ಸಾರಾಂಶ
ಹೊನ್ನಾವರ: ಕಾಸರಕೋಡ ಟೊಂಕದಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ಬಲವಂತದಿಂದ ಅನುಷ್ಠಾನಕ್ಕೆ ತರಲು ದಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ 45ಕ್ಕೂ ಹೆಚ್ಚು ರೌಡಿಗಳನ್ನು ಬಳಸಿಕೊಂಡು ಸ್ಥಳೀಯರಿಗೆ ಪ್ರಾಣ ಬೆದರಿಕೆ ಹಾಕಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಸಚಿವ ಮಂಕಾಳ ವೈದ್ಯ ಗುರುವಾರ ಹೊನ್ನಾವರದಲ್ಲಿ ಕೆಡಿಪಿ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಎಚ್‌ಪಿಪಿಎಲ್ ಕಂಪನಿ ಕಾಸರಕೋಡಿನಲ್ಲಿ ಜೆಸಿಬಿ ಯಂತ್ರ ಬಳಸಿ ಕಡಲತೀರದಲ್ಲಿ ರಸ್ತೆ ಕಾಮಗಾರಿ ನಡೆಸಲು ಯತ್ನಿಸಿದೆ ಎನ್ನಲಾಗಿದೆ.
ಈ ವಿಚಾರವನ್ನು ಮೀನುಗಾರರ ಪ್ರಮುಖರು ಸಚಿವರ ಮಧ್ಯಪ್ರವೇಶಕ್ಕೆ ಆಗ್ರಹಪಡಿಸುತ್ತಿದ್ದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರನ್ನು ಹೊನ್ನಾವರಕ್ಕೆ ಕರೆಸಿಕೊಂಡು ಮೀನುಗಾರರ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಸ್ಥಳೀಯ ಮೀನುಗಾರರ ಮೇಲೆ ದೌರ್ಜನ್ಯ ನಡೆಸಿ ರಸ್ತೆ ಕಾಮಗಾರಿ ನಡೆಸಲು ಮುಂದಾದವರನ್ನು ಕೂಡಲೇ ಬಂಧಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡು ಮೀನುಗಾರರರಿಗೆ ಅಗತ್ಯ ರಕ್ಷಣೆ ಒದಗಿಸುವಂತೆ ಸಚಿವರು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.
ಬಂದರು ಯೋಜನೆಗೆ ಸಂಬಂಧಿಸಿ ಯಾವುದೇ ರಸ್ತೆ ಕಾಮಗಾರಿ ನಡೆಸದಂತೆ ಬಂದರು ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದ್ದಾರೆ. ಗುರುವಾರ ಸಂಜೆ ವೇಳೆಗೆ ಸಾವಿರಾರು ಮೀನುಗಾರರು ಸೇರಿ ರಸ್ತೆ ಕಾಮಗಾರಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತಾದರೂ ಮುಖಂಡರ ಸಮಯ ಪ್ರಜ್ಞೆಯಿಂದ ಪರಿಸ್ಥಿತಿ ತಿಳಿಯಾದ ವರದಿಯಾಗಿದೆ.
ಇನ್ನೂ ಬುಧವಾರ ಸಂಜೆ ಕಾಸರಕೋಡಿನಲ್ಲಿ ಮೀನುಗಾರರ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಸಿಪ್ರ ಕಾರ್ಯಾಚರಣೆ ನಡೆಸಿದ ಹೊನ್ನಾವರ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಅವರನ್ನು ವೈದ್ಯಕೀಯ ತಪಾಸಣೆಗೆಂದು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸಂದರ್ಭದಲ್ಲಿ ರೋಗಿಯೊಬ್ಬರನ್ನು ನೋಡಲು ಬಂದಿದ್ದ ಸಂದೇಶ ಸುಬ್ರಾಯ ತಾಂಡೇಲ್ ಎನ್ನುವ ಮೀನುಗಾರನ ಮೇಲೆ ಪೊಲೀಸರ ಎದುರಿನಲ್ಲಿಯೇ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ನಡೆದಿದ್ದು ವಾಣಿಜ್ಯ ಬಂದರು ವಿರೋಧಿ ಹೋರಾಟ ಇನ್ನಷ್ಟು ತೀವ್ರತೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.