಿದೆ. ಕೂಡಲೇ ಸಮೀಪದಲ್ಲಿದ್ದ ಸ್ಥಳೀಯರು ದೌಡಾಯಿಸಿ ಬಸ್ಸಿನಲ್ಲಿದ್ದವರನ್ನು ಹೊರಕ್ಕೆ ಕರೆತಂದಿದ್ದು ಕಿಟಕಿ ಬಳಿ ಕುಳಿತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು, ಕಂಡಕ್ಟರ್ ಬಸ್ ಅನ್ನು ಓಡಿಸುತ್ತಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಂದು ಚಾಲಕನ ಬದಲು ನಿರ್ವಾಹಕ ಬಸ್ ಚಾಲನೆ ಮಾಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆರೋಪಿಸಿದ್ದಾರೆ.ಪೊಲೀಸ್ ಠಾಣೆಗೆ ದೂರು:
ಒಡೆಯರ್ ಪಾಳ್ಯ ಗ್ರಾಮದ ಗುರುಸ್ವಾಮಿ ಗಾಯಗೊಂಡವರು ವ್ಯಾಪಾರಸ್ಥರಾಗಿದ್ದು, ಬೆಳಿಗ್ಗೆ ಕೊಳ್ಳೇಗಾಲಕ್ಕೆ ಹೋಗಿ ಕೊಳ್ಳೇಗಾಲದಿಂದ ಒಡೆಯರ್ ಪಾಳ್ಯಕ್ಕೆ ಸದರಿ ಅಪಘಾತಕ್ಕೊಳಗಾದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಲಗಡೆಗೆ ಪಲ್ಟಿಯಾಗಿದೆ ಈ ಸಂಬಂಧ ಶಿಕ್ಷಕಿಯರು ಹಾಗೂ ನಾನು ಗಾಯಗೊಂಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಹನೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕ್ರಮಕ್ಕೆ ನಾಗರಿಕರ ಒತ್ತಾಯ:ಇಂದು ನಡೆದ ಅವಘಡದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ಬಸ್ಸನ್ನು ಕಂಡಕ್ಟರ್ ಚಾಲನೆ ಮಾಡುತ್ತಿದ್ದರು ಎನ್ನಲಾಗಿತ್ತು. ಈ ಬಗ್ಗೆ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಇಂದು ನಡೆದಿರುವ ಘಟನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರು, ಗಾಯಗೊಂಡಿರುವ ವ್ಯಕ್ತಿಗಳಿಗೆ ಸೂಕ್ತ ಪರಿಹಾರ ನೀಡಬೇಕು. ಇಂತಹ ಘಟನೆಗಳು ನಡೆದಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬರುವುದಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ಪ್ರಯಾಣಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.