ಗೋಲ್ಡನ್‌ ಸಮಯದಲ್ಲೇ ಭವಿಷ್ಯದ ಬಗ್ಗೆ ನಿರ್ಧರಿಸಿ

| Published : Nov 28 2024, 12:32 AM IST

ಗೋಲ್ಡನ್‌ ಸಮಯದಲ್ಲೇ ಭವಿಷ್ಯದ ಬಗ್ಗೆ ನಿರ್ಧರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿದ್ಯಾರ್ಥಿಗಳ ಕಾಲೇಜು ಜೀವನ ಗೋಲ್ಡನ್ ಸಮಯವಾಗಿದ್ದು, ಈಗಲೇ ಪ್ರತಿಯೊಬ್ಬರೂ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯಾರ್ಥಿಗಳ ಕಾಲೇಜು ಜೀವನ ಗೋಲ್ಡನ್ ಸಮಯವಾಗಿದ್ದು, ಈಗಲೇ ಪ್ರತಿಯೊಬ್ಬರೂ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.

ನಗರದ ತೊರವಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 19ನೇ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ ಶಕ್ತಿ ಸಂಭ್ರಮ-2024 ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ನನ್ನನ್ನು ಸ್ತ್ರೀವಾದಿ ಎನ್ನುತ್ತಾರೆ. ನಾನು ಅಭಿಮಾನದಿಂದ ಹೇಳುತ್ತೇನೆ ಸ್ತ್ರೀವಾದಿ ಎಂದು. ಇಂದು ಮಹಿಳೆ ಸಾಧನೆ ಮಾಡದಿರುವ ಯಾವ ಕ್ಷೇತ್ರವೂ ಉಳಿದಿಲ್ಲ. ಸ್ಪರ್ಧಾತ್ಮಕತೆ ಹೆಚ್ಚಾಗಿದೆ. ಒಂದು ಕಾಲದಲ್ಲಿ ಹೆಣ್ಣು ಹುಟ್ಟಿದರೆ ತೊಟ್ಟಿಲು ತೂಗಲು ಮಾತ್ರ ಎನ್ನುವಂತಿತ್ತು. ಆದರೆ ಇದೀಗ ಹೆಣ್ಣು ಹುಟ್ಟಿದರೆ ಇಡಿ ಮನೆಯವರೆಲ್ಲ ಸಂಭ್ರಮಿಸುವ ಕಾಲ ಬಂದಿದೆ ಎಂದು ಹೇಳಿದರು.

ನಾನು ಖಾನಾಪುರ ಕ್ಷೇತ್ರದ ಚಿಕ್ಕ ಹಳ್ಳಿಯಿಂದ ಬಂದವಳು. ವಿದ್ಯಾರ್ಥಿ ಜೀವನದಲ್ಲಿ ನಾನು ಸಹ ಕೆಂಪು ಬಸ್‌ನಲ್ಲಿ ಹೋಗಿ ಶಾಲೆ ಕಲಿತವಳು. ಏನಾದರೂ ಸಾಧಿಸಬೇಕು ಎಂದು ಆಗಲೇ ನನಗೆ ಇದ್ದ ಛಲ ಇಂದಿಗೂ ಇದೆ. ನಾನು ಕಷ್ಟ ಬಂದಾಗ ಸ್ವೀಕರಿಸಿ ಮುನ್ನಡೆದಿದ್ದು, ಯಾವತ್ತೂ ಹಿಂದೆ ಸರಿದಿಲ್ಲ. ರೈತನ ಮಗಳಾಗಿ, ತಾಯಿಯಾಗಿ ಸಾಕಷ್ಟು ಸಾಧನೆ ಮಾಡಿದ್ದೇನೆ. ನಾಡಿನ ಏಳೂವರೆ ಕೋಟಿ ಜನರಲ್ಲಿ ಒಬ್ಬಳೆ ಮಹಿಳೆ ಮಂತ್ರಿಯಾಗಿದ್ದು ಕೂಡ ಒಂದು ಸಾಧನೆ ಎಂದು ನನಗನಿಸುತ್ತಿದೆ ಎಂದರು.

ಜೀವನದಲ್ಲಿ ಗುರಿ ಇರಬೇಕು, ಅದನ್ನು ಸಾಧಿಸಲು ಹೋರಾಟ ಮಾಡಬೇಕು. ಅಲ್ಲದೆ 2013ರಲ್ಲಿ ಮೌಂಟ್ ಎವರೆಸ್ಟ್ ಏರಿದ ಮೊದಲ ವಿಕಲಚೇತನ ಮಹಿಳಾ ಸಾಧಕಿ ಅರುಣಿಮಾ ಸಿನ್ಹಾ ಹಾಗೂ ಕೌಟುಂಬಿಕ ಸಂಕಷ್ಟದಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ಕ್ವಿನ್ಸ್ ಬೇಕರಿ ನಡೆಸುವ ಮೂಲಕ ವಾರ್ಷಿಕ ₹ 80ಕೋಟಿ ಆದಾಯ ಗಳಿಸುತ್ತಿರುವ ಸುಪ್ರಿಯಾ ರಾಯ್ ಅವರ ಬಗ್ಗೆ ಉದಾಹರಿಸಿ, ಮಹಿಳೆ ಎಂದರೆ ಸಾಧನೆ, ಸಾಧನೆ ಎಂದರೆ ಮಹಿಳೆ ಎಂಬಂತಾಗಬೇಕು. ಜಾತಿ, ಕುಲ, ಧರ್ಮವನ್ನು ಬಿಟ್ಟು ಎಲ್ಲರೂ ಮಹಿಳೆಯರು ಒಂದಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಬದುಕು ನಾವು ತಿಳಿದುಕೊಂಡಷ್ಟು ಸುಲಭವಲ್ಲ. ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಕೆಂಪು ಬಸ್‌ನಲ್ಲಿ ಓಡಾಡಿ ಇದೀಗ ಕೆಂಪು ಗೂಟದ ಕಾರಿನಲ್ಲಿ ಓಡಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಅದರ ಹಿಂದೆ ಛಲ ಹಾಗೂ ನಿರಂತರ ಶ್ರಮವೇ ಕಾರಣವಾಗಿದೆ. ಅವರಂತೆ ತಾವೆಲ್ಲರೂ ಛಲ ಬೆಳೆಸಿಕೊಳ್ಳಬೇಕು ಎಂದರು.

ವಿವಿಯಲ್ಲಿ ಹಾಡಿದ ಮಹಿಳಾ ಗೀತೆ, ಎಲ್ಲ ಮಹಿಳಾ ಕಾರ್ಯಕ್ರಮಗಳಲ್ಲೂ ಮೊಳಗಬೇಕು. ಮಕ್ಕಳಿಗಾಗಿ ಶಂ.ಗು.ಬಿರಾದಾರ ಬರೆದಿರುವ ನಾವು ಎಳೆಯರು, ನಾವು ಗೆಳೆಯರು ಎಂಬ ಗೀತೆಯನ್ನು ಮಕ್ಕಳ ಗೀತೆ ಘೋಷಣೆ ಮಾಡಬೇಕು ಎಂದರು. ಅಲ್ಲದೆ ಮಹಿಳಾ ವಿವಿಗೆ ₹ 100 ಕೋಟಿ ಅನುದಾನ ಕೊಡುಸುವಂತೆ ಸಚಿವೆಗೆ ಮನವಿ ಮಾಡಿದರು.

ವಿವಿ ಕುಲಪತಿ ಪ್ರೊ.ತುಳಸಿಮಾಲಾ ಮಾತನಾಡಿ, ಶಿಕ್ಷಣ, ಕೌಶಲ್ಯದ ಜೊತೆಗೆ ನಿಮ್ಮ ವೃತ್ತಿಪರ ಜೀವನ ಕಟ್ಟಿಕೊಳ್ಳುವುದು ಬಹಳ‌ಮುಖ್ಯ. ಪ್ರತಿ ವಿದ್ಯಾರ್ಥಿಗಳು ವೃತ್ತಿಪರತೆಯನ್ನು ಅಳವಡಿಸಿಕೊಳ್ಳಬೇಕು. ಎಲ್ಲರೂ ಉದ್ಯೋಗ ಕೇಳುವಂತಾಗಬಾರದು, ಉದ್ಯೋಗ ಕೊಡುವಂತಾಗಬೇಕು. ಉದ್ಯಮಶೀಲತೆ, ಕೌಶಲ್ಯತೆಯಿಂದ ಜೀವನ ಕಟ್ಟಿಕೊಳ್ಳಬಹುದು. ಮೂರು ದಿನಗಳ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿನಿಯರು ಕೌಶಲ್ಯಗಳನ್ನು ಅಭಿವ್ಯಕ್ತಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಸೇರಿ ಗಣ್ಯರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಆರಂಭದಲ್ಲಿ ನಾಡಗೀತೆ ಹಾಗೂ ಮಹಿಳಾಗೀತೆ ಮೊಳಗಿದವು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೇ ವಿವಿಧ ಕಲಾತಂಡಗಳ ವೇಷ ಧರಿಸಿ, ವಾದ್ಯಮೇಳಗಳ ಮೂಲಕ ಗಣ್ಯರನ್ನು ಸ್ವಾಗತಿಸಿದರು.

ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ಎಚ್.ಎಂ.ಚಂದ್ರಶೇಖರ, ಮೌಲ್ಯಮಾಪನ ಕುಲಸಚಿವೆ ಶಾಂತಾದೇವಿ, ತೊರವಿ ಗ್ರಾಪಂ ಅಧ್ಯಕ್ಷೆ ಪದ್ಮಾಬಾಯಿ ನಡಗಡ್ಡಿ, ಸಿಂಡಿಕೇಟ್ ಸದಸ್ಯರು, ಪತ್ರಿಕೋದ್ಯಮ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ್ ಕಾಕಡೆ, ಪ್ರೊ.ಹನುಮಂತರಾಯ, ವಿವಿಧ ಅಂತರ್ ಮಹಿಳಾ ವಿದ್ಯಾಲಯಗಳ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು, ಸಿಬ್ಬಂದಿ ಉಪಸ್ಥಿತರಿದ್ದರು.----------------ಕೋಟ್‌....

ಎರಡೂ ಸದನದಲ್ಲಿ ಮಹಿಳಾ ಮೀಸಲು ಬಿಲ್‌ನ್ನು ಪಾಸ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾಕೆಂದರೆ ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರು ಮುನ್ನುಗ್ಗುವ ಕಾಲ ಬಂದಿದೆ. ಕಾರ್ಯಕ್ರಮದಲ್ಲಿ ನೆರೆದಿರುವ ನಿಮ್ಮಲ್ಲಿ ಕಡಿಮೆ ಎಂದರು 10 ಜನರು ಲಕ್ಷ್ಮೀ ಹೆಬ್ಬಾಳ್ಕರ ಆಗಬೇಕು ಎಂಬುದು ನನ್ನ ಆಸೆ.

- ಲಕ್ಷ್ಮೀ ಹೆಬ್ಬಾಳಕರ್‌, ಸಚಿವೆ