ಕೊಳಗೇರಿಗಳಿಗೆ ಅಸಮರ್ಪಕ ನೀರು: ಆಕ್ರೋಶ

| Published : Mar 14 2024, 02:03 AM IST

ಸಾರಾಂಶ

ನಗರದಲ್ಲಿ ನೀರಿನ ಸಮಸ್ಯೆ ಇರುವ ಕೊಳಗೇರಿ, ಬಡವರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಜಲಮಂಡಳಿ ಅಳವಡಿಸಿರುವ ಸಿಂಟೆಕ್ಸ್‌ ನೀರಿನ ಟ್ಯಾಂಕರ್‌ಗಳಿಗೆ ಸಮರ್ಪಕ ನೀರಿನ ಪೂರೈಕೆಯನ್ನೇ ಮಾಡುತ್ತಿಲ್ಲ ಎಂಬ ದೂರು ಹಲವು ಕಡೆಗಳಿಂದ ಕೇಳಿ ಬರುತ್ತಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ನೀರಿನ ಸಮಸ್ಯೆ ಇರುವ ಕೊಳಗೇರಿ, ಬಡವರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಜಲಮಂಡಳಿ ಅಳವಡಿಸಿರುವ ಸಿಂಟೆಕ್ಸ್‌ ನೀರಿನ ಟ್ಯಾಂಕರ್‌ಗಳಿಗೆ ಸಮರ್ಪಕ ನೀರಿನ ಪೂರೈಕೆಯನ್ನೇ ಮಾಡುತ್ತಿಲ್ಲ ಎಂಬ ದೂರು ಹಲವು ಕಡೆಗಳಿಂದ ಕೇಳಿ ಬರುತ್ತಿವೆ.

ಕಾವೇರಿ ನೀರು ಪೂರೈಕೆ ಮಾಡುತ್ತಿರುವ ಪ್ರದೇಶದಲ್ಲಿ ನೀರಿನ ಸಮಸ್ಯೆ ಇರುವ 257 ಪ್ರದೇಶಗಳಿಗೆ ಸುಮಾರು 400ಕ್ಕೂ ಅಧಿಕ ಸಿಂಟೆಕ್ಸ್‌ ಅಳವಡಿಸಿ ಜಲಮಂಡಳಿ ಟ್ಯಾಂಕರ್‌ ಮೂಲಕ ಪ್ರತಿ ದಿನ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿತ್ತು. ಆದರೆ ಸಿಂಟೆಕ್ಸ್‌ ಅಳವಡಿಸಿದ್ದರೂ ನೀರು ಪೂರೈಕೆ ಮಾಡುತ್ತಿಲ್ಲ ಎಂಬ ದೂರು ಅನೇಕ ಕಡೆ ವ್ಯಕ್ತವಾಗುತ್ತಿದೆ.

ಬಂಡೇಪಾಳ್ಯದ ಅಂಬೇಡ್ಕರ್ ನಗರದಲ್ಲಿ ಸಿಂಟೆಕ್ಸ್‌ ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ 500ಕ್ಕೂ ಅಧಿಕ ಮನೆಗಳಿಗೆ 20 ಸಾವಿರ ಲೀಟರ್‌ ನೀರು ಪೂರೈಕೆ ಮಾಡಿದರೂ ಅರ್ಧ ಗಂಟೆಯಲ್ಲಿ ನೀರು ಖಾಲಿಯಾಗುತ್ತಿದೆ. ಜಲಮಂಡಳಿ ಪೂರೈಕೆ ಮಾಡುತ್ತಿರುವ ನೀರು ಸಾಕಾಗುತ್ತಿಲ್ಲ. ಹಾಗಾಗಿ ಸಿಂಟೆಕ್ಸ್‌ ಅಳವಡಿಕೆ ಮಾಡಿ ನೀರು ಪೂರೈಕೆ ಮಾಡದೇ ಕಾವೇರಿ ನೀರು ಪೂರೈಕೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಟ್ಯಾಂಕರ್‌ ಮಾಲೀಕರ ವಿರುದ್ಧ ಜನರ ಆಕ್ರೋಶ:

ಸರ್ಕಾರ ನಿಗದಿ ಪಡಿಸಿದ ಟ್ಯಾಂಕರ್‌ ನೀರಿನ ದರಕ್ಕಿಂತ ಹೆಚ್ಚಿನ ಮೊತ್ತ ಕೇಳುತ್ತಿರುವ ಟ್ಯಾಂಕರ್‌ ಮಾಲೀಕರ ವಿರುದ್ಧ ಗಾರವೇಬಾವಿಪಾಳ್ಯದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ 6 ಸಾವಿರ ಲೀಟರ್‌ ಟ್ಯಾಂಕರ್‌ಗೆ ₹600, 8 ಸಾವಿರ ಲೀಟರ್‌ ನೀರಿಗೆ ₹700 ಹಾಗೂ 12 ಸಾವಿರ ಲೀಟರ್‌ ಟ್ಯಾಂಕರ್‌ಗೆ ₹1000 ನಿಗದಿ ಪಡಿಸಿದೆ. ಆದರೆ, ಟ್ಯಾಂಕರ್‌ ಮಾಲೀಕರು, ಈ ಮೊತ್ತಕ್ಕೆ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ. 4 ಸಾವಿರ ಲೀಟರ್‌ ನೀರಿಗೆ ₹800 ಕೊಟ್ಟರೆ ಮಾತ್ರ ನೀರು ಪೂರೈಕೆ ಮಾಡಲಾಗುವುದು . ಕಡಿಮೆ ಬೆಲೆ ನೀರು ಪೂರೈಕೆ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.