ಗರ್ಭಿಣಿ ಸಾವು, ಕುಟುಂಬಸ್ಥರ ಆಕ್ರೋಶ

| Published : May 30 2024, 12:55 AM IST

ಸಾರಾಂಶ

ಆಸ್ಪತ್ರೆಯಲ್ಲಿ ಹೆರಿಗೆಯ ವೇಳೆಯಲ್ಲಿ ಆರೋಗ್ಯ ಏರುಪೇರಾಗಿ ಗರ್ಭಿಣಿ ಸಾವನ್ನಪ್ಪಿದ್ದರಿಂದ ಖಾಸಗಿ ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಆಸ್ಪತ್ರೆಯಲ್ಲಿ ಹೆರಿಗೆಯ ವೇಳೆಯಲ್ಲಿ ಆರೋಗ್ಯ ಏರುಪೇರಾಗಿ ಗರ್ಭಿಣಿ ಸಾವನ್ನಪ್ಪಿದ್ದರಿಂದ ಖಾಸಗಿ ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದ ವೇಳೆ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಕೊಪ್ಪಳ ಜಿಲ್ಲಾಸ್ಪತ್ರೆಯ ತಾಯಿ, ಮಕ್ಕಳ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಹೆರಿಗೆ ನೋವಿನಲ್ಲೇ ಸಾವನ್ನಪ್ಪಿದ್ದಾಳೆ.

ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಪ್ರತಿಭಾ ಹಿರೇಮಠ (25) ಮೃತರು.

ಪ್ರತಿಭಾ ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿರುವ ತವರು ಮನೆಗೆ ಹೆರಿಗೆಗಾಗಿ ಬಂದಿದ್ದಳು. ನೋವು ಕಾಣಿಸಿಕೊಂಡಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗೋವನಕೊಪ್ಪ ಆಸ್ಪತ್ರೆ ವೈದ್ಯ ಡಾ. ಮಹೇಶ ಮೇಲೆ ನಿರ್ಲಕ್ಷ್ಯದ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.

ಹೆರಿಗೆ ನೋವು ತಿನ್ನುವಾಗಲೇ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ. ಹಾಗೆ, ಹೆಚ್ಚಿನ ಚಿಕಿತ್ಸೆಯ ನೆಪ ಮಾಡಿ, ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿರುವಾಗಲೇ ಗರ್ಭಿಣಿ ಸಾವನ್ನಪ್ಪಿದ್ದಾಳೆ.

ಮೂವರ ನಿಗೂಢ ಸಾವು ಪ್ರಕರಣ ಭೇದಿಸಿದ ಪೊಲೀಸರು:ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ, ಮಗಳು ಮತ್ತು ಮೊಮ್ಮಗ ನಿಗೂಢ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುವುದು ಋಜುವಾತು ಆಗಿದ್ದು, ಕೊಲೆಯ ಆರೋಪಿಯನ್ನು ಬಂಧಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಅವರು, ಆರೋಪಿ ಹೊಸಪೇಟೆಯ ನಿವಾಸಿ ಆಸೀಫ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ರಾಜೇಶ್ವರಿ, ವಸಂತ, ಸಾಯಿಧರ್ಮ ತೇಜ ಕೊಲೆಯಾಗಿದ್ದರು. ತಾನು ಪ್ರೀತಿಸಿದಾಕೆಯನ್ನು ತನ್ನ ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಆಸೀಫ್ ತಪ್ಪೊಪ್ಪಿಕೊಂಡಿದ್ದಾನೆ ಎಂದರು.ಆಗಿದ್ದೇನೆ?:

ವಸಂತ ಆಂಧ್ರ ಮೂಲದವರು. ಆಕೆಗೆ ಮದುವೆಯಾಗಿದ್ದು, ಪತಿಯೊಂದಿಗೆ ಮನಸ್ತಾಪದಿಂದ ನಾಲ್ಕು ವರ್ಷಗಳ ಹಿಂದೆಯೇ ಪತಿಯನ್ನು ತೊರೆದು ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮಕ್ಕೆ ಬಂದು ವಾಸಿಸುತ್ತಿದ್ದಳು.ಈ ವೇಳೆಯಲ್ಲಿ ಹೊಸಪೇಟೆಯ, ಈಗಾಗಲೇ ಮದುವೆಯಾಗಿದ್ದ ಆರೀಫ್‌ನೊಂದಿಗೆ ಪ್ರೇಮಾಂಕುರವಾಗಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಾಳೆ. ಇದು ಆರೀಫ್ ಅವರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ನಡುವೆ ಆರೀಫ್‌ನ ಸಹೋದರ ಆಸೀಫ್‌ನೂ ಸಹ ಈಕೆಯನ್ನು ಪ್ರೀತಿಸಿ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆರೀಫ್‌- ವಸಂತ ಮದುವೆ ಆಗಿದ್ದು ಆಸೀಫ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನು ಮೀರಿ ವಸಂತ ಆರೀಫ್‌ನೊಂದಿಗೆ ಮುದುವೆಯಾಗಿದ್ದರಿಂದ ಆಸೀಫ್ ರೊಚ್ಚಿಗೆದ್ದು ಕೊಲೆ ಮಾಡಿದ್ದಾನೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.