ಸಾರಾಂಶ
ತುರುವೇಕೆರೆ : ತನ್ನ ಮಗಳ ಮದುವೆಗಾಗಿ ಮಾಡಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೇ ಮಹಿಳೆಯೋರ್ವರು ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದವರನ್ನು ದಂಡಿನಶಿವರ ಗ್ರಾಮದ ಎಚ್.ಡಿ.ಮಂಜುಳಾ (೫೦) ಎಂದು ಗುರುತಿಸಲಾಗಿದೆ. ಮೃತೆ ಮಂಜುಳಾರವರು ತಮ್ಮ ಮಗಳ ಮದುವೆಗೆಂದು ಕಳೆದ ಮೂರು ತಿಂಗಳ ಹಿಂದೆ ವಿವಿಧ ಸ್ವ ಸಹಾಯ ಸಂಘಗಳು ಹಾಗು ಫೈನಾನ್ಸರ್ ಗಳಿಂದ ಅಧಿಕ ಬಡ್ಡಿಗೆ ಸಾಲವನ್ನು ಪಡೆದು ಇದ್ದ ಒಬ್ಬಳೇ ಮಗಳ ಮದುವೆ ಮಾಡಿದ್ದರೆಂದು ಹೇಳಲಾಗಿದೆ. ದಿನ ಕಳೆದಂತೆ ಸಾಲ ನೀಡಿದವರು ಬಡ್ಡಿ ಹಾಗೂ ಅಸಲು ಕಟ್ಟುವಂತೆ ಪದೇಪದೇ ಪೀಡಿಸುತ್ತಿದ್ದರಿಂದ ಸಾಲ ತೀರಿಸಲು ಆಕೆಯ ಬಳಿ ಯಾವುದೇ ಆದಾಯವಿಲ್ಲದ ಕಾರಣ ಮನನೊಂದು ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುಳಾರವರ ಪತಿ ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಮರಣ ಹೊಂದಿದ್ದರು. ಮಂಜುಳಾರವರು ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರೆಂದು ಹೇಳಲಾಗಿದೆ. ಸಿಪಿಐ ಲೋಹಿತ್, ದಂಡಿನಶಿವರ ಪಿಎಸ್‌ಐ ಚಿತ್ತರಂಜನ್ ಅವರುಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.