ಹೋರಾಟ ಐತಿಹಾಸಿಕವಾಗುವಷ್ಟು ಜನ ಸೇರಬೇಕು. ಅಹಿಂಸಾತ್ಮಕವಾಗಿ, ಶಾಂತಿಯಿಂದ ಹೋರಾಟ ನಡೆಸಬೇಕು. ಯಾವುದೇ ಕಾರಣಕ್ಕೂ ಹೋರಾಟದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಆಗದಂತೆ ಪ್ರತಿಯೊಬ್ಬರೂ ನಿಗಾ ವಹಿಸಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ನಿರ್ದೇಶಿಸಿದ್ದಾರೆ.
ಯಲ್ಲಾಪುರ: ನದಿ ತಿರುವು ಯೋಜನೆಗೆ ವಿರೋಧ ವ್ಯಕ್ತಪಡಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಶಾಂತಿಯುತವಾಗಿ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಹೇಳಿದರು.
ಮಂಗಳವಾರ ಪಟ್ಟಣದ ಅಡಿಕೆ ಭವನದಲ್ಲಿ ನ. ೩ರಂದು ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅಘನಾಶಿನಿ- ವರದಾ- ಬೇಡ್ತಿ ನದಿಗಳ ನೀರನ್ನು ಹಾವೇರಿ, ಗದಗ ಜಿಲ್ಲೆಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡಿ ಒಯ್ಯುವುದಕ್ಕೆ ಮುಂದಾಗಿರುವುದು ಅವೈಜ್ಞಾನಿಕ. ಈ ಕುರಿತು ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಹೋರಾಟ ನಡೆಸಿದ್ದೇವೆ. ಆದರೂ ಸ್ಪಂದಿಸಿಲ್ಲ ಎಂದರು.ಈ ಹೋರಾಟ ಐತಿಹಾಸಿಕವಾಗುವಷ್ಟು ಜನ ಸೇರಬೇಕು. ಅಹಿಂಸಾತ್ಮಕವಾಗಿ, ಶಾಂತಿಯಿಂದ ಹೋರಾಟ ನಡೆಸಬೇಕು. ಯಾವುದೇ ಕಾರಣಕ್ಕೂ ಹೋರಾಟದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಆಗದಂತೆ ಪ್ರತಿಯೊಬ್ಬರೂ ನಿಗಾ ವಹಿಸಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ನಿರ್ದೇಶಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಈ ಹೋರಾಟ ತಾಲೂಕಿನ, ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಪೂಜ್ಯರ ಸಲಹೆಯಂತೆ ಅಹಿಂಸಾತ್ಮಕ ಚಳವಳಿಯಾಗಿದೆ ಎಂದರು.ಗೊಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ನಮ್ಮ ಹೋರಾಟದಲ್ಲಿ ಕಠಿಣತ್ವ ಇರಬೇಕು. ಹಾಗಂತ ಎಂದೂ ಶಾಂತಿಗೆ ಭಂಗವಾಗದೇ ಹೋರಾಟ ನಡೆಸಬೇಕು ಎಂದರು.
ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ೨೦ ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ. ಅದಕ್ಕಾಗಿ ನಾಲ್ಕೈದು ಆ್ಯಂಬುಲೆನ್ಸ್, ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲೇಬೇಕಾಗುತ್ತದೆ. ಐದು- ಆರು ಗಂಟೆ ಮಹಿಳೆಯರು ಇರುವುದರಿಂದ ಅನಿವಾರ್ಯವಾಗಿ ಈ ವ್ಯವಸ್ಥೆಯನ್ನು ಮಾಡಲೇಬೇಕು. ಭಾರೀ ಬಿಸಿಲಿರುವುದರಿಂದ ವೈದ್ಯಕೀಯ ವ್ಯವಸ್ಥೆಯೂ ಅಗತ್ಯವಾಗಿದೆ ಎಂದರು.ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಪಟ್ಟಣದ ಎಲ್ಲ ವ್ಯಾಪಾರಸ್ಥರು ಸ್ವಯಂಸ್ಫೂರ್ತಿಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸಬೇಕು. ಯಾವುದೇ ಅಹಿತಕರ ಘಟನೆ ಆಗದಂತೆ ಪ್ರತಿಯೊಬ್ಬರೂ ಗಮನಹರಿಸಬೇಕು. ಇದು ನಮ್ಮ ಜಿಲ್ಲೆಯ, ತಾಲೂಕಿನ ಭವಿಷ್ಯತ್ತಿನ ಪ್ರಶ್ನೆಯಾಗಿದೆ ಎಂದರು.
ಹೋರಾಟ ಸಂಚಾಲಕರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ರಾಘವೇಂದ್ರ ಭಟ್ಟ ಹಾಸಣಗಿ, ವಿನಾಯಕ ಪೈ, ನರಸಿಂಹ ಸಾತೊಡ್ಡಿ, ಎಂ.ಡಿ. ಮುಲ್ಲಾ, ಪ್ರಸಾದ ಹೆಗಡೆ ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರವಿ ಬದ್ದಿ, ಡಿ.ಜಿ. ಹೆಗಡೆ, ಗಜಾನನ ನಾಯ್ಕ, ಸುರೇಶ ಪಾಟಣಕರ, ವಿ.ಟಿ. ಹೆಗಡೆ, ಭಾಸ್ಕರ ಸಿದ್ದಿ, ರವಿ ದೇವಾಡಿಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯಲ್ಲಾಪುರದ ಯೋಜನಾಧಿಕಾರಿ ಸಂತೋಷ ಎ.ಎಸ್. ಸೇರಿದಂತೆ ಬಹುಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.