ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸತೀಶ ಕೊಬ್ಬಯ್ಯನವರ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಬಾರದು.
ಕುಂದಗೋಳ:
ಮೂವರು ಫಲಾನುಭವಿಗಳು ಜೀವಂತವಾಗಿದ್ದರೂ ತಾಂತ್ರಿಕ ದೋಷದಿಂದಾಗಿ ಮರಣ ಹೊಂದಿರುವುದಾಗಿ ನಮೂದಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿಲ್ಲ ಎಂದು ತಿಳಿಸಿರುವ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಉಮಾ ಬಳ್ಳೂಳ್ಳಿ, ತಕ್ಷಣ ಸಮಸ್ಯೆ ನಿವಾರಿಸಲಾಗುವುದು ಎಂದು ಹೇಳಿದ್ದಾರೆ.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗುರುವಾರ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸತೀಶ ಕೊಬ್ಬಯ್ಯನವರ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಬಾರದು. ಈ ಕುರಿತು ಈಗಾಗಲೇ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ಅಗತ್ಯ ಕ್ರಮಕೈಗೊಳ್ಳಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಈ ವರೆಗೆ ಫಲಾನುಭವಿಗಳಿಗೆ 29 ತಿಂಗಳ ಹಣ ಸಂದಾಯವಾಗಿದೆ. ಈ ಯೋಜನೆ ಆರಂಭದಿಂದ ಮೇ 6ರ ವರೆಗೆ ಒಟ್ಟು 992 ಫಲಾನುಭವಿಗಳು ಮರಣ ಹೊಂದಿದ್ದು, ಸಂಬಂಧಪಟ್ಟ ಫಲಾನುಭವಿಗಳನ್ನು ಪರಿಶೀಲಿಸಿ ಯೋಜನೆಯ ಲಾಭವನ್ನು ಆ ಕುಟುಂಬಕ್ಕೆ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.ಹೆಸ್ಕಾಂ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವರದಿ ಮಂಡಿಸುವ ವೇಳೆ ಗ್ಯಾರಂಟಿ ಸಮಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬ ಬಾಗಿವೆ. ತಂತಿಗಳು ಜೋತುಬಿದ್ದು ತೀವ್ರ ಸಮಸ್ಯೆಯಾಗುತ್ತಿದೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಮಧ್ಯಪ್ರವೇಶಿಸಿದ ಅಧ್ಯಕ್ಷ ಕೊಬ್ಬಯ್ಯನವರು, ಅಧಿಕಾರಿಗಳು ಸಭೆಯ ಗಾಂಭೀರತೆ ಅರಿತುಕೊಳ್ಳಿ. ಸಭೆಯಲ್ಲಿ ಚರ್ಚಿಸುವ, ಸದಸ್ಯರು ನೀಡುವ ಸಲಹೆ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲೆಲ್ಲಿ ಸಮಸ್ಯೆಯಾಗಿದೆಯೋ ಆದಷ್ಟು ಬೇಗನೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು,ಸಭೆಯಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವನಿಧಿ ಪ್ರಗತಿ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ತಾಪಂ ಇಒ ರೇಖಾ ಗಡ್ಡದವರ, ಗ್ಯಾರಂಟಿ ಸಮಿತಿ ಸದಸ್ಯರಾದ ಯಲ್ಲಪ್ಪಗೌಡ ಪಾಟೀಲ, ಅಡಿವೆಪ್ಪ ಹೆಬಸೂರ, ಗೌಡಪ್ಪ ಪಾಣಿಗಟ್ಟಿ, ಸೋಮಲಿಂಗಪ್ಪ ಹೊಸಮನಿ, ಗಿರೀಶ ಮುದಿಗೌಡ್ರ, ಶಂಕ್ರಪ್ಪ ಹಡಪದ, ಯಲ್ಲಪ್ಪ ಶಿಂಗಣ್ಣವರ, ಸಚಿನ ಪೂಜಾರ, ವೆಂಕಪ್ಪ ಸಂಶಿ, ಬಸವಣ್ಣೆವ್ವ ಸೂಳಿಕೇರಿ, ಗೀತಾ ಕೋಟಿಗೌಡ್ರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.